ಮೌಂಟನ್‌ಎರ್ಯ, ಮೇ 21-ಅಮೆರಿಕದ ನ್ಯೂ ಮೆಕ್ಸಿಕೋ ರಾಜ್ಯದ ಗ್ರಾಮೀಣ ಪ್ರದೇಶದ ಮನೆಯೊಂದರಲ್ಲಿ ಸಂಭವಿಸಿದ ಶಂಕಿತ ಮಾದಕ ವಸ್ತು ಮಿತಿಮೀರಿದ ಸೇವನೆ ಪ್ರಕರಣದ ವೇಳೆ ರಹಸ್ಯ ವಸ್ತುವಿನ ಸಂಪರ್ಕದಿಂದ ಮೂವರು ಮೃತಪಟ್ಟಿದ್ದಾರೆ.
ಇದರ ಪರಿಶೀಲನೆಗೆ ತೆರಳಿದ್ದ 12ಕ್ಕೂ ಹೆಚ್ಚು ತುರ್ತುಸೇವಾ ಸಿಬ್ಬಂದ್ದಿ ಕೂಡ ಅಸ್ವಸ್ಥರಾಗಿದ್ದು ಕೂಡಲೆ ಅವರನ್ನು ಪ್ರತ್ಯೇಕಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂ ಮೆಕ್ಸಿಕೋ ರಾಜ್ಯ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಅಲ್ಬುಕರ್ಕ್ ನಗರದ ಪೂರ್ವ ಭಾಗದಲ್ಲಿರುವ ಮನೆಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ನಾಲ್ವರು ಪತ್ತೆಯಾಗಿದ್ದರು. ಅವರಲ್ಲಿ ಮೂವರು ಮೃತಪಟ್ಟಿದ್ದು, ನಾಲ್ಕನೇ ವ್ಯಕ್ತಿಗೆ ಅಲ್ಬುಕರ್ಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಕ್ಷಣಾ ಕಾರ್ಯಾಚರಣೆಯ ವೇಳೆ ಕೆಲವು ತುರ್ತುಸೇವಾ ಸಿಬ್ಬಂದಿ ಕೂಡ ಅಪರಿಚಿತ ವಸ್ತುವಿನ ಸಂಪರ್ಕಕ್ಕೆ ಬಂದಿದ್ದು, ಅವರಿಗೆ ವಾಂತಿ ಭಾವನೆ ಮತ್ತು ತಲೆಸುತ್ತು ಸೇರಿದಂತೆ ಕೆಲವು ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪರಿಚಿತ ವಸ್ತುವಿನ ಸಂಪರ್ಕಕ್ಕೆ ಬಂದಿದ್ದ 23 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ಹಾಗೂ ಶುದ್ಧೀಕರಣ (ಡಿಕಂಟಮಿನೇಶನ್) ಪ್ರಕ್ರಿಯೆಗೆ ಒಳಪಡಿಸಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಇವರಲ್ಲಿ ಬಹುತೇಕರು ತುರ್ತುಸೇವಾ ಸಿಬ್ಬಂದಿಯಾಗಿದ್ದು, ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ.
ಆದರೆ ಮೂವರು ರೋಗಿಗಳ ಆರೋಗ್ಯದ ಮೇಲೆ ಇನ್ನೂ ವೈದ್ಯಕೀಯ ತಂಡಗಳು ನಿಗಾ ವಹಿಸಿವೆ ಎಂದು ಆಸ್ಪತ್ರೆ ತಿಳಿಸಿದೆ.ಇಬ್ಬರು ತುರ್ತುಸೇವಾ ಸಿಬ್ಬಂದಿಯ ಸ್ಥಿತಿ ಗಂಭೀರವಾಗಿದೆ ಎಂದು ರಾಜ್ಯ ಪೊಲೀಸ್ ಅಧಿಕಾರಿ ವಿಲ್ಸನ್ ಸಿಲ್ವರ್ ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಹಾನಿಕಾರಕ ವಸ್ತು ನಿಯಂತ್ರಣ ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದು, ಸಂಬಂಧಿಸಿದ ವಸ್ತುವಿನ ಗುರುತು ಪತ್ತೆ ಮಾಡಲು ಪ್ರಯತ್ನಿಸುತ್ತಿವೆ. ಪ್ರಾಥಮಿಕ ತನಿಖೆ ಪ್ರಕಾರ, ಈ ವಸ್ತು ಸ್ಪರ್ಶದ ಮೂಲಕ ಹರಡಬಹುದು ಎಂಬ ಶಂಕೆ ಇದ್ದು, ಅದು ಗಾಳಿಯ ಮೂಲಕ ಹರಡುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ, ಮಾದಕ ವಸ್ತು ಬಳಕೆ ಈ ಘಟನೆಗೆ ಕಾರಣವಾಗಿರಬಹುದು ಎಂಬ ಸೂಚನೆಗಳು ದೊರೆತಿವೆ ಎಂದು ಸ್ಥಳೀಯ ಮೇಯರ್ ಪೀಟರ್ ನಿಯೆಟೊ ಹೇಳಿದ್ದಾರೆ. ಆದರೆ ಸಾರ್ವಜನಿಕರಿಗೆ ಯಾವುದೇ ಅಪಾಯ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
