ನವದೆಹಲಿ,ಅ.5- ದುಬೈಟೆಲ್ ಅವಿವ್ ಮಾರ್ಗದ ಫ್ಲೈದುಬೈ ವಿಮಾನವನ್ನು ಅಪಹರಿಸಿ 9/11 ಮಾದರಿಯ ದಾಳಿ ನಡೆಸಲು ಅದರ ಸಹ-ಪೈಲಟ್ ಹಮಾಮ್ ಅಲ್-ಹಮನಿ ಸಂಚು ರೂಪಿಸಿದ್ದ ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ಹೊರಬಿದ್ದಿದೆ. ಸೆಪ್ಟೆಂಬರ್ 30ರಂದು ವಿಮಾನದ ಕಾಕ್‌ಪಿಟ್‌ನಲ್ಲಿ ಭಾರತೀಯ ಮೂಲದ ಕ್ಯಾಪ್ಟನ್ ಸಿತ್ ಮಚ್ಚರ್ ಮೇಲೆ ದಾಳಿ ನಡೆಸಿದ ಆರೋಪದಲ್ಲಿ 29 ವರ್ಷದ ಓಮನ್ ಪ್ರಜೆಯನ್ನು ಯುಎಇ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ತನಿಖಾಧಿಕಾರಿಗಳ ಪ್ರಕಾರ, ಅಲ್-ಹಮನಿ ಮೊದಲು ಕ್ಯಾಪ್ಟನ್ ಮಚ್ಚರ್ ಅವರನ್ನು ರಹಸ್ಯವಾಗಿ ಹತ್ಯೆ ಮಾಡಿ ವಿಮಾನದ ನಿಯಂತ್ರಣವನ್ನು ತನ್ನ ವಶಕ್ಕೆ ಪಡೆಯಲು ಯೋಜಿಸಿದ್ದ. ಬಳಿಕ ವಿಮಾನದ ಎಂಜಿನ್‌ಗಳನ್ನು ಸ್ಥಗಿತಗೊಳಿಸಿ ಟೆಲ್ ಅವಿವ್‌ನ ಗಗನಚುಂಬಿ ಕಟ್ಟಡ ಅಥವಾ ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿದ್ದ ಮತ್ತೊಂದು ವಿಮಾನಕ್ಕೆ ಡಿಕ್ಕಿ ಹೊಡೆಯುವ ಉದ್ದೇಶ ಹೊಂದಿದ್ದ ಎನ್ನಲಾಗಿದೆ.
ವಿಮಾನ ಜೋರ್ಡಾನ್ ವಾಯುಪ್ರದೇಶ ಪ್ರವೇಶಿಸುವವರೆಗೆ ಕಾಯುವ ಮೂಲಕ ಕಾಕ್‌ಪಿಟ್‌ನಲ್ಲಿನ ತನ್ನ ಕೃತ್ಯ ಗಮನಕ್ಕೆ ಬಾರದಂತೆ ನೋಡಿಕೊಳ್ಳಲು ಆತ ಯೋಜಿಸಿದ್ದ ಎಂದು ವರದಿಗಳು ತಿಳಿಸಿವೆ. ಜುಲೈನಲ್ಲಿಯೇ ದಾಳಿ ನಡೆಸಲು ಯೋಚಿಸಿದ್ದರೂ, ಸಿಬ್ಬಂದಿಯೊಬ್ಬರೊಂದಿಗೆ ಹೊಂದಿದ್ದ ಸ್ನೇಹದ ಕಾರಣ ಕೊನೆಯ ಕ್ಷಣದಲ್ಲಿ ಯೋಜನೆಯನ್ನು ಕೈಬಿಟ್ಟಿದ್ದ ಎನ್ನಲಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಹಲವು ಬಾರಿ ಭೇಟಿ ನೀಡಿದ್ದ ಆತ, ಜೂನ್‌ನ ಭೇಟಿಯ ವೇಳೆ ದಾಳಿಗೆ ಅಗತ್ಯವಾದ ಮಾಹಿತಿ ಸಂಗ್ರಹಿಸಿದ್ದನೆಂಬ ಆರೋಪವೂ ಇದೆ.
ತನಿಖೆಯಲ್ಲಿ ಬೆಳಕಿಗೆ ಬಂದಿರುವ ಆರೋಪಗಳು 2001ರ ಸೆಪ್ಟೆಂಬರ್ 11ರಂದು ಅಮೆರಿಕದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ನೆನಪಿಸಿವೆ. ಆ ದಾಳಿಯಲ್ಲಿ ಅಪಹರಣಕಾರರು ನಾಲ್ಕು ಪ್ರಯಾಣಿಕ ವಿಮಾನಗಳ ನಿಯಂತ್ರಣ ಪಡೆದುಕೊಂಡು ಅವುಗಳಲ್ಲಿ ಮೂರು ವಿಮಾನಗಳನ್ನು ಉದ್ದೇಶಿತ ಕಟ್ಟಡಗಳತ್ತ ಅಪ್ಪಳಿಸಿದ್ದರು. ಘಟನೆಯಲ್ಲಿ ಸುಮಾರು 3,000 ಮಂದಿ ಮೃತಪಟ್ಟಿದ್ದರು. ಇದೇ ರೀತಿಯಲ್ಲಿ ವಿಮಾನವನ್ನು ಕಟ್ಟಡಕ್ಕೆ ಡಿಕ್ಕಿ ಹೊಡೆಯುವ ಉದ್ದೇಶ ಅಲ್-ಹಮ್ಮನಿಗಿತ್ತು ಎಂಬ ಆರೋಪಗಳು ಇದೀಗ ತನಿಖೆಯ ಪ್ರಮುಖ ಅಂಶವಾಗಿವೆ. ಆದರೆ ಈ ಆರೋಪಗಳ ಕುರಿತು ಅಂತಿಮ ತನಿಖಾ ವರದಿ ಇನ್ನೂ ಹೊರಬಂದಿಲ್ಲ.
ಸೆಪ್ಟೆಂಬರ್ 30ರಂದು ಫ್ಲೈದುಬೈಯ ಬೋಯಿಂಗ್ 737 ಅಗಿ 8 ವಿಮಾನ ಹಾರಾಟದಲ್ಲಿದ್ದಾಗ ಅಲ್-ಹಮನಿ ಕ್ಯಾಪ್ಟನ್ ಮಚ್ಚರ್ ಮೇಲೆ ಕ್ರ್ಯಾಶ್ ಕೊಡಲಿಯಿಂದ ದಾಳಿ ನಡೆಸಿ ವಿಮಾನದ ನಿಯಂತ್ರಣವನ್ನು ಪಡೆಯಲು ಯತ್ನಿಸಿದ್ದ. ಆ ಸಂದರ್ಭದಲ್ಲಿ ವಿಮಾನ ಸುಮಾರು 36,000 ಅಡಿಯಿಂದ ಕೇವಲ ಎರಡು ನಿಮಿಷಗಳಲ್ಲಿ ಸುಮಾರು 17,000 ಅಡಿಗೆ ತೀವ್ರವಾಗಿ ಇಳಿದಿತ್ತು. ಇದರಿಂದ ವಿಮಾನದ ಮೇಲೆ ಭಾರಿ ರಚನಾತ್ಮಕ ಒತ್ತಡ ಉಂಟಾಗಿ ರಡ್ಡರ್‌ನ ಕೆಲವು ಭಾಗಗಳು ಹಾನಿಗೊಳಗಾದವು.
ವಿಮಾನದಲ್ಲಿ 174 ಪ್ರಯಾಣಿಕರಿದ್ದರು. ಗಂಭೀರವಾಗಿ ಗಾಯಗೊಂಡಿದ್ದರೂ ಮಚ್ಚರ್ ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಬಳಿಕ ಸಿಬ್ಬಂದಿ ಮತ್ತು ಕೆಲವು ಪ್ರಯಾಣಿಕರು ಕಾಕ್‌ಪಿಟ್ ಪ್ರವೇಶಿಸಿ ಸಹ-ಪೈಲಟ್‌ನನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ವಿಮಾನದಲ್ಲಿದ್ದ ಇಬ್ಬರು ಆಫ್-ಡ್ಯೂಟಿ ಪೈಲಟ್‌ಗಳು ವಿಮಾನದ ನಿಯಂತ್ರಣ ವಹಿಸಿಕೊಂಡು ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿದರು. ನಂತರ ಪ್ರಯಾಣಿಕರನ್ನು ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು.
ಮರಣದಂಡನೆ ಭೀತಿಯಲ್ಲಿ ಆರೋಪಿ :
ಬಂಧಿತ ಸಹ-ಪೈಲಟ್ ಪ್ರಸ್ತುತ ಯುಎಇಯಲ್ಲಿ ತನಿಖೆ ಎದುರಿಸುತ್ತಿದ್ದಾನೆ. ಅಬುಧಾಬಿ ಸರ್ಕಾರವು ಆತನಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿದ್ದು, ಯುಎಇಯಲ್ಲಿ ಆತನಿಗೆ ಮರಣದಂಡನೆ ವಿಧಿಸುವ ಸಾಧ್ಯತೆಯಿದೆ.ಶೌರ್ಯ ಮೆರೆದ ಕ್ಯಾಪ್ಟನ್ ಸಿತ್ ಮಚ್ಚರ್ ಪ್ರಸ್ತುತ ದುಬೈ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್ ಸೇರಿದಂತೆ ಹಲವು ನಾಯಕರು ಅವರ ಧೈರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. 9/11 ಮಾದರಿಯ ಮತ್ತೊಂದು ದೊಡ್ಡ ದುರಂತವನ್ನು ಭಾರತೀಯ ಪೈಲಟ್ ತಡೆದಿದ್ದಾರೆ ಎಂದು ಪ್ರಧಾನಿ ಮೋದಿ ಹೆಮೆಯಿಂದ ಪ್ರಶಂಸಿಸಿದ್ದಾರೆ.
