ಇಸ್ಲಾಮಾಬಾದ್, ಮಾ.5- ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಣ ಯುದ್ಧ ಆರನೇ ದಿನಕ್ಕೆ ಕಾಲಿಟ್ಟಿದ್ದು, ಉಭಯ ದೇಶಗಳ ನಡುವೆ ಹೊಸ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಲು ತಯಾರಿರುವುದಾಗಿ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಪ್ ಎರ್ಡೋಗನ್ ಅವರು ಹೇಳಿದ್ದಾರೆ.
ಎರಡು ವಾರಗಳ ಹಿಂದೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಕಳೆದವಾರ ಆಫ್ಘಾನಿಸ್ತಾನ ದಾಳಿ ಆರಂಭಿಸಿದ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ಸಂಘರ್ಷ ಭುಗಿಲೆದ್ದಿದ್ದು, ಅಲ್ಲಿಂದೀಚೆಗೆ ಪಾಕಿಸ್ತಾನವು ಗಡಿಯುದ್ದಕ್ಕೂ ಸೇನಾ ಕಾರ್ಯಾಚರಣೆ ನಡೆಸಿದ್ದು ಆಫ್ಘಾನಿಸ್ಥಾನದೊಂದಿಗೆ ಪೂರ್ಣ ಸಮರ ಘೋಷಿಸಿತ್ತು. ಇದು ಅಂತಾರಾಷ್ಟ್ರೀಯ ಸಮುದಾಯವನ್ನು ಕಟ್ಟೆಚ್ಚರಗೊಳಿಸಿತ್ತು.
ಈ ಮುನ್ನ, ಎರಡು ನೆರೆ ರಾಷ್ಟ್ರಗಳು ಯುದ್ಧದ ಸನಿಹ ಬಂದಿದ್ದು ಕಳೆದ ಅಕ್ಟೋಬರ್‌ನಲ್ಲಿ ಕತಾರ್ ಮತ್ತು ಟರ್ಕಿಯ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಘೋಷಣೆಯಾಗಿತ್ತು.
ಕತಾರ್‌ನಲ್ಲಿ ಸಹಿ ಮಾಡಲಾದ ಆ ಒಪ್ಪಂದವು ಇಸ್ತಾನ್‌ಬುಲ್‌ನಲ್ಲಿ ನಡೆದ ಆರು ದಿನಗಳ ಮಾತುಕತೆ ಬಳಿಕ ಏರ್ಪಟ್ಟಿತ್ತು.
ಟರ್ಕಿಷ್ ಅಧ್ಯಕ್ಷೀಯ ಕಚೇರಿಯ ಹೇಳಿಕೆ ಪ್ರಕಾರ ಎರ್ಡೋಗನ್ ಅವರು ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಪಾಕ್‌ನಲ್ಲಿನ ಭಯೋತ್ಪಾದಕ ದಾಳಿಯನ್ನು ಖಂಡಿಸಿದರು ಮತ್ತು ಪಾಕ್ ಹಾಗೂ ಆಫ್ಘಾನ್ ನಡುವೆ ಪುನಃ ಕದನ ವಿರಾಮಕ್ಕೆ ಪ್ರಯತ್ನಿಸುವುದಾಗಿ ಹೇಳಿದರು.
