ಅಮರಾವತಿ, ನ.3- ತೀವ್ರ ಸ್ವರೂಪದ ಮುರಸು ಚಂಡಮಾರುತ ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಹಾನಿ ಉಂಟುಮಾಡಿದೆ. ಸಾವಿರಾರು ಮರಗಳು ಧರೆಗುರುಳಿದ್ದು, ನೂರಾರು ವಿದ್ಯುತ್ ಕಂಬಗಳು ಹಾನಿಗೀಡಾಗಿವೆ. ಮೀನುಗಾರಿಕಾ ದೋಣಿಗಳು ನಾಶವಾಗಿವೆ. ಮಂಗಳವಾರ ಮುಂಜಾನೆ ಚಂಡಮಾರುತ ಕರಾವಳಿಯನ್ನು ದಾಟಿದ ಬಳಿಕ ಸ್ಥಳೀಯರು ತಮ್ಮ ಸಂಕಷ್ಟದ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಬಾಪಟ್ಲಾ ಮತ್ತು ಪ್ರಕಾಶಂ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಹಾಗೂ ಬಿರುಗಾಳಿ ಬೀಸಿದ್ದು, ನಿಂತಿದ್ದ ಬೆಳೆಗಳಿಗೆ ವ್ಯಾಪಕ ಹಾನಿಯಾಗಿದೆ. ಹಲವು ಪ್ರದೇಶಗಳು ಜಲಾವೃತಗೊಂಡಿವೆ.ಕಳೆದ 14 ವರ್ಷಗಳಲ್ಲಿ ನಾವು ಕಂಡ ಅತ್ಯಂತ ಭೀಕರ ಚಂಡಮಾರುತ ಇದಾಗಿದೆ. ಸರ್ಕಾರ ಉತ್ತಮವಾಗಿ ಸ್ಪಂದಿಸಿದ್ದು, ನಮ್ಮ ಗ್ರಾಮದಿಂದ ಸುಮಾರು 400 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಎನ್ಡಿಆರ್ಎಫ್ ತಂಡಗಳೂ ಸುರಕ್ಷಿತ ಸ್ಥಳಗಳಿಗೆ ತೆರಳಲು ನೆರವಾಗಿವೆ ಎಂದು ಪ್ರಕಾಶಂ ಜಿಲ್ಲೆಯ ಕೊತ್ತಪಟ್ನಂನ ಮೀನುಗಾರರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಹಿಂದಿನ ಚಂಡಮಾರುತದಲ್ಲಿ ನನ್ನ ಮನೆ ನಾಶವಾಗಿತ್ತು. ನಮ್ಮ ಕುಟುಂಬವೂ ಸಂಕಷ್ಟಕ್ಕೆ ಸಿಲುಕಿತ್ತು. ಈ ಬಾರಿ ಚಂಡಮಾರುತ ಅಪ್ಪಳಿಸುವ ಮೊದಲೇ ಸರ್ಕಾರ ನಮ್ಮನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದೆ. ಆದರೆ, ನನ್ನ ಮೂರು ದೋಣಿಗಳಲ್ಲಿ ಒಂದು ಸಂಪೂರ್ಣ ನಾಶವಾಗಿದೆ. ಮೀನುಗಾರಿಕೆಯೇ ನಮ್ಮ ಜೀವನಾಧಾರ ಎಂದು ಕೆಲವರು ನೋವು ತೋಡಿಕೊಂಡಿದ್ದಾರೆ.
ಚಂಡಮಾರುತದ ಪರಿಣಾಮ ಸಾವಿರಾರು ಮರಗಳು ಉರುಳಿದ್ದು, ನೂರಾರು ವಿದ್ಯುತ್ ಕಂಬಗಳು ಹಾನಿಗೀಡಾಗಿವೆ. ಹಲವು ಪ್ರದೇಶಗಳಲ್ಲಿ ಮಳೆ ನೀರು ನಿಂತು ಜನಜೀವನ ಅಸ್ತವ್ಯಸ್ತಗೊಂಡಿದೆ.ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳು ಸಿಲುಕಿಕೊಂಡಿದ್ದು, ಭಾರೀ ಮಳೆ ಹಾಗೂ ಬಿರುಗಾಳಿಯಿಂದಾಗಿ ಗೋಚರತೆ ಕಡಿಮೆಯಾದ ಹಿನ್ನೆಲೆಯಲ್ಲಿ ವಾಹನ ಸವಾರರು ಸಂಚಾರ ನಡೆಸಲು ಪರದಾಡಿದರು. ಪ್ರತಿಕೂಲ ಹವಾಮಾನದಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿ ಹಲವು ಕಡೆ ಪ್ರಯಾಣಿಕರು ಸಿಲುಕಿಕೊಂಡರು.
ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ತೀವ್ರ ಸ್ವರೂಪದ ಮುರಸು ಚಂಡಮಾರುತ ಇಂದು ಮುಂಜಾನೆ 3.30ರಿಂದ 5.30ರ ನಡುವೆ ನೆಲ್ಲೂರು ಮತ್ತು ನರಸಾಪುರ ನಡುವಿನ ದಕ್ಷಿಣ ಆಂಧ್ರಪ್ರದೇಶದ ಕರಾವಳಿಯನ್ನು ಒಂಗೋಲ್ ಸಮೀಪ ದಾಟಿದೆ.ಈ ವೇಳೆ ಗಂಟೆಗೆ 100ರಿಂದ 110 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದ್ದು, ಗಾಳಿಯ ವೇಗ 120 ಕಿ.ಮೀ.ವರೆಗೂ ತಲುಪಿತ್ತು.
ಮಂಗಳವಾರ ಮಧ್ಯಾಹ್ನದ ವೇಳೆಗೆ ಚಂಡಮಾರುತದ ತೀವ್ರತೆ ಕ್ರಮೇಣ ಕಡಿಮೆಯಾಗಿ ಸಾಮಾನ್ಯ ಚಂಡಮಾರುತದ ಸ್ವರೂಪ ಪಡೆಯುವ ಸಾಧ್ಯತೆಯಿದೆ. ಬಳಿಕ ಮಧ್ಯರಾತ್ರಿಯ ವೇಳೆಗೆ ತೀವ್ರ ವಾಯುಭಾರ ಕುಸಿತವಾಗಿ ದುರ್ಬಲಗೊಳ್ಳುವ ನಿರೀಕ್ಷೆಯಿದೆ.
ಮಂಗಳವಾರ ಕರಾವಳಿ ಆಂಧ್ರಪ್ರದೇಶದ ಬಹುತೇಕ ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಕೆಲವು ಪ್ರದೇಶಗಳಲ್ಲಿ ಭಾರಿಯಿಂದ ಅತಿ ಭಾರೀ ಮಳೆಯಾಗಲಿದೆ. ಅಲ್ಲಲ್ಲಿ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
