ನವದೆಹಲಿ,ಆ.12- ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಎದುರಾಗುವ ಸಂಕಷ್ಟವನ್ನು ಪರಿಹರಿಸಿಕೊಳ್ಳಲು ರಾಜ್ಯಸರ್ಕಾರ ಏಕೆ ಸಂಕಷ್ಟ ಸೂತ್ರಕ್ಕೆ ಒತ್ತಡ ಹಾಕಿಲ್ಲ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಡಬ್ಲ್ಯೂಆರ್ಸಿ ಮತ್ತು ಸಿಡಬ್ಲ್ಯೂಎಂಎ ಮತ್ತೆ ತಮಿಳುನಾಡಿಗೆ 15 ದಿನಗಳ ಕಾಲ ನಿತ್ಯ 1 ಟಿಎಂಸಿ ನೀರು ಹರಿಸುವಂತೆ ಆದೇಶ ನೀಡಿದೆ. ರಾಜ್ಯಸರ್ಕಾರ ಎಷ್ಟು ಬಾರಿ ಸಂಕಷ್ಟ ಸೂತ್ರಕ್ಕಾಗಿ ಒತ್ತಡ ಹೇರಿದೆ. ಮೇಕೆದಾಟು ಯೋಜನೆ ಜಪ ಮಾಡುತ್ತಾ ಕುಳಿತರೆ ಸಾಲದು ಎಂದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರವರು ಒಂದು ತಿಂಗಳಿನಿಂದ ಪದೇಪದೇ ದೆಹಲಿಗೆ ಬರುತ್ತಾರೆ. ಒಮೆಯಾದರೂ ಸಂಬಂಧಪಟ್ಟ ವಕೀಲರೊಂದಿಗೆ ಚರ್ಚೆ ನಡೆಸಿದ್ದಾರೆಯೇ? ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷದ ನಾಯಕರ ಮನೆಯ ಗೇಟ್ ತಟ್ಟಲು ದೆಹಲಿಗೆ ಮುಖ್ಯಮಂತ್ರಿ ಬರುತ್ತಿದ್ದಾರೆ. ರಾಜ್ಯದ ಜನರ ಹಿತಕ್ಕಿಂತ ಅವರಿಗೆ ಕುರ್ಚಿ ಉಳಿಸಿಕೊಳ್ಳುವುದೇ ಮುಖ್ಯವಾಗಿದೆ. ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಬಿಕ್ಕಟ್ಟು ಬಗೆಹರಿಸಿಕೊಳ್ಳಲು ಹೈಕಮಾಂಡ್ ಬಾಗಿಲು ತಟ್ಟಲು ದೆಹಲಿಗೆ ಬರುತ್ತಾರೆ ಎಂದು ಆರೋಪಿಸಿದರು.
ಆ.2 ರಂದು ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಯಲ್ಲೇ ಕಾವೇರಿ ಜಲಾನಯನ ಭಾಗದ ಜಲಾಶಯಗಳಿಗೆ ನೀರು ಬರುತ್ತಿದೆ ಎಂದು ಮೈ ಮರೆಯಬೇಡಿ, ಮುನ್ನೆಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದ್ದೆ. ಆದರೆ ಸರ್ಕಾರ ಬೀಸುವ ದೊಣ್ಣೆಯಿಂದ ಪಾರಾಗಿದ್ದೇವೆ ಎಂದು ತಾತ್ಸಾರ ಮಾಡಿದೆ. ಆಗಸ್ಟ್ ಅಂತ್ಯದಲ್ಲಿ ಸಮಸ್ಯೆ ಎದುರಾಗಲಿದೆ, ಮುನ್ನೆಚ್ಚರಿಕೆ ವಹಿಸಿ ಎಂಬ ಸಲಹೆಯನ್ನು ನೀಡಿದ್ದೆ ಎಂದರು.
ತಮಿಳುನಾಡು ಸರ್ಕಾರ ಕಬಿನಿ ಜಲಾಶಯದಿಂದ 25 ಸಾವಿರ ಕ್ಯೂಸೆಕ್್ಸ ನೀರು ಹರಿಸಿದರೂ ಅರ್ಜಿ ಹಾಕಿದೆ. ತಮಿಳುನಾಡಿನ ರೀತಿ ನಮ ರಾಜ್ಯ ಏಕೆ ಮಾಹಿತಿ ಆಧರಿಸಿ ಒತ್ತಡ ಹೇರುತ್ತಿಲ್ಲ? ಕಳೆದ ಮೂರು ವರ್ಷದಲ್ಲಿ ನೀರಾವರಿ ಸಚಿವರಾಗಿದ್ದ ಮುಖ್ಯಮಂತ್ರಿಯವರು ಏನು ಮಾಡಿದ್ದೀರಿ, 2018ರಲ್ಲೇ ಸುಪ್ರೀಂಕೋರ್ಟ್ ತೀರ್ಪು ಬಂದಿದೆ. 8 ವರ್ಷ ಕಳೆದಿದೆ. ಆದರೂ ಸಂಕಷ್ಟ ಸೂತ್ರಕ್ಕೆ ಒತ್ತಡ ತಂದಿಲ್ಲ ಎಂದು ಅವರು ವಾಗ್ದಾಳಿ ಮಾಡಿದರು.
ಮಾತೆತ್ತಿದರೆ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಾರೆ. ಒಂದು ವೇಳೆ ಮೇಕೆದಾಟಿಗೆ ಅನುಮತಿ ದೊರೆತರೂ ಅದು ಅನುಷ್ಠಾನವಾಗಲು ಎಷ್ಟು ವರ್ಷ ಬೇಕು? ಅರಣ್ಯದಲ್ಲಿರುವ ಕಾಡುಪ್ರಾಣಿಗಳನ್ನು ಎಲ್ಲಿಗೆ ಬಿಡುತ್ತೀರಿ? ಬೆಂಗಳೂರು ನಗರಕ್ಕೆ ಬಿಡುತ್ತೀರಾ? ಎಂದು ಪ್ರಶ್ನಿಸಿದರು.
ಬಿಡದಿ ಉಪನಗರ ಯೋಜನೆ ಅನುಷ್ಠಾನಕ್ಕೆ ತೋರುತ್ತಿರುವ ತರಾತುರಿ ನಾಡಿನ ಹಿತರಕ್ಷಣೆಗೆ ಇಲ್ಲ. ಎಐ ನಗರ ನಿರ್ಮಾಣ ಮಾಡುವುದಾಗಿ ಜಾಹೀರಾತು ನೀಡಲು ಸಮಯವಿದೆ.ಭಾರತ್ ಜೋಡೋ ಸಂಘ ರಚಿಸಿ ಒಂದೊಂದು ಸಂಘಕ್ಕೆ 10 ಲಕ್ಷ ರೂ. ನೀಡುತ್ತಾರಂತೆ. ಇದಕ್ಕೆ ಎಲ್ಲಿಂದ ಹಣ ಬರುತ್ತದೆ ಎಂದು ಪ್ರಶ್ನಿಸಿದ ಅವರು, ಕಾವೇರಿ ಜಲಾನಯನ ಭಾಗದಲ್ಲಿ ಬೆಳೆದಿದ್ದ ಬೆಳೆಯೂ ಹಾನಿಯಾಗಿದೆ. ಹೊಸದಾಗಿ ಬೆಳೆ ಹಾಕಲೂ ಆಗಿಲ್ಲ. ರಾಜಕೀಯ ಮಾಡಲು, ರೈತರ ಭೂಮಿ ಒಡೆಯಲು ಮಾತ್ರ ಪುರುಸೊತ್ತಿದೆ ಎಂದು ಅವರು ಆರೋಪಿಸಿದರು.
