ಕಂಪಾಲ (ಉಗಾಂಡಾ), ಫೆ.10- ಕೀನ್ಯಾದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದು, ಇಪ್ಪತ್ತು ಲಕ್ಷಕ್ಕೂ ಅಧಿಕ ಮಂದಿ ಕಂಗಾಲಾಗಿದ್ದಾರೆ. ಈಶಾನ್ಯ ಭಾಗದ ಪಶು ಸಾಕಣೆದಾರರು ಭಾರಿ ತೊಂದರೆಗೊಳಗಾಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಸೋಮಾಲಿಯಾ ಗಡಿ ಭಾಗದ ಬರ ಪ್ರದೇಶದಲ್ಲಿ ಮೇವು ನೀರಿಲ್ಲದೇ ಜಾನುವಾರುಗಳು ಮೃತಪಟ್ಟಿರುವ ದೃಶ್ಯಗಳ ಚಿತ್ರಗಳು, ಹವಾಮಾನ ವೈಪರೀತ್ಯದಿಂದ ಇಲ್ಲಿ ಉಂಟಾಗಿರುವ ಸನ್ನಿವೇಶದ ಚಿತ್ರಣ ನೀಡುತ್ತಿದ್ದು ಆಘಾತಕಾರಿಯಾಗಿವೆ.
ಇತ್ತೀಚಿನ ವರ್ಷಗಳಲ್ಲಿ ಮಳೆಯಾಗುವುದು ತೀವ್ರ ಕಡಿಮೆಯಾಗಿದ್ದು ಕೆಲವು ಸಮುದಾಯಗಳಿಗೆ ಭಾರಿ ಬರಪರಿಸ್ಥಿತಿ ಎದುರಿಸುವಂತಾಗಿದೆ. ಸಾಧಾರಣವಾಗಿ ಪ್ರಾಣಿಗಳೇ ಮೊದಲು ಪ್ರಾಣಬಿಡುತ್ತಿವೆ. ಜಾನುವಾರುಗಳ ಮರಣವು 2020ರಿಂದ 2023ರ ನಡುವೆ ಈ ಪ್ರದೇಶದಲ್ಲಿ ಮಿಲಿಯಾಂತರ ಪ್ರಾಣಿಗಳು ಸಾವಿಗೀಡಾಗಿದ್ದನ್ನು ಪ್ರತಿಧ್ವನಿಸುತ್ತವೆ. ಈ ಪ್ರದೇಶವು ಕೀನ್ಯಾದಿಂದ ಇಥಿಯೋಫಿಯಾ ಮತ್ತು ಸೋಮಾಲಿಯಾದ ಕೆಲವು ಭಾಗಗಳ ತನಕ ವಿಸ್ತರಿಸುತ್ತದೆ. ಆ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಸಮುದಾಯ ನೀಡಿದ ಸಕಾಲಿಕ ನೆರವಿನಿಂದಾಗಿ ಸೋಮಾಲಿಯಾ ಸಂಭಾವ್ಯ ಬರ ಸಂಕಷ್ಟದಿಂದ ಪಾರಾಗಿತ್ತು.
ಆಫ್ರಿಕಾದ ಕೊಂಬು ಎಂದು ಕರೆಯಲಾಗುವ, ಹಿಂದೂ ಮಹಾಸಾಗರದೊಂದಿಗೆ ಸಂಪರ್ಕಿಸುವ ಈ ಭಾಗದಲ್ಲಿ ಸತತ ನಾಲ್ಕು ಮಳೆಯ ಋತುಗಳು ವಿಫಲವಾಗಿವೆ. ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಬೀಳಬೇಕಾಗಿದ್ದ ಮಳೆ ಬೀಳದೆ ಈ ಅವಧಿಯು ಇದುವರೆಗಿನ ಅತ್ಯಂತ ಒಣ ಹವಾಮಾನ ದಾಖಲಿಸಿದೆ ಎಂದು ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆ ತಿಳಿಸಿದೆ.
ಮಳೆ ಕಡಿಮೆಯಾಗುತ್ತಿರುವುದರಿಂದಾಗಿ ಪೂರ್ವ ಕೀನ್ಯಾ 1981ರಿಂದೀಚೆಗಿನ ಅತ್ಯಂತ ಶುಷ್ಕ ವಾತಾವರಣ ಎದುರಿಸುವಂತಾಗಿದೆ.ರಾಷ್ಟ್ರೀಯ ಬರ ನಿರ್ವಹಣಾ ಪ್ರಾಧಿಕಾರದ ಪ್ರಕಾರ ಕೀನ್ಯಾದ10 ಕೌಂಟಿಗಳು ಬರಪರಿಸ್ಥಿತಿಗೀಡಾಗಿವೆ. ಸೋಮಾಲಿಯಾ ಗಡಿಯಲ್ಲಿರುವ ಈಶಾನ್ಯ ಕೌಂಟಿ ಮಂಡೇರಾ ಕಟ್ಟೆಚ್ಚರ ಘೋಷಿಸುವ ಮಟ್ಟ ತಲುಪಿದೆ. ನೀರಿನ ಸೆಲೆಗಳು ಬತ್ತಿ ಹೋಗಿದ್ದು, ನೀರಿಗಾಗಿ ಹಾಹಾಕಾರ ಉಂಟಾಗಿದೆ. ಜಾನುವಾರುಗಳು ಮೇವು-ನೀರು ಇಲ್ಲದೇ ಸಾವನ್ನಪ್ಪುತ್ತಿರುವ ಸನ್ನಿವೇಶ ಘೋರವಾಗಿದೆ. ಆಹಾರ ಕೊರತೆ ತಲೆದೋರಿದ್ದು ಮಕ್ಕಳು ಕಂಗಾಲಾಗಿದ್ದಾರೆ.
ಈ ನರಳಿಕೆ ಸೋಮಾಲಿಯಾ, ತಾಂಜಾನಿಯಾ ಮತ್ತು ಉಗಾಂಡಕ್ಕೂ ಸಹ ವಿಸ್ತರಿಸಿದೆ. ಅಲ್ಲಿಯೂ ಇದೇ ರೀತಿಯ ಹವಾಮಾನ ವೈಪರೀತ್ಯ ಉಂಟಾಗಿದ್ದು, ನೀರಿಗಾಗಿ ಜನ-ಜಾನುವಾರು ಬಾಯಾರಿ ಪರಿತಪಿಸುವಂತಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
