ಬೆಂಗಳೂರು, ಮೇ 24 – ರಾಜ್ಯದಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆಗೆ ಮುನ್ನ ನಡೆದಿರುವ ಮ್ಯಾಪಿಂಗ್‌ನಲ್ಲಿ 75 ಲಕ್ಷ ಜನರನ್ನು ಹೊರಗಿಡಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಕುರಿತು ಸಮಗ್ರ ವಿಶ್ಲೇಷಣೆ ನಡೆಸಿದ ಅವರು, ಬಿಜೆಪಿ ಮತ್ತು ಚುನಾವಣಾ ಆಯೋಗದ ಜಂಟಿ ಸಹಯೋಗದಲ್ಲಿ 2028ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಜೂನ್ 20ರ ನಂತರ ಮತದಾರರ ಪಟ್ಟಿ ಪರಿಷ್ಕರಣೆಯಾಗಲಿದೆ. ಅದಕ್ಕೂ ಮುನ್ನ ನಡೆದಿರುವ ಮ್ಯಾಪಿಂಗ್‌ನಲ್ಲಿ ಭಾರಿ ಸಂಚು ನಡೆದಿದೆ. ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ 28 ಲಕ್ಷ ಮತದಾರರ ಪೈಕಿ 3.5 ಲಕ್ಷ ಮತದಾರರನ್ನು ಮ್ಯಾಪಿಂಗ್‌ನಿಂದ ಹೊರಗಿಡಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ 72 ಸಾವಿರ ಮತದಾರರನ್ನು, ನರಸಿಂಹರಾಜ ಕ್ಷೇತ್ರದಲ್ಲಿ 60 ಸಾವಿರ ಜನರನ್ನು ಹೊರಗಿಟ್ಟಿದ್ದಾರೆ. ನರಸಿಂಹರಾಜ ಕ್ಷೇತ್ರದಲ್ಲಿ ತನ್ವೀರ್ ಸೇಠ್ ಗೆಲ್ಲುತ್ತಿದ್ದಾರೆ. ಹೊರಗಿಟ್ಟಿರುವ 60 ಸಾವಿರ ಪೈಕಿ 36 ಸಾವಿರ ಮುಸ್ಲಿಂ ಮತದಾರರು ಸೇರಿದ್ದಾರೆ.
ಚಾಮರಾಜ ಕ್ಷೇತ್ರದಲ್ಲಿ 36 ಸಾವಿರ ಜನರನ್ನು ಹೊರಗಿಟ್ಟಿದ್ದಾರೆ. ಅದರಲ್ಲಿ 18 ಸಾವಿರ ಮುಸ್ಲಿಮರು. ಈ ಕ್ಷೇತ್ರದಲ್ಲಿ ಗೆಲುವಿನ ಅಂತರವೇ 4.5 ಸಾವಿರ ಎಂದು ಹೇಳಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ವರುಣಾ ಕ್ಷೇತ್ರದಲ್ಲಿ 23 ಸಾವಿರ ಮತದಾರರನ್ನು ಹೊರಗಿಡಲಾಗಿದೆ. ನಾವು ಇದನ್ನು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಸಮಕ್ಷಮದಲ್ಲಿ ಚರ್ಚಿಸಿದ್ದೇವೆ. ಸ್ವತಃ ಮುಖ್ಯಮಂತ್ರಿಯವರೇ ಚಿಂತೆಗೆ ಒಳಗಾಗಿದ್ದರು.
ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆದಿದೆ. ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ ಸಿಗಲಿಲ್ಲ. ಮತ್ತೆ ಮಧ್ಯಾಹ್ನ ಮೂರು ಗಂಟೆಗಳ ಕಾಲ ಚರ್ಚೆ ನಡೆಸಲಾಗಿದೆ. ಆಗಲೂ ಅಧಿಕಾರಿಗಳು ಅದೇ ಉತ್ತರ ನೀಡುತ್ತಿದ್ದರು. “ಮ್ಯಾಪಿಂಗ್‌ನಿಂದ ಕೈಬಿಟ್ಟವರನ್ನು ಮತ್ತೆ ಸೇರಿಸುತ್ತೇವೆ” ಎಂದು ಸಬೂಬು ಹೇಳಿದ್ದಾರೆ. ಯಾರನ್ನು ಕೈಬಿಡಲಾಗಿದೆ ಎಂಬ ಪಟ್ಟಿ ಕೊಡಲು ಸಿದ್ಧರಿಲ್ಲ. ಮತಗಟ್ಟೆ ಅಧಿಕಾರಿಗಳ ಬಳಿಯೇ ಮಾಹಿತಿ ಪಡೆಯಬೇಕಾಗಿದೆ ಎಂದು ದೂರಿದರು.
ನಾವು ಸಾಫ್ಟ್‌ವೇರ್ ಬಳಸಿ ವಿಶ್ಲೇಷಣೆ ನಡೆಸಿದಾಗ ಆಘಾತಕಾರಿ ಮಾಹಿತಿ ತಿಳಿದುಬಂದಿದೆ. ಕೈಬಿಟ್ಟವರ ಪೈಕಿ ಶೇ.90ರಷ್ಟು ಜನ ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಸಮುದಾಯಗಳಿಗೆ ಸೇರಿದ ಕಾಂಗ್ರೆಸ್ ಮತದಾರರಾಗಿದ್ದಾರೆ ಎಂದು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕರಿರುವ 97 ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಎಸ್‌ಐಆರ್ ನಡೆಸಲಾಗುತ್ತಿದೆ. ಮತಗಟ್ಟೆ ಏಜೆಂಟ್-1 ಆಗಿ ಸ್ಥಳೀಯ ಶಾಸಕರು ಅಥವಾ ಮಾಜಿ ಶಾಸಕರನ್ನು ರಾಜಕೀಯ ಪಕ್ಷಗಳು ನೇಮಿಸಬೇಕು. ಬೂತ್ ಮಟ್ಟದಲ್ಲಿ ಏಜೆಂಟ್-2 ಅನ್ನು ನೇಮಿಸಬೇಕಾಗಿದೆ.
ರಾಜ್ಯದಲ್ಲಿ 60 ಸಾವಿರ ಮತಗಟ್ಟೆಗಳಿವೆ. ಕಾಂಗ್ರೆಸ್‌ನಿಂದ ಕೇವಲ 28 ಸಾವಿರ ಏಜೆಂಟ್‌ಗಳ ಪಟ್ಟಿಗೆ ಮಾತ್ರ ಆಯೋಗ ಅನುಮತಿ ನೀಡಿದೆ. ಇನ್ನೂ 30 ಸಾವಿರ ಏಜೆಂಟ್-2 ಪಟ್ಟಿಗೆ ಅನುಮತಿ ನೀಡಿಲ್ಲ. ಬಿಎಲ್‌ಒಗಳ ಜೊತೆ ಬಿಎಲ್‌ಎಗಳು ಮನೆ ಮನೆಗೆ ತೆರಳಲು ಅವಕಾಶವಿದೆ. ಬಿಜೆಪಿ ಬೆಂಬಲಿತ ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಉತ್ತಮ ತರಬೇತಿ ನೀಡಲಾಗಿದೆ. ಪ್ರತಿಯೊಬ್ಬರ ಬಳಿಯೂ ಮತದಾರರ ಪಟ್ಟಿ ಇದೆ. ಯಾರು ಯಾವ ಪಕ್ಷದ ಮತದಾರರು ಎಂಬ ಮಾಹಿತಿ ಅವರ ಬಳಿ ಇದೆ.
ಬಿಎಲ್‌ಒಗಳ ಜೊತೆ ಸೇರಿ ಕಾಂಗ್ರೆಸ್ ಬೆಂಬಲಿತ ಮತದಾರರನ್ನು ಸುಲಭವಾಗಿ ಕೈಬಿಡುತ್ತಿದ್ದಾರೆ. ಬಿಎಲ್‌ಒಗಳು ಕಾಂಗ್ರೆಸ್ ಏಜೆಂಟ್‌ಗಳನ್ನು ಜೊತೆ ಕರೆದುಕೊಂಡು ಹೋಗುತ್ತಿಲ್ಲ ಎಂದು ದೂರಿದರು.
ರಾಜ್ಯ ಚುನಾವಣಾ ಆಯೋಗದ ಮುಖ್ಯಾಧಿಕಾರಿ ಅನೂಪ್ ಕುಮಾರ್ ಅವರು, “2002ರಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೆ ಮ್ಯಾಪಿಂಗ್ ಸುಲಭವಾಗುತ್ತದೆ. ಇಲ್ಲದಿದ್ದರೆ ತಂದೆ-ತಾತ ಯಾವ ಮತಗಟ್ಟೆಯಲ್ಲಿ ಮತ ಹಾಕಿದ್ದರು ಎಂಬ ಮಾಹಿತಿ ನೀಡಬೇಕು” ಎಂದು ಹೇಳಿದ್ದಾರೆ ಎಂದು ತಿಳಿಸಿದರು. “ನನ್ನ ಹೆಸರು ಮೊದಲು ಲಕ್ಷ್ಮಣ್ ಎಂದಿತ್ತು. ಈಗ ಎಂ. ಲಕ್ಷ್ಮಣ್ ಆಗಿದೆ. ತಂದೆ ನಿಧನರಾದ ಬಳಿಕ ‘ಲೇಟ್’ ಎಂದು ಸೇರಿಸಲಾಗಿದೆ. ಈ ಸಣ್ಣ ವ್ಯತ್ಯಾಸಕ್ಕೆ ಆರಂಭದಲ್ಲಿ ನನ್ನ ಹೆಸರು ಮ್ಯಾಪಿಂಗ್‌ನಲ್ಲಿ ಇರಲಿಲ್ಲ. ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿದ್ದ ಕಾರಣದಿಂದ ನಾನು ಸ್ವತಃ ಹೋಗಿ ಮ್ಯಾಪಿಂಗ್ ಮಾಡಿಸಿಕೊಂಡೆ. ಇಲ್ಲದಿದ್ದರೆ ನನ್ನ ಹೆಸರೂ ಕೈಬಿಡಲಾಗುತ್ತಿತ್ತು” ಎಂದು ಹೇಳಿದರು.
“ಅಪ್ಪ-ತಾತ ಎಲ್ಲೆಲ್ಲಿ ಮತ ಹಾಕಿದ್ದರು ಎಂಬ ದಾಖಲೆ ತರುವುದು ಸಾಧ್ಯವೇ? ಹೆಣ್ಣು ಮಕ್ಕಳಿಗೆ ಮದುವೆಯಾದ ಬಳಿಕ ಗಂಡನ ಹೆಸರು ಸೇರ್ಪಡೆಯಾಗುತ್ತದೆ. ಬಹುಶಃ ಅದಕ್ಕಾಗಿಯೇ ಮ್ಯಾಪಿಂಗ್ ಆಗುತ್ತಿಲ್ಲ” ಎಂದು ಪ್ರಶ್ನಿಸಿದರು.ಮುಂದಿನ ದಿನಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಸರ್ಕಾರಿ ಸೌಲಭ್ಯಗಳೂ ದೊರಕದ ಪರಿಸ್ಥಿತಿ ಬರಬಹುದು. ಪಶ್ಚಿಮ ಬಂಗಾಳದಲ್ಲೇ ಈಗಾಗಲೇ ಅಂತಹ ಕಾರ್ಯಾಚರಣೆಗಳು ಆರಂಭವಾಗಿವೆ ಎಂದು ಹೇಳಿದರು.
ಐಎಎಸ್ ಅಧಿಕಾರಿಗಳು ಕೇಂದ್ರ ಸರ್ಕಾರದ ನೌಕರರಂತೆ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆಯೋಗದ ಮಾತು ಕೇಳಿಕೊಂಡು ಮತದಾರರನ್ನು ಪಟ್ಟಿಯಿಂದ ಕೈಬಿಡುತ್ತಿದ್ದಾರೆ ಎಂದು ಆರೋಪಿಸಿದರು.1968, 1971, 1975 ಹಾಗೂ 2011 ಸೇರಿ ಐದು ಬಾರಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ನಡೆದಿದೆ. ಆಗೆಲ್ಲ ಕೈಬಿಟ್ಟವರನ್ನು ಮತ್ತೆ ಪಟ್ಟಿಗೆ ಸೇರಿಸಲಾಗುತ್ತಿತ್ತು. ಆದರೆ ಈ ಬಾರಿ ಮತದಾರರ ಸಂಖ್ಯೆಯನ್ನು ಕಡಿಮೆ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಶೇ.86ರಷ್ಟು ಮ್ಯಾಪಿಂಗ್ ಪೂರ್ಣಗೊಂಡಿದೆ. ಇದು ಅಪಾಯಕಾರಿ ಪ್ರಕ್ರಿಯೆ ಎಂದು ಹೇಳಿದರು.
