ವಾಷಿಂಗ್ಟನ್, ನ.3- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಕ್ಯಾಲಿಫೋರ್ನಿಯಾದಲ್ಲಿ ಸಾವಿರಾರು ಅಂಚೆ ಮತಪತ್ರಗಳನ್ನು ಪ್ರತ್ಯೇಕವಾಗಿ ಇಡುವಂತೆ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.ಈ ಮತದಾರರು ಅಮೆರಿಕದ ನಾಗರಿಕರಲ್ಲ ಎಂಬ ಆಡಳಿತದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿದೆ.
ಅಮೆರಿಕದ ರಾಜಕೀಯ ಭವಿಷ್ಯ ನಿರ್ಧರಿಸಲಿರುವ ಮಹತ್ವದ ಮಧ್ಯಂತರ ಚುನಾವಣೆ ನಡೆಯುವ ಮುನ್ನಾದಿನ ಈ ಆದೇಶ ಹೊರಬಿದ್ದಿದೆ.ರಿಪಬ್ಲಿಕನ್ ಪಕ್ಷದ ಆಡಳಿತವು ಕ್ಯಾಲಿಫೋರ್ನಿಯಾದ ಮತದಾರರ ಪಟ್ಟಿಯಲ್ಲಿರುವ ಸುಮಾರು 20 ಸಾವಿರ ಜನರನ್ನು ಅಮೆರಿಕದ ನಾಗರಿಕರಲ್ಲದಿರಬಹುದು ಎಂದು ಗುರುತಿಸಿತ್ತು.
ಈ ಪೈಕಿ ಬಹುತೇಕರು ಡೆಮಾಕ್ರಟಿಕ್ ಪಕ್ಷದ ಪ್ರಾಬಲ್ಯವಿರುವ ರಾಜ್ಯದ ಮತದಾರರಾಗಿದ್ದಾರೆ. ಈ ಮತದಾರರ ಪೌರತ್ವವನ್ನು ಪರಿಶೀಲಿಸುವವರೆಗೆ ಅವರ ಅಂಚೆ ಮತಪತ್ರಗಳನ್ನು ಪ್ರತ್ಯೇಕವಾಗಿ ಇಡಬೇಕೆಂದು ಟ್ರಂಪ್ ಆಡಳಿತ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿತ್ತು. ಆದರೆ, ನ್ಯಾಯಾಲಯ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಮುಂದಿನ ಎರಡು ವರ್ಷಗಳ ಕಾಲ ಆಡಳಿತ ನಿಯಂತ್ರಣ ಯಾರ ಕೈಯಲ್ಲಿರಲಿದೆ ಎಂಬುದನ್ನು ನಿರ್ಧರಿಸುವ ಮಧ್ಯಂತರ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಸಂಬಂಧಿತ ಕಾನೂನು ಹೋರಾಟಗಳು ತೀವ್ರಗೊಂಡಿವೆ.
ಕ್ಯಾಲಿಫೋರ್ನಿಯಾ ಅಧಿಕಾರಿಗಳ ಪ್ರಕಾರ, ಕೇಂದ್ರ ಸರ್ಕಾರ ನೀಡಿರುವ ಅನುಮಾನಾಸ್ಪದ ಮತದಾರರ ಪಟ್ಟಿಯಲ್ಲಿ ಹಲವು ತಪ್ಪುಗಳಿವೆ. ಈ ಮತಪತ್ರಗಳನ್ನು ಪ್ರತ್ಯೇಕಿಸುವುದರಿಂದ ಕಾನೂನುಬದ್ಧವಾಗಿ ಮತ ಚಲಾಯಿಸುವ ಅರ್ಹ ನಾಗರಿಕರ ಮತದಾನದ ಹಕ್ಕಿಗೂ ಧಕ್ಕೆಯಾಗುವ ಸಾಧ್ಯತೆಯಿದೆ.
ಸುಪ್ರೀಂ ಕೋರ್ಟ್ ತನ್ನ ತೀರ್ಪಿಗೆ ನಿರ್ದಿಷ್ಟ ಕಾರಣಗಳನ್ನು ನೀಡಿಲ್ಲ. ತುರ್ತು ಅರ್ಜಿಗಳ ವಿಚಾರಣೆಯಲ್ಲಿ ಇಂತಹ ಸಂಕ್ಷಿಪ್ತ ಆದೇಶ ಸಾಮಾನ್ಯವಾಗಿದೆ. ಸೆಪ್ಟೆಂಬರ್ನಲ್ಲಿಯೂ ದೇಶಾದ್ಯಂತ ಅಂಚೆ ಮತದಾನಕ್ಕೆ ನಿರ್ಬಂಧ ವಿಧಿಸುವ ಟ್ರಂಪ್ ಆಡಳಿತದ ಪ್ರಯತ್ನವನ್ನು ನ್ಯಾಯಾಲಯ ತಿರಸ್ಕರಿಸಿತ್ತು.
ಇದಕ್ಕೂ ಮೊದಲು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ನ್ಯಾಯಾಂಗ ಇಲಾಖೆಯ ಮನವಿಯನ್ನು ತಿರಸ್ಕರಿಸಿದ್ದರು. ಮತಪತ್ರಗಳನ್ನು ಪ್ರತ್ಯೇಕಿಸುವುದರಿಂದ ಚುನಾವಣೆಯಲ್ಲಿ ನಾಗರಿಕರ ಮತದಾನದ ಹಕ್ಕು ಕಸಿದುಕೊಳ್ಳುವ ಅಪಾಯವಿದೆ ಎಂದು ಎಚ್ಚರಿಸಿದ್ದರು.ಇದೇ ವೇಳೆ ವಾಷಿಂಗ್ಟನ್ನ ಮತ್ತೊಬ್ಬ ಫೆಡರಲ್ ನ್ಯಾಯಾಧೀಶರು, ಕ್ಯಾಲಿಫೋರ್ನಿಯಾ ಚುನಾವಣಾಧಿಕಾರಿಗಳಿಗೆ ಕೊನೆಯ ಕ್ಷಣದಲ್ಲಿ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದ ಟ್ರಂಪ್ ಆಡಳಿತದ ಕ್ರಮವನ್ನು ಸಂವಿಧಾನಬಾಹಿರ ಎಂದು ಅಭಿಪ್ರಾಯಪಟ್ಟಿದ್ದಾರೆ.
ಚುನಾವಣಾ ನಿಯಮಗಳನ್ನು ರೂಪಿಸುವ ಅಧಿಕಾರ ರಾಜ್ಯಗಳು ಮತ್ತು ಕಾಂಗ್ರೆಸ್ಗೆ ಮಾತ್ರ ಸೇರಿದ್ದು, ಕಾರ್ಯಾಂಗವು ಸಂವಿಧಾನದ ಚುನಾವಣಾ ವಿಧಿಯನ್ನು ಉಲ್ಲಂಘಿಸಿರುವ ಸಾಧ್ಯತೆಯಿದೆ ಎಂದು ಮುಖ್ಯ ನ್ಯಾಯಾಧೀಶ ಜೇಮ್ಸ್ ಬೋಸ್ಬರ್ಗ್ ಹೇಳಿದ್ದಾರೆ. ಆದರೆ, ಮತಪತ್ರಗಳನ್ನು ಪ್ರತ್ಯೇಕಿಸುವುದು ಕೇವಲ ತಾತ್ಕಾಲಿಕ ಕ್ರಮವಾಗಿದ್ದು, ಪರಿಶೀಲನೆಯ ಬಳಿಕ ಅರ್ಹ ಮತಗಳನ್ನು ಎಣಿಕೆಗೆ ಸೇರಿಸಬಹುದು ಎಂಬುದು ಆಡಳಿತದ ವಾದವಾಗಿದೆ.
ಕ್ಯಾಲಿಫೋರ್ನಿಯಾದಲ್ಲಿ ಅಕ್ಟೋಬರ್ ಆರಂಭದಿಂದಲೇ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯದ ಸುಮಾರು 2.3 ಕೋಟಿ ನೋಂದಾಯಿತ ಮತದಾರರಿಗೆ ಅಂಚೆ ಮೂಲಕ ಮತಪತ್ರಗಳನ್ನು ಕಳುಹಿಸಲಾಗಿದೆ. ಈಗಾಗಲೇ ಲಕ್ಷಾಂತರ ಮತಪತ್ರಗಳ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಹಂತದಲ್ಲಿ ವಿವಾದಿತ ಮತಪತ್ರಗಳನ್ನು ಗುರುತಿಸಿ ಪ್ರತ್ಯೇಕಿಸುವುದು ಪ್ರಾಯೋಗಿಕವಾಗಿ ಅಸಾಧ್ಯ ಎಂದು ರಾಜ್ಯದ ಚುನಾವಣಾಧಿಕಾರಿಗಳು ಹೇಳಿದ್ದಾರೆ.
