Homeರಾಜಕೀಯಸಚಿವ ಸ್ಥಾನ ಸಿಗದಿದ್ದಕ್ಕೆ ಯಾವುದೇ ಅಸಮಾಧಾನ ಇಲ್ಲ : ಗುಬ್ಬಿ ಶಾಸಕ ಎಸ್‌‍.ಆರ್‌. ಶ್ರೀನಿವಾಸ್‌‍

ಸಚಿವ ಸ್ಥಾನ ಸಿಗದಿದ್ದಕ್ಕೆ ಯಾವುದೇ ಅಸಮಾಧಾನ ಇಲ್ಲ : ಗುಬ್ಬಿ ಶಾಸಕ ಎಸ್‌‍.ಆರ್‌. ಶ್ರೀನಿವಾಸ್‌‍

No resentment over not getting ministerial berth: Gubbi MLA S.R. Srinivas

ತುಮಕೂರು, ಆ.5- ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿರುವ ಗುಬ್ಬಿ ಶಾಸಕ ಎಸ್‌‍.ಆರ್‌. ಶ್ರೀನಿವಾಸ್‌‍, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಮೊಂದಿಗೆ ದೂರವಾಣಿ ಮೂಲಕ ಮಾತನಾಡಿರುವುದು ನಿಜ. ಆದರೆ ತಮಗೆ ಯಾವುದೇ ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದರು.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಿನ್ನೆ ಕರೆ ಮಾಡಿ ಮಾತನಾಡಿದರು. ಏನು ಮಾತನಾಡಿದರು ಎಂಬುದನ್ನು ಸಂಪೂರ್ಣವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ನನಗೆ ಯಾವುದೇ ಅಸಮಾಧಾನವಿಲ್ಲ ಎಂದು ಹೇಳಿದರು.

ನಾನು ಕೆಎಸ್‌‍ಆರ್‌ಟಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೆ. ಆದರೆ ಮುಖ್ಯಮಂತ್ರಿ ಅವರು ಎಲ್ಲ ನಿಗಮ-ಮಂಡಳಿಗಳ ಅಧ್ಯಕ್ಷರ ಸ್ಥಾನಗಳನ್ನು ಸಾಮೂಹಿಕವಾಗಿ ಮರುಪರಿಶೀಲಿಸಲಾಗುವುದು ಎಂದು ತಿಳಿಸಿರುವುದರಿಂದ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ತೀರ್ಮಾನಿಸಿದ್ದೇನೆ ಎಂದು ತಿಳಿಸಿದರು.

ಸಚಿವರಾದ ಚೆಲುವರಾಯಸ್ವಾಮಿ, ಎಚ್‌.ಸಿ.ಬಾಲಕೃಷ್ಣ ಸೇರಿದಂತೆ ಹಲವರು ಕರೆ ಮಾಡಿ ನನ್ನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ನಾನು ಅಸಮಾಧಾನಗೊಂಡಿದ್ದೇನೆ ಎಂದು ಅವರು ಭಾವಿಸಿದ್ದರು. ಆದರೆ ನನಗೆ ಯಾವುದೇ ಬೇಸರವಿಲ್ಲ ಎಂದು ಶ್ರೀನಿವಾಸ್‌‍ ಹೇಳಿದರು.
ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ನೀಡದಿರುವುದು ಸರಿಯಾದ ನಿರ್ಧಾರವಲ್ಲ. ನಾವು ಶೇ.33ರಷ್ಟು ಮಹಿಳಾ ಮೀಸಲಾತಿಯನ್ನು ಬೆಂಬಲಿಸುವವರು. ಆದರೆ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡದಿದ್ದರೆ ಅದು ಹೇಗೆ ನ್ಯಾಯವಾಗುತ್ತದೆ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಗಳ ಬಳಿ ಇನ್ನೂ ಒಂದು ಸಚಿವ ಸ್ಥಾನ ಖಾಲಿ ಇದ್ದರೆ, ಅದನ್ನು ಮಹಿಳಾ ಶಾಸಕರಿಗೆ ನೀಡಬೇಕು. ಇನ್ನೂ ಕಾಲ ಮಿಂಚಿಲ್ಲ ಎಂದು ಅವರು ಒತ್ತಾಯಿಸಿದರು.
ಇದೇ ವೇಳೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ ಶ್ರೀನಿವಾಸ್‌‍, ನನಗೆ ಸಚಿವ ಸ್ಥಾನ ಸಿಗುವುದಿಲ್ಲ ಎಂದು ನಾನು ಮನೆಯಲ್ಲೇ ಇದ್ದಾಗ ಕುಮಾರಸ್ವಾಮಿ ಅವರೇ ಕರೆ ಮಾಡಿ ಸಚಿವರನ್ನಾಗಿ ಮಾಡಿದ್ದರು. ಆ ಉಪಕಾರವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.

ದೇವೇಗೌಡರು ಕುಂಚಿಟಿಗ ಸಮುದಾಯದ ಕೋಟಾದಲ್ಲಿ ಮತ್ತೊಬ್ಬರಿಗೆ ಅವಕಾಶ ನೀಡಲು ಯೋಚಿಸಿದ್ದರು. ಆದರೆ ಕುಮಾರಸ್ವಾಮಿ ಅವರು ನನ್ನನ್ನು ಕರೆದು ಸಚಿವ ಸ್ಥಾನ ನೀಡಿದ್ದರು. ನಮಿಬ್ಬರ ನಡುವೆ ಒಂದು ವಿಚಾರದಲ್ಲಿ ಮಾತ್ರ ಭಿನ್ನಾಭಿಪ್ರಾಯ ಉಂಟಾಗಿತ್ತು. ಅದನ್ನು ಹೊರತುಪಡಿಸಿ ಯಾವುದೇ ವೈಯಕ್ತಿಕ ವೈಮನಸ್ಸಿಲ್ಲ ಎಂದು ಹೇಳಿದರು.

ಈ ಹಿಂದೆ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಜೆಡಿಎಸ್‌‍ ತೊರೆದಿದ್ದ ಎಸ್‌‍.ಆರ್‌. ಶ್ರೀನಿವಾಸ್‌‍ ಅವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಅವರು ಮತ್ತೆ ಜೆಡಿಎಸ್‌‍ ಕಡೆ ಮುಖ ಮಾಡಲಿದ್ದಾರೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಮೂಡಿದೆ. ಆದರೆ ಈ ಕುರಿತು ಶ್ರೀನಿವಾಸ್‌‍ ಯಾವುದೇ ಸ್ಪಷ್ಟನೆ ನೀಡಿಲ್ಲ.

RELATED ARTICLES
spot_img

Latest News