Thursday, December 12, 2024
Homeರಾಷ್ಟ್ರೀಯ | Nationalಜಾರ್ಖಂಡ್‌ ಸಿಎಂ ಆಗಿ ಹೇಮಂತ್ ಸೊರೇನ್‌ ಇಂದು ಪ್ರಮಾಣ ವಚನ

ಜಾರ್ಖಂಡ್‌ ಸಿಎಂ ಆಗಿ ಹೇಮಂತ್ ಸೊರೇನ್‌ ಇಂದು ಪ್ರಮಾಣ ವಚನ

Hemant Soren to take oath as Jharkhand's 14th CM today

ರಾಂಚಿ,ನ.28- ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟವನ್ನು ಸತತ ಎರಡನೇ ಬಾರಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದ ಜೆಎಂಎಂ ಮುಖಂಡ ಹೇಮಂತ್ ಸೊರೆನ್‌ ಇಂದು 4ನೇ ಬಾರಿಗೆ ಜಾರ್ಖಂಡ್‌ನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ರಾಂಚಿಯ ಮೊರ್ಹಬಾದಿ ಮೈದಾನದಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ಜಾರ್ಖಂಡ್‌ ರಾಜ್ಯಪಾಲ ಸಂತೋಷ್‌ ಕುಮಾರ್‌ ಗಂಗ್ವಾರ್‌, 49 ವರ್ಷದ ಹೇಮಂತ್‌ ಸೊರೇನ್‌ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.

ಎಐಸಿಸಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಪ್ರತಿಪಕ್ಷ ನಾಯಕ ನಾಯಕ ರಾಹುಲ್‌ ಗಾಂಧಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್‌ ಸಂಗಾ, ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಮತ್ತು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಆರ್‌ಜೆಡಿಯ ತೇಜಸ್ವಿ ಯಾದವ್‌ ಸೇರಿದಂತೆ ಇಂಡಿಯಾ ಬಣದ ಹಿರಿಯ ನಾಯಕರು ಹೇಮಂತ್‌ ಸೊರೇನ್‌ ನೇತೃತ್ವದ ಸರ್ಕಾರದ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ ಹೇಮಂತ್‌ ಸೊರೇನ್‌ ಹೊಸ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಿಸಿದ್ದರು. ಹೇಮಂತ್‌ ಸೊರೇನ್‌ ಅವರ ಜೆಎಂಎಂ ನೇತೃತ್ವದ ಮೈತ್ರಿ ಶನಿವಾರ ಜಾರ್ಖಂಡ್‌ನಲ್ಲಿ ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿತು.

81 ಸದಸ್ಯ ಬಲದ ಅಸೆಂಬ್ಲಿಯಲ್ಲಿ 56 ಸ್ಥಾನಗಳನ್ನು ಗೆದ್ದುಕೊಂಡಿತು. ಆದರೆ, ಬಿಜೆಪಿ ನೇತೃತ್ವದ ಎನ್‌ಡಿಎ 24 ಸ್ಥಾನಗಳನ್ನು ಪಡೆದುಕೊಂಡಿತು. ಹೇಮಂತ್‌ ಸೊರೇನ್‌ ಅವರು ಬಿಜೆಪಿಯ ಗಮ್ಲಿಯೆಲ್‌ ಹೆಂಬೋಮ್‌ ಅವರನ್ನು 39,791 ಮತಗಳ ಅಂತರದಿಂದ ಸೋಲಿಸುವ ಮೂಲಕ ಬರ್ಹೈತ್‌ ಸ್ಥಾನವನ್ನು ಉಳಿಸಿಕೊಂಡರು.

ಜೆಎಂಎಂ 43 ಸ್ಥಾನಗಳಲ್ಲಿ ಸ್ಪರ್ಧಿಸಿತು ಮತ್ತು 34 ಸ್ಥಾನಗಳನ್ನು ಗೆದ್ದುಕೊಂಡಿತು. ಇದು ಪಕ್ಷದ ಇತಿಹಾಸದಲ್ಲಿಯೇ ಗರಿಷ್ಠ ಸ್ಥಾನ ಗಳಿಕೆಯಾಗಿದೆ. ಇಂಡಿಯಾ ಬ್ಲಾಕ್‌ನಲ್ಲಿ ಕಾಂಗ್ರೆಸ್‌‍ 16 ಸ್ಥಾನಗಳನ್ನು, ಆರ್‌ಜೆಡಿ 4 ಸ್ಥಾನಗಳನ್ನು ಮತ್ತು ಸಿಪಿಐ (ಎಂಎಲ್‌‍) 2 ಸ್ಥಾನಗಳನ್ನು ಪಡೆದುಕೊಂಡಿದೆ. ಆರ್‌ಜೆಡಿಗೆ ಒಬ್ಬ ಸಚಿವ ಸ್ಥಾನ ಸಿಗಬಹುದು.

ಇದೇ ವೇಳೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆ ನಡೆದಿದೆ. ಹೇಮಂತ್‌ ಸೊರೇನ್‌ ಭಾನುವಾರ ರಾಜ್ಯಪಾಲ ಸಂತೋಷ್‌ ಕುಮಾರ್‌ ಗಂಗ್ವಾರ್‌ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಬಳಿಕ ಜಾರ್ಖಂಡ್‌ ರಾಜ್ಯದಲ್ಲಿನ ಇಂಡಿಯಾ ಬ್ಲಾಕ್‌ನ ನಾಯಕರು ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದರು.

ಮೈತ್ರಿಕೂಟದ ನಡುವೆ ಸಚಿವ ಸಂಪುಟ ಪಟ್ಟಿ ಅಂತಿಮವಾಗದೇ ಇರುವುದರಿಂದ ಹೇಮಂತ್‌ ಸೊರೇನ್‌ ಏಕೈಕ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಜೆಎಂಎಂ ಮುಖ್ಯಮಂತ್ರಿ ಹ್ದುೆಯೊಂದಿಗೆ 6 ಸಚಿವ ಸ್ಥಾನಗಳನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಕಾಂಗ್ರೆಸ್‌‍ಗೆ ನಾಲ್ಕು ಸ್ಥಾನಗಳು ಮತ್ತು ತೇಜಸ್ವಿ ಯಾದವ್‌ ಅವರ ರಾಷ್ಟ್ರೀಯ ಜನತಾ ದಳಕ್ಕೆ ಒಂದು ಸ್ಥಾನ ಸಿಗಲಿದೆ. ಇಬ್ಬರು ಶಾಸಕರನ್ನು ಹೊಂದಿರುವ ಸಿಪಿಐ-ಎಂಎಲ್‌ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಲಿದೆ.

ಹೇಮಂತ್‌ ಸೊರೇನ್‌ಗೆ 2024ರ ಆರಂಭ ಮತ್ತು ಅಂತ್ಯವು ಹೆಚ್ಚು ಭಿನ್ನವಾಗಿರಲಿಲ್ಲ. ಪ್ರಕರಣವೊಂದರಲ್ಲಿ ಜೈಲುವಾಸ ಅನುಭವಿಸಿ ಬಂದ ನಾಯಕನ ಕೈ ಹಿಡಿದು ಜನ ಅಭಯ ತುಂಬಿದ್ದಾರೆ. ಜಾರ್ಖಂಡ್‌ನಲ್ಲಿ ಜಯಭೇರಿ ಬಾರಿಸಿದ ಸೊರೇನ್‌ ಒಂದೇ ವರ್ಷದಲ್ಲಿ 2ನೇ ಬಾರಿಗೆ ಸಿಎಂ ಆಗಿ ಪುನರಾಗಮನಕ್ಕೆ ಸಜ್ಜಾಗಿದ್ದಾರೆ.

ಈಚೆಗೆ ಜಾರ್ಖಂಡ್‌ ಮುಕ್ತಿ ಮೋರ್ಚಾ ನಾಯಕ ಸೊರೇನ್‌ರನ್ನು ಭೂಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ವಶಕ್ಕೆ ತೆಗೆದುಕೊಂಡಿತ್ತು. ಬಂಧನಕ್ಕೊಳಗಾಗುವ ಮೊದಲು ಅವರು ಜಾರ್ಖಂಡ್‌ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈಗ ವರ್ಷ (2024) ಮುಗಿಯಲು ಒಂದು ತಿಂಗಳು ಉಳಿದಿರುವಾಗ, ಸೊರೇನ್‌ ಅವರು ಅಮೋಘ ವಿಜಯದ ವಾಸ್ತುಶಿಲ್ಪಿಯಾಗಿ ಹೊರಹೊಮಿದ್ದಾರೆ. ಇಂಡಿಯಾ ಮೈತ್ರಿಕೂಟವು ರಾಜ್ಯದಲ್ಲಿ ಮತ್ತೆ ಅಧಿಕಾರ ಉಳಿಸಿಕೊಂಡಿದೆ. ಸೊರೇನ್‌ ಮತ್ತೆ ಸಿಎಂ ಆಗಿ ಮುಂದುವರಿಯಲಿದ್ದಾರೆ.

RELATED ARTICLES

Latest News