Homeಅಂತಾರಾಷ್ಟ್ರೀಯಭಾರತ-ನೆದರ್ಲ್ಯಾಂಡ್ಸ್ ನಡುವೆ 17 ಒಪ್ಪಂದಗಳಿಗೆ ಸಹಿ

ಭಾರತ-ನೆದರ್ಲ್ಯಾಂಡ್ಸ್ ನಡುವೆ 17 ಒಪ್ಪಂದಗಳಿಗೆ ಸಹಿ

India and Netherlands ink 17 pacts, elevate ties to strategic partnership

ದಿ ಹೇಗ್‌‍, ಮೇ 17: ಬದಲಾಗುತ್ತಿರುವ ಜಾಗತಿಕ ಭೌಗೋಳಿಕ-ರಾಜಕೀಯ ಪರಿಸ್ಥಿತಿಯ ನಡುವೆ ಭಾರತ ಮತ್ತು ನೆದರ್ಲ್ಯಾಂಡ್ಸ್ ತಮ್ಮ ದ್ವಿಪಕ್ಷೀಯ ಸಂಬಂಧವನ್ನು ಡೊಡ್ಡ ಮಟ್ಟಕ್ಕೆ ಏರಿಸಿದ್ದು, ರಕ್ಷಣಾ ಕ್ಷೇತ್ರ, ಪ್ರಮುಖ ಖನಿಜಗಳು ಹಾಗೂ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸಲು 17 ಒಪ್ಪಂದಗಳಿಗೆ ಸಹಿ ಹಾಕಿವೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ನೆದರ್ಲ್ಯಾಂಡ್ಸ್ ಪ್ರಧಾನಿ ರಾಬ್‌ ಜೆಟ್ಟೆನ್‌ ನಡುವೆ ನಡೆದ ಮಾತುಕತೆಯ ಬಳಿಕ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.ಮಾತುಕತೆ ವೇಳೆ ಇಬ್ಬರು ನಾಯಕರು ಪಶ್ಚಿಮ ಏಷ್ಯಾದ ಪರಿಸ್ಥಿತಿ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿದ್ದು, ಜಾಗತಿಕ ಇಂಧನ ಪೂರೈಕೆ ಮತ್ತು ವ್ಯಾಪಾರ ಜಾಲಗಳ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಬಗ್ಗೆ ಚರ್ಚಿಸಿದ್ದಾರೆ.

ಜೊತೆಗೆ, ಹೊರ್ಮಜ್‌ ಜಲಸಂಧಿಯಲ್ಲಿ ನೌಕಾಯಾನ ಸ್ವಾತಂತ್ರ್ಯ ಮತ್ತು ಜಾಗತಿಕ ವ್ಯಾಪಾರದ ನಿರಂತರ ಸಂಚಾರಕ್ಕೆ ಬೆಂಬಲ ವ್ಯಕ್ತಪಡಿಸಿ, ಯಾವುದೇ ನಿರ್ಬಂಧಾತಕ ಕ್ರಮಗಳನ್ನು ವಿರೋಧಿಸಿದ್ದಾರೆ.

ಇಬ್ಬರು ನಾಯಕರು ಉಕ್ರೇನ್‌ ಪರಿಸ್ಥಿತಿಯ ಕುರಿತೂ ಚರ್ಚಿಸಿದ್ದು, ವಿಶ್ವಸಂಸ್ಥೆ ಘೋಷಣಾಪತ್ರ ಮತ್ತು ಅಂತರರಾಷ್ಟ್ರೀಯ ಕಾನೂನುಗಳ ಆಧಾರದ ಮೇಲೆ ಸಂವಾದ ಹಾಗೂ ರಾಜತಾಂತ್ರಿಕ ಮಾರ್ಗಗಳ ಮೂಲಕ ನ್ಯಾಯಯುತ ಮತ್ತು ಶಾಶ್ವತ ಶಾಂತಿ ಸ್ಥಾಪನೆಗೆ ಬೆಂಬಲ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ರಕ್ಷಣಾ ಸಾಧನಗಳು, ವ್ಯವಸ್ಥೆಗಳು ಮತ್ತು ಇತರ ಸಾಮರ್ಥ್ಯಗಳ ಜಂಟಿ ಉತ್ಪಾದನೆಗಾಗಿ ತಂತ್ರಜ್ಞಾನ ವರ್ಗಾವಣೆ ಮತ್ತು ಜಂಟಿ ಉದ್ಯಮಗಳ ಸ್ಥಾಪನೆಯ ಸಾಧ್ಯತೆಗಳ ಕುರಿತು ಪರಿಶೀಲನೆ ನಡೆಸಲು ಸಹ ಒಪ್ಪಿಗೆ ನೀಡಲಾಗಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಸಹಿ ಹಾಕಲಾದ ಒಪ್ಪಂದಗಳು ಸೆಮಿಕಂಡಕ್ಟರ್‌, ಪ್ರಮುಖ ಖನಿಜಗಳು, ಆರೋಗ್ಯ, ನೀರು, ನವೀಕರಿಸಬಹುದಾದ ಇಂಧನ, ಕೃಷಿ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸಲು ನೆರವಾಗಲಿವೆ.

ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ಭಾರತೀಯರ ನೆದರ್ಲ್ಯಾಂಡ್ಸ್ ಪ್ರವೇಶವನ್ನು ಸುಲಭಗೊಳಿಸುವ ವಲಸೆ ಮತ್ತು ಚಲನವಲನ ಒಪ್ಪಂದ ಪ್ರಮುಖ ಒಪ್ಪಂದಗಳಲ್ಲಿ ಒಂದಾಗಿದೆ.
ಇದೇ ವೇಳೆ, ಚೀನಾದ ಹೆಚ್ಚುತ್ತಿರುವ ಪ್ರಾದೇಶಿಕ ಪ್ರಭಾವದ ಹಿನ್ನೆಲೆಯಲ್ಲಿ, ಮುಕ್ತ, ಶಾಂತಿಯುತ ಮತ್ತು ಅಂತರರಾಷ್ಟ್ರೀಯ ಕಾನೂನುಗಳನ್ನು ಗೌರವಿಸುವ ಇಂಡೋಪೆಸಿಫಿಕ್‌ ಪ್ರದೇಶಕ್ಕೆ ಇಬ್ಬರು ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ.

ನೆದರ್ಲ್ಯಾಂಡ್‌್ಸ ಯುರೋಪ್‌ನಲ್ಲಿ ಭಾರತದ ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳಲ್ಲಿ ಒಂದಾಗಿದ್ದು, 2024-25ರಲ್ಲಿ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಮೊತ್ತ 27.8 ಬಿಲಿಯನ್‌ ಅಮೆರಿಕನ್‌ ಡಾಲರ್‌ ತಲುಪಿದೆ. ಅಲ್ಲದೆ, ಒಟ್ಟು 55.6 ಬಿಲಿಯನ್‌ ಡಾಲರ್‌ ಹೂಡಿಕೆ ಮೂಲಕ ನೆದರ್ಲ್ಯಾಂಡ್‌್ಸ ಭಾರತದಲ್ಲಿ ನಾಲ್ಕನೇ ಅತಿ ದೊಡ್ಡ ಹೂಡಿಕೆದಾರ ರಾಷ್ಟ್ರವಾಗಿದೆ.

RELATED ARTICLES

Latest News