ಕೈರೋ, ಏ.27: ಅಮೆರಿಕ ತನ್ನ ಮೇಲೆ ವಿಧಿಸಿರುವ ನಿರ್ಬಂಧವನ್ನು ತೆರವುಗೊಳಿಸಿ, ಯುದ್ಧವನ್ನು ಅಂತ್ಯಗೊಳಿಸಿದರೆ ಹಾರ್ಮುಝ್ ಜಲಸಂಧಿಯ ಮೇಲಿನ ತನ್ನ ನಿಯಂತ್ರಣವನ್ನು ಸಡಿಲಿಸಲು ಇರಾನ್ ಸಿದ್ಧವಿದೆ ಎಂದು ಪ್ರಾದೇಶಿಕ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಸ್ತಾವವನ್ನು ಪಾಕಿಸ್ತಾನದ ಮೂಲಕ ಅಮೆರಿಕಕ್ಕೆ ರವಾನಿಸಲಾಗಿದ್ದು, ಇರಾನ್‌ನ ಅಣು ಕಾರ್ಯಕ್ರಮದ ಕುರಿತು ನಡೆಯಬೇಕಿದ್ದ ಚರ್ಚೆಯನ್ನು ಮುಂದೂಡುವ ಸೂಚನೆಯನ್ನು ಒಳಗೊಂಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಪ್ರಸ್ತಾವವನ್ನು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ ಆದರೂ ವೈಟ್ ಹೌಸ್ ಪ್ರೆಸ್ ಕಾರ್ಯದರ್ಶಿ ಕ್ಯಾರೋಲೈನ್ ಲೀವಿಟ್, ಟ್ರಂಪ್ ರಾಷ್ಟ್ರೀಯ ಭದ್ರತಾ ತಂಡ ಈ ಪ್ರಸ್ತಾವದ ಕುರಿತು ಚರ್ಚೆ ನಡೆಸಿದೆ ಎಂದು ತಿಳಿಸಿದರು. ಆದರೆ ಹೆಚ್ಚಿನ ವಿವರಗಳನ್ನು ನೀಡಲಿಲ್ಲ.
ಪ್ರಸ್ತುತ ಯುದ್ಧ ವಿರಾಮ ಅಸ್ತಿತ್ವದಲ್ಲಿದ್ದರೂ, ಹಾರ್ಮುಝ್ ಜಲಸಂಧಿ ವಿಷಯದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮುಂದುವರಿದಿದೆ. ಸಾಮಾನ್ಯವಾಗಿ ಜಗತ್ತಿನ ವ್ಯಾಪಾರವಾಗುವ ತೈಲ ಮತ್ತು ಅನಿಲದ ಸುಮಾರು ಐದನೇ ಭಾಗ ಈ ಜಲಸಂಧಿ ಮೂಲಕ ಸಾಗುತ್ತದೆ.
ಅಮೆರಿಕ ವಿಧಿಸಿರುವ ನಿರ್ಬಂಧವು ಇರಾನ್ ತೈಲ ಮಾರಾಟವನ್ನು ತಡೆಯುವ ಉದ್ದೇಶ ಹೊಂದಿದ್ದು, ಇದರಿಂದ ದೇಶದ ಪ್ರಮುಖ ಆದಾಯ ಮೂಲಕ್ಕೆ ಧಕ್ಕೆಯಾಗಿದೆ.ಇನ್ನೊಂದೆಡೆ, ಜಲಸಂಧಿ ಮುಚ್ಚಿದ ಪರಿಣಾಮ ಜಾಗತಿಕ ತೈಲ ಬೆಲೆಗಳು ಏರಿಕೆಯಾಗಿದ್ದು, ಟ್ರಂಪ್ ಸರ್ಕಾರಕ್ಕೂ ಒತ್ತಡ ಹೆಚ್ಚಾಗಿದೆ. ಮಧ್ಯಂತರ ಚುನಾವಣೆಗೆ ಮುನ್ನ ಪೆಟ್ರೋಲ್ ಬೆಲೆ ಏರಿಕೆಯಿಂದ ರಾಜಕೀಯ ಪರಿಣಾಮ ಉಂಟಾಗಿದೆ.
ಇದರಿಂದ ಅನೇಕ ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿದ್ದು, ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುವುದರಿಂದ ನಿರ್ಬಂಧವನ್ನು ತೆರವುಗೊಳಿಸುವಂತೆ ಒತ್ತಾಯಿಸಿವೆ. ರಸಗೊಬ್ಬರ, ಆಹಾರ ಸೇರಿದಂತೆ ಮೂಲಭೂತ ವಸ್ತುಗಳ ಬೆಲೆಗಳೂ ಏರಿಕೆಯಾಗಿವೆ.
ಈ ನಡುವೆ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಭೇಟಿ ಮಾಡಿದ್ದಾರೆ. ರಷ್ಯಾ ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದೆ.
ಇರಾನ್ ತನ್ನ ಅಣು ಕಾರ್ಯಕ್ರಮ ಶಾಂತಿಯುತವಾಗಿದೆಯೆಂದು ಹೇಳುತ್ತಿದ್ದರೆ, ಅಮೆರಿಕ ಅದನ್ನು ಅಣ್ವಸ್ತ್ರ ಅಭಿವೃದ್ಧಿಗೆ ಬಳಸಬಹುದು ಎಂಬ ಆತಂಕ ವ್ಯಕ್ತಪಡಿಸಿದೆ.
