ನವದೆಹಲಿ,ಅ.5- ಅಕ್ಟೋಬರ್ 10 ರಂದು ದೆಹಲಿಯ ಜಂತರ್ ಮಂತರ್ನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಗೆ ಮುಂಚಿತವಾಗಿ, ಕಾಕ್ರೋಚ್ ಜನತಾ ಪಕ್ಷದ ಪ್ರಮುಖ ನಾಯಕರನ್ನು ಬಂಧಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಸಿಜೆಪಿ ವಕ್ತಾರ ಸೌರವ್ ದಾಸ್ ಆರೋಪಿಸಿದ್ದಾರೆ.
ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ಈ ಪ್ರತಿಭಟನೆಗೆ ಕರೆ ನೀಡಿದೆ.ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಸೌರವ್ ದಾಸ್, ತಮನ್ನು ಸೇರಿದಂತೆ ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಅಶುತೋಷ್ ರಾಂಕಾ ಹಾಗೂ ರತ್ನಾ ಅವರನ್ನು ಬಂಧಿಸಲು ಸರ್ಕಾರ ಸಂಚು ರೂಪಿಸುತ್ತಿದೆ ಎಂದು ಹೇಳಿದ್ದಾರೆ.
ಸರ್ಕಾರವು ಇಂತಹ ಸರ್ವಾಧಿಕಾರಿ ಕ್ರಮಗಳಿಂದ ಮುಂಬರುವ ಜನಾಂದೋಲನವನ್ನು ಹತ್ತಿಕ್ಕಬಹುದು ಎಂದು ಭಾವಿಸಿದರೆ ಅದು ತಪ್ಪು. ದೇಶದ ಯುವ ಪೀಳಿಗೆ ಜಾಗೃತಗೊಂಡಿದ್ದು, ಜೈಲು ಶಿಕ್ಷೆಗೂ ನಾವು ಸಿದ್ಧರಿದ್ದೇವೆ. ಪ್ರತಿಭಟನೆಗಳು ನಿಲ್ಲಬಾರದು, ಎಂದು ದಾಸ್ ಮನವಿ ಮಾಡಿದ್ದಾರೆ.
ಇದೇ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡ ಅಭಿಜೀತ್ ದೀಪ್ಕೆ, ನೀವು ಎಷ್ಟು ಜನರನ್ನು ಬಂಧಿಸುತ್ತೀರಿ? ಅಕ್ಟೋಬರ್ 10 ರಂದು ಇಡೀ ದೇಶವೇ ದೆಹಲಿಗೆ ಬರಲಿದೆ, ಎಂದು ಸವಾಲು ಹಾಕಿದ್ದಾರೆ.
ಪ್ರತಿಭಟನೆಯ ಹಿನ್ನೆಲೆ :
ಮುಂಬೈ ಪ್ರತಿಭಟನೆ: ಇತ್ತೀಚೆಗಷ್ಟೇ ಸಿಜೆಪಿ ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಶಿವಸೇನೆ ಬೆಂಬಲದೊಂದಿಗೆ ಬೃಹತ್ ಪ್ರತಿಭಟನೆ ನಡೆಸಿತ್ತು.
ಚುನಾವಣಾ ಆಯೋಗದ ಸ್ಪಷ್ಟನೆ:
ಕಳೆದ 10 ತಿಂಗಳಲ್ಲಿ ಇಬ್ಬರು ಚುನಾವಣಾ ಆಯುಕ್ತರು ಖಐ್ಕ ಪ್ರಕ್ರಿಯೆಯ ಹಲವು ಅಂಶಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ವರದಿಗಳನ್ನು ಚುನಾವಣಾ ಆಯೋಗ ತಳ್ಳಿಹಾಕಿದ್ದು, ಎಲ್ಲಾ ನಿರ್ಧಾರಗಳನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ಹಿಂದಿನ ಘಟನೆಗಳು:
ಇತ್ತೀಚೆಗೆ ಅಸ್ಸಾಂನಲ್ಲಿ ಸಿಜೆಪಿ ನಾಯಕರನ್ನು 12 ಗಂಟೆಗಳ ಕಾಲ ವಶಕ್ಕೆ ಪಡೆಯಲಾಗಿತ್ತು. ಅಲ್ಲದೆ, ಜುಲೈನಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಸಿಜೆಪಿ ನಡೆಸಿದ 36 ದಿನಗಳ ಸುದೀರ್ಘ ಪ್ರತಿಭಟನೆಯು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾಗಿತ್ತು.ಪ್ರಸ್ತುತ ಅಕ್ಟೋಬರ್ 10 ರ ಪ್ರತಿಭಟನೆಯು ದೇಶವ್ಯಾಪಿ ದೊಡ್ಡ ಜನಾಂದೋಲನವಾಗಿ ಬದಲಾಗಲಿದೆ ಎಂದು ಸಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
