ಬೆಂಗಳೂರು, ಮೇ 24 – ಮುಂದಿನ ವಿಧಾನಸಭಾ ಚುನಾವಣೆ ಮತ್ತು ನಂತರದ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಚುನಾವಣಾ ಆಯೋಗ ಜೂನ್ 20ರಿಂದ ಆರಂಭಿಸಲಿರುವ ಮತದಾರರ ಪಟ್ಟಿ ತೀವ್ರ ವಿಶೇಷ ಪರಿಷ್ಕರಣೆಯ ಸಂದರ್ಭದಲ್ಲಿ ಜಾಗೃತರಾಗಿರುವಂತೆ ಕಾಂಗ್ರೆಸ್ ಪಕ್ಷ ತನ್ನ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಕಟ್ಟೆಚ್ಚರ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ದೇವನಹಳ್ಳಿಯ ಸಮೀಪದ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್ ಸಂಸದರು, ಮಾಜಿ ಸಂಸದರು, ಶಾಸಕರು, ಮಾಜಿ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ವಿಧಾನಪರಿಷತ್ ಸದಸ್ಯರು, ಕಳೆದ ಚುನಾವಣೆಗಳಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪರಾಜಿತ ಅಭ್ಯರ್ಥಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮಾಲೋಚನೆ ನಡೆಸಿದ್ದಾರೆ.
ಕೇಂದ್ರ ಚುನಾವಣಾ ಆಯೋಗ ನಡೆಸುವ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ, ಬಿಜೆಪಿಯೇತರ ಸರ್ಕಾರಗಳಿಗೆ ಮುಳುವಾಗುತ್ತಿದೆ. ಈ ಹಿನ್ನಲೆಯಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷ ಮುಂಚಿತವಾಗಿಯೇ ಎಚ್ಚೆತ್ತುಕೊಂಡಿದೆ.
ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಸ್‌ಐಆರ್ ಬಗ್ಗೆ ಸುದೀರ್ಘ ಚರ್ಚೆ ನಡೆದಿದ್ದು, ಸಚಿವರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಪಕ್ಷದ ವತಿಯಿಂದ ಕೆಲವು ನಿರ್ದೇಶನಗಳನ್ನು ನೀಡಲಾಗಿದೆ. ಉಳಿದಂತೆ ಶಾಸಕರು, ವಿಧಾನ ಪರಿಷತ್ ಸದಸ್ಯರ ಅಭಿಪ್ರಾಯಗಳನ್ನು ಸಂಗ್ರಹಿಸಿ ಕೆಲವು ನಿರ್ದೇಶನಗಳನ್ನು ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಮಹತ್ವದ ಸಭೆ ನಡೆಸುತ್ತಿದ್ದಾರೆ.
ಈ ಮೊದಲು ಬಿಹಾರದಲ್ಲಿ ಮೊದಲ ಹಂತದ ಮತದಾರರ ಪಟ್ಟಿ ಪರಿಷ್ಕರಣೆಯಾಗುವ ವೇಳೆ ಸುಮಾರು 47 ಲಕ್ಷ ಮತದಾರರನ್ನು ಕೈಬಿಡಲಾಗಿತ್ತು. ನಂತರದ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯನ್ನು ಮೀರಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೇರಿತ್ತು.
ಎರಡನೇ ಹಂತದ ಮತದಾರರ ಪಟ್ಟಿಯಲ್ಲಿ ಉತ್ತರ ಪ್ರದೇಶದಲ್ಲಿ 2.05 ಕೋಟಿ (ಶೇ.13.21), ಪಶ್ಚಿಮ ಬಂಗಾಳದಲ್ಲಿ 83.86 ಲಕ್ಷ (ಶೇ.20.9), ಗುಜರಾತ್‌ನಲ್ಲಿ 68 ಲಕ್ಷ (ಶೇ.14.5), ಮಧ್ಯಪ್ರದೇಶದಲ್ಲಿ 34.25 ಲಕ್ಷ (ಶೇ.5.96), ಛತ್ತೀಸ್‌ಗಢದಲ್ಲಿ 25 ಲಕ್ಷ (ಶೇ.11.8), ರಾಜಸ್ಥಾನದಲ್ಲಿ 31 ಲಕ್ಷ (ಶೇ.5.7), ತಮಿಳುನಾಡಿನಲ್ಲಿ 74 ಲಕ್ಷ (ಶೇ.11.5), ಕೇರಳದಲ್ಲಿ 9 ಲಕ್ಷ (ಶೇ.3.24), ಗೋವಾದಲ್ಲಿ 1.28 ಲಕ್ಷ (ಶೇ.10.8), ಪುದುಚೇರಿಯಲ್ಲಿ 77 ಸಾವಿರ (ಶೇ.7.54), ಅಂಡಮಾನ್-ನಿಕೋಬಾರ್‌ನಲ್ಲಿ 52 ಸಾವಿರ ಮತದಾರರನ್ನು ಕೈಬಿಡಲಾಗಿತ್ತು.
ಒಟ್ಟು 10 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 5.18 ಕೋಟಿ (ಶೇ.10.92) ಮತದಾರರನ್ನು ಕೈಬಿಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಭರ್ಜರಿ ಗೆಲುವಿಗೆ ಎಸ್‌ಐಆರ್ ಕಾರಣ ಎಂದು ಆರೋಪಿಸಲಾಗುತ್ತಿದೆ.
ಬಿಜೆಪಿಯೇತರ ಪಕ್ಷಗಳು ಎಸ್‌ಐಆರ್ ಅನ್ನು ತೀವ್ರವಾಗಿ ವಿರೋಧಿಸಿವೆ. ಅದರಲ್ಲೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಎಸ್‌ಐಆರ್‌ಗೆ ಸಂವಿಧಾನಾತ್ಮಕ ಆಧಾರ ಇರುವುದರಿಂದ ನ್ಯಾಯಾಲಯದಿಂದ ವಿಪಕ್ಷಗಳಿಗೆ ಯಾವುದೇ ನೆರವು ಸಿಗಲಿಲ್ಲ.
ಕೈಪಿಡಿಗೆ ಕಟ್ಟೆಚ್ಚರದ ಸೂಚನೆ:
ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ವಿಶ್ಲೇಷಣೆ ನಡೆದಿದ್ದು, ಅನೇಕ ಮಾರ್ಗಗಳ ಬಗ್ಗೆ ಚರ್ಚೆಗಳು ನಡೆದಿವೆ.
ಇಂದು ನಡೆಯುವ ಸಭೆಯಲ್ಲಿ ಪ್ರಮುಖವಾಗಿ ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ನಡೆಯುವ ಮತದಾರರ ಪಟ್ಟಿ ಪರಿಷ್ಕರಣೆ ಮೇಲೆ ತೀವ್ರ ನಿಗಾ ವಹಿಸಬೇಕು. ಕೇಂದ್ರ ಚುನಾವಣಾ ಆಯೋಗ ಬಿಎಲ್‌ಒಗಳನ್ನು ನೇಮಿಸಿದೆ. ಮತಗಟ್ಟೆ ಏಜೆಂಟರನ್ನು ನೇಮಿಸಲು ರಾಜಕೀಯ ಪಕ್ಷಗಳಿಂದ ಪಟ್ಟಿ ಪಡೆಯಲಾಗುತ್ತಿದೆ.
ಇದನ್ನು ಸದ್ಬಳಕೆ ಮಾಡಿಕೊಂಡು ಪ್ರತಿಯೊಂದು ಹಂತದಲ್ಲೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಪಕ್ಷದ ಮುಖಂಡರಿಗೆ ಸೂಚನೆ ನೀಡಿದ್ದಾರೆ.
ಮತಗಟ್ಟೆ ಏಜೆಂಟರನ್ನು ನೇಮಿಸುವಾಗ ಜಾಗ್ರತೆ ವಹಿಸಬೇಕು. ಅವರ ಹಿನ್ನೆಲೆಯನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು. ಈ ಮೊದಲು ಇತರ ಪಕ್ಷಗಳಲ್ಲಿ ಇದ್ದು, ಹೊಸದಾಗಿ ಕಾಂಗ್ರೆಸ್‌ಗೆ ಬರುವವರನ್ನು ಪರಿಗಣಿಸಬಾರದು. ಆರ್‌ಎಸ್‌ಎಸ್ ಸೇರಿದಂತೆ ಬಿಜೆಪಿ ಬೆಂಬಲಿತ ಸಂಘಟನೆಗಳ ಜೊತೆ ಗುರುತಿಸಿಕೊಂಡಿರುವವರು ಅಥವಾ ಆ ಸಂಘಟನೆಗಳ ಮಾಜಿ ಕಾರ್ಯಕರ್ತರು ನೇಮಕವಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಈ ಮೊದಲು ರಾಹುಲ್ ಗಾಂಧಿ ದೇಶಾದ್ಯಂತ ಮತದಾರರ ಪಟ್ಟಿಯಲ್ಲಿ ಅಕ್ರಮಗಳ ಆರೋಪ ಮಾಡಿದ್ದಾಗ, ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರವನ್ನು ಉಲ್ಲೇಖಿಸಿದ್ದರು. ಆ ವೇಳೆ ಕಾಂಗ್ರೆಸ್‌ನ ಸಚಿವರಾಗಿದ್ದ ಕೆ.ಎನ್. ರಾಜಣ್ಣ, ಪಕ್ಷದ ನಿರ್ಲಕ್ಷ್ಯವನ್ನು ಪ್ರಶ್ನಿಸಿದ್ದರು. ಮತದಾರರ ಪಟ್ಟಿ ಪರಿಷ್ಕರಣೆಯ ವೇಳೆ ಕಾಂಗ್ರೆಸ್ ಪಕ್ಷದಿಂದ ನೇಮಕವಾಗಿದ್ದ ಮತಗಟ್ಟೆ ಏಜೆಂಟರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ್ದರು. ನಂತರದ ಬೆಳವಣಿಗೆಯಲ್ಲಿ ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಲಾಗಿತ್ತು.
ಮುಂದೆ ಇದೇ ರೀತಿಯ ಸಮಸ್ಯೆಗಳು ಉಂಟಾಗಬಾರದು ಎಂಬ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ಈಗಲೇ ಎಚ್ಚೆತ್ತುಕೊಂಡಿದೆ.
