Homeಇದೀಗ ಬಂದ ಸುದ್ದಿಟಾರ್ಗೆಟ್ 2028 : ಸಂಕಲ್ಪ ತೊಟ್ಟ ಕರ್ನಾಟಕ ಕಾಂಗ್ರೆಸ್

ಟಾರ್ಗೆಟ್ 2028 : ಸಂಕಲ್ಪ ತೊಟ್ಟ ಕರ್ನಾಟಕ ಕಾಂಗ್ರೆಸ್

ಬೆಂಗಳೂರು, ಜೂ. 21- ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವನ್ನು ಭವಿಷ್ಯದ ಚುನಾವಣೆಗಳನ್ನು ಗೆಲ್ಲುವ ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಸಂಕಲ್ಪ ಸ್ವೀಕಾರ ಸಮಾರಂಭವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ದೆಹಲಿಯಲ್ಲಿ ಅಖಿಲ ಭಾರತ ಕಾಂಗ್ರೆಸ್‌‍ಗೆ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಕಾಂಗ್ರೆಸ್‌‍ಗೆ ಬಿ.ಕೆ.ಹರಿಪ್ರಸಾದ್‌ ಅಧ್ಯಕ್ಷರಾಗಿರುವುದು, ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗಿರುವುದು ನಮೆಲ್ಲರ ಸೌಭಾಗ್ಯ ಎಂದರು.

ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆ ನಡೆಸಿ, ಕಾರ್ಯಕರ್ತರಿಗೆ ಅಧಿಕಾರ ದೊರಕಿಸುವುದು, 2028ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು, 2029ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ ಗಾಂಧಿಯವರನ್ನು ದೇಶದ ಪ್ರಧಾನಿ ಮಾಡುವುದು ಇಂದಿನ ಕಾರ್ಯಕ್ರಮದ ಸಂಕಲ್ಪವಾಗಿದೆ ಎಂದು ಹೇಳಿದರು.
ಸಚಿವ ಕೆ.ಜೆ.ಜಾರ್ಜ್‌ ಮಾತನಾಡಿ, ಕಾಂಗ್ರೆಸ್‌‍ ಪಕ್ಷಕ್ಕೆ ಲಕ್ಷಾಂತರ ಮಂದಿ ತ್ಯಾಗ ಬಲಿದಾನ ಮಾಡಿದ್ದಾರೆ. ಅವರಲ್ಲಿ ಬಹುತೇಕರಿಗೆ ಅಧಿಕಾರ ಸಿಕ್ಕಿಲ್ಲ, ನಮಂಥವರಿಗೆ ಮಾತ್ರ ಅವಕಾಶಗಳು ಸಿಕ್ಕಿವೆ. ಕಾಂಗ್ರೆಸ್‌‍ ಅಧಿಕಾರಕ್ಕೆ ಬಂದರೆ, ಬಡವರಿಗೆ, ಕಾರ್ಮಿಕರಿಗೆ, ರೈತರಿಗೆ, ಶೋಷಿತರಿಗೆ, ಹಿಂದುಳಿದವರಿಗೆ ಅನುಕೂಲವಾಗಲಿದೆ ಎಂದರು.

ಆರೋಗ್ಯ ಸಚಿವ ಯು.ಟಿ.ಖಾದರ್‌ ಮಾತನಾಡಿ, ಹಿಂದೆ ಯುಪಿಎ ಸರ್ಕಾರ ಜನ ಸಮಾನ್ಯರಿಗಾಗಿ ಉದ್ಯೋಗ ಖಾತ್ರಿ, ಆರೋಗ್ಯ ಕ್ಷೇತ್ರ ಸುಧಾರಣೆಗೆ ರಾಷ್ಟ್ರೀಯ ಆರೋಗ್ಯ ಮಿಷನ್‌, ಆಶಾ ಕಾರ್ಯಕರ್ತರ ನೇಮಕ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿತ್ತು. ಕಳೆದ 12 ವರ್ಷಗಳಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸಿರುವ ಎನ್‌ಡಿಎ ಸರ್ಕಾರ ಜನಸಾಮಾನ್ಯರಿಗಾಗಿ ಈ ರೀತಿ ಒಂದೇ ಒಂದು ಕಾರ್ಯಕ್ರಮ ಜಾರಿಗೊಳಿಸಿದ್ದರೆ ತೋರಿಸಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್‌‍ ಸರ್ಕಾರ ಸಿಇಟಿ ಪರೀಕ್ಷೆಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿತ್ತು. ಬಿಜೆಪಿ ಸರ್ಕಾರಕ್ಕೆ ಒಂದು ಪರೀಕ್ಷೆಯನ್ನು ಸರಿಯಾಗಿ ನಡೆಸುವ ಯೋಗ್ಯತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವೆ ಉಮಾಶ್ರಿ ಮಾತನಾಡಿ, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ ಮುಸ್ಲಿಮರ ಮತಗಳನ್ನಷ್ಟೇ ಅಲ್ಲ, ಕಾಂಗ್ರೆಸ್‌‍ ಪರವಾಗಿರುವ ಹಿಂದುಗಳ ಮತಗಳನ್ನು ಕೈಬಿಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು, ಮುಖಂಡರು ಎಚ್ಚರಿಕೆಯಿಂದ ಇರಬೇಕು ಎಂದು ಕರೆ ನೀಡಿದರು. ಮಾಜಿ ಸಚಿವ ಎಚ್‌.ಆಂಜನೇಯ ಮಾತನಾಡಿ, ಬಿ.ಕೆ.ಹರಿಪ್ರಸಾದ್‌ ಅವರ ಸಂಘಟನಾ ಚತುರತೆಯನ್ನು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಪಕ್ಷದ ಅಧ್ಯಕ್ಷರಾಗಿ ಯಶಸ್ವಿಯಾಗುವ ಮೂಲಕ ಮುಖ್ಯಮಂತ್ರಿಯಾಗಲಿ ಎಂದು ಹಾರೈಸಿದರು.

ಯುವ ಕಾಂಗ್ರೆಸ್‌‍ನ ಮಾಜಿ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌‍ ಮಾತನಾಡಿ, ಕಳೆದ 12 ವರ್ಷಗಳಲ್ಲಿ 89 ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಮೋದಿಯನ್ನು ಬಿಜೆಪಿಯವರು ವಿಶ್ವಗರು, ವಿವಿಧ ದೇಶಗಳ ಯುದ್ಧಗಳನ್ನೇ ನಿಲ್ಲಿಸಿಬಿಡುತ್ತಾರೆ ಎಂದು ಬಿಂಬಿಸುತ್ತಾರೆ. ಆದರೆ ಪ್ರೆಶ್ನೆಪತ್ರಿಕೆ ಸೋರಿಕೆಯನ್ನೇ ಮೋದಿಯವರಿಂದ ನಿಲ್ಲಿಸಲಾಗಿಲ್ಲ, ಕೇಂದ್ರ ಶೀಕ್ಷಣಾ ಸಚಿವ ಧರ್ಮೇಂದ್ರ ಪ್ರಧಾನ್‌ ಅವರಿಂದ ರಾಜೀನಾಮೆ ಪಡೆಯಲಾಗಿಲ್ಲ. ಇದಕ್ಕೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌‍ ಬೋಗ್ಯದ ಅವಧಿ ಮುಗಿದಿದೆ. ಅದು ಮತ್ತೆ ನವೀಕರಣ ಆಗುವುದಿಲ್ಲ ಎಂದು ಲೇವಡಿ ಮಾಡಿದರು.

RELATED ARTICLES
spot_img

Latest News