Homeಅಂತಾರಾಷ್ಟ್ರೀಯಅದಾನಿ ವಿರುದ್ಧದ ಪ್ರಕರಣ ಹಿಂಪಡೆಯಲು ಅಮೆರಿಕ ಹೂಡಿಕೆ ಕಾರಣವಲ್ಲ: ಯುಎಸ್‌‍ ನ್ಯಾಯ ಇಲಾಖೆ ಸ್ಪಷ್ಟನೆ

ಅದಾನಿ ವಿರುದ್ಧದ ಪ್ರಕರಣ ಹಿಂಪಡೆಯಲು ಅಮೆರಿಕ ಹೂಡಿಕೆ ಕಾರಣವಲ್ಲ: ಯುಎಸ್‌‍ ನ್ಯಾಯ ಇಲಾಖೆ ಸ್ಪಷ್ಟನೆ

US DOJ defends dropping Gautam Adani case, says charges were flawed

ನ್ಯೂಯಾರ್ಕ್‌, ಜುಲೈ 5- ಜಾಗತಿಕ ಉದ್ಯಮಿ ಗೌತಮ್‌ ಅದಾನಿ ಹಾಗೂ ಇತರ ಏಳು ಮಂದಿಯ ವಿರುದ್ಧದ ಕ್ರಿಮಿನಲ್‌ ಆರೋಪಗಳನ್ನು ಕೈಬಿಡುವ ಅಮೆರಿಕದ ನ್ಯಾಯ ಇಲಾಖೆಯ ನಿರ್ಧಾರವು ಹೂಡಿಕೆ ಯೋಜನೆಗೆ ಸಂಬಂಧಿಸಿದ್ದಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಫೆಡರಲ್‌ ನ್ಯಾಯಾಧೀಶರು ಹೆಚ್ಚಿನ ವಿವರಣೆ ನೀಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಸಲ್ಲಿಸಿದ ದಾಖಲೆಗಳಲ್ಲಿ, ಪ್ರಿನ್ಸಿಪಲ್‌ ಅಸೋಸಿಯೇಟ್‌ ಡೆಪ್ಯುಟಿ ಅಟಾರ್ನಿ ಜನರಲ್‌ ಆರ್‌. ಟ್ರೆಂಟ್‌ ಮೆಕ್‌ಕೋಟರ್‌ ಅವರು, ಅದಾನಿ ಸಮೂಹದ ಸುಮಾರು 10 ಬಿಲಿಯನ್‌ ಡಾಲರ್‌ ಹೂಡಿಕೆ ಹೂಡಿಕೆ ಯೋಜನೆಯ ಕಾರಣದಿಂದಲೇ ಪ್ರಕರಣವನ್ನು ಕೈಬಿಡಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿಹಾಕಿದ್ದಾರೆ.

ಅದಾನಿ ಸಮೂಹವು ಅಮೆರಿಕದಲ್ಲಿ ಹೂಡಿಕೆ ಮಾಡುವ ಭರವಸೆಯ ಹಿನ್ನೆಲೆಯಲ್ಲಿ ನಾನು ಪ್ರಕರಣವನ್ನು ಹಿಂಪಡೆಯಲು ಮುಂದಾದೆ ಎಂಬುದು ಸಂಪೂರ್ಣ ಸುಳ್ಳು. ಹೂಡಿಕೆಯ ವಿಷಯ ಪ್ರಸ್ತಾಪವಾಗುವುದಕ್ಕೂ ಮುನ್ನವೇ ಈ ಪ್ರಕರಣವನ್ನು ಕೈಬಿಡಬೇಕು ಎಂಬ ತೀರ್ಮಾನಕ್ಕೆ ಬಂದಿದ್ದೆ. ಹೂಡಿಕೆ ಪ್ರಸ್ತಾಪವು ನಮ್ಮ ನಿರ್ಧಾರದಲ್ಲಿ ಯಾವುದೇ ಪಾತ್ರ ವಹಿಸಿಲ್ಲ,ಎಂದು ಮೆಕ್‌ಕಾಟರ್‌ ಹೇಳಿದ್ದಾರೆ.

ಕೆಲವು ಅಮೆರಿಕನ್‌ ಮಾಧ್ಯಮಗಳು, ಅದಾನಿ ಹೊಸ ಕಾನೂನು ತಂಡವನ್ನು ನೇಮಿಸಿಕೊಂಡ ಬಳಿಕ ಪ್ರಕರಣ ಕೈಬಿಡಲಾಗಿದೆ ಎಂದು ವರದಿ ಮಾಡಿದ್ದವು. ಆ ತಂಡದ ನೇತೃತ್ವವನ್ನು ಅಧ್ಯಕ್ಷ ಟಂಪ್‌ ಅವರ ವೈಯಕ್ತಿಕ ವಕೀಲರಾಗಿರುವ ರಾಬರ್ಟ್‌ ಜೆ. ಗಿಯುಫ್ರಾ ಜೂನಿಯರ್‌ ವಹಿಸಿದ್ದರು.
ವರದಿಗಳ ಪ್ರಕಾರ, ನ್ಯಾಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಸುಮಾರು 100 ಸ್ಲೈಡ್‌ಗಳ ಪ್ರಸ್ತುತಿ ನೀಡಲಾಗಿದ್ದು, ಪ್ರಕರಣಕ್ಕೆ ಅಗತ್ಯ ಸಾಕ್ಷ್ಯ ಹಾಗೂ ನ್ಯಾಯವ್ಯಾಪ್ತಿಯ ಕೊರತೆಯ ಬಗ್ಗೆ ವಿವರಿಸಲಾಗಿತ್ತು. ಅಲ್ಲದೆ, ಆರೋಪಗಳನ್ನು ಕೈಬಿಟ್ಟರೆ ಅದಾನಿ ಸಮೂಹವು ಅಮೆರಿಕದಲ್ಲಿ 10 ಬಿಲಿಯನ್‌ ಡಾಲರ್‌ ಹೂಡಿಕೆ ಮಾಡಿ 15,000 ಉದ್ಯೋಗಗಳನ್ನು ಸೃಷ್ಟಿಸಲು ಸಿದ್ಧವಿದೆ ಎಂಬ ಪ್ರಸ್ತಾಪವನ್ನೂ ಮಾಡಲಾಗಿತ್ತು ಎನ್ನಲಾಗಿತ್ತು.

ಆದರೆ, ಇಂತಹ ವರದಿಗಳು ನ್ಯಾಯ ಇಲಾಖೆಯ ಹಾಲಿ ಅಥವಾ ಮಾಜಿ ಅಧಿಕಾರಿಗಳಿಂದ ಅನೈತಿಕವಾಗಿ ಸೋರಿಕೆಯಾಗಿವೆ ಎಂದು ಮೆಕ್‌ಕಾಟರ್‌ಆರೋಪಿಸಿದ್ದಾರೆ.2024ರಲ್ಲಿ ಹಿಂದಿನ ಆಡಳಿತದ ಅವಧಿಯಲ್ಲಿ ಅಮೆರಿಕದ ನ್ಯಾಯ ಇಲಾಖೆ, ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಸುಮಾರು 250 ಮಿಲಿಯನ್‌ ಡಾಲರ್‌ ಲಂಚ ನೀಡುವ ಸಂಚು ಹಾಗೂ ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿ ಬಂಡವಾಳ ಸಂಗ್ರಹಿಸಿದ ಆರೋಪದಡಿ ಅದಾನಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿತ್ತು. ಈ ಅವಧಿಯಲ್ಲಿ ಅದಾನಿ ಗ್ರೀನ್‌ ಎನರ್ಜಿ ಲಿಮಿಟೆಡ್‌ ಅಮೆರಿಕದ ಹೂಡಿಕೆದಾರರಿಂದ ಕನಿಷ್ಠ 175 ಮಿಲಿಯನ್‌ ಡಾಲರ್‌ ಸಂಗ್ರಹಿಸಿತ್ತು ಎಂದು ಆರೋಪಿಸಲಾಗಿತ್ತು.

ಈ ನಡುವೆ, ಫೆಡರಲ್‌ ಜಿಲ್ಲಾ ನ್ಯಾಯಾಧೀಶ ನಿಕೋಲಸ್‌‍ ಗರೌಫಿಸ್‌‍ ಅವರು ಪ್ರಕರಣ ಕೈಬಿಡುವ ಸಂಬಂಧ ನ್ಯಾಯ ಇಲಾಖೆಯ ಹಿಂದಿನ ಅರ್ಜಿಯನ್ನು ಅಪೂರ್ಣ ಮತ್ತು ಸಮರ್ಪಕ ಕಾರಣಗಳಿಲ್ಲದ ಅರ್ಜಿ ಎಂದು ಟೀಕಿಸಿ, ಹೆಚ್ಚಿನ ವಿವರಣೆ ನೀಡುವಂತೆ ಸೂಚಿಸಿದ್ದರು.
ನ್ಯಾಯ ಇಲಾಖೆ ತನ್ನ ಹೊಸ ಅರ್ಜಿಯಲ್ಲಿ, ಈ ಪ್ರಕರಣ ಕಾನೂನುಬದ್ಧವಾಗಿ ದುರ್ಬಲವಾಗಿದ್ದು, ಬಹುತೇಕ ಘಟನೆಗಳು ಭಾರತದಲ್ಲೇ ನಡೆದಿವೆ, ಭಾರತೀಯ ಅಧಿಕಾರಿಗಳು ತನಿಖೆ ನಡೆಸಿ ಯಾವುದೇ ಕ್ರಮ ಕೈಗೊಳ್ಳುವಂತಹ ಅಕ್ರಮ ಪತ್ತೆಹಚ್ಚಿಲ್ಲ, ಹೂಡಿಕೆದಾರರಿಗೆ ನಷ್ಟವಾಗಿಲ್ಲ,

ಪ್ರಮುಖ ಸಾಕ್ಷ್ಯ ಮತ್ತು ಸಾಕ್ಷಿದಾರರು ಅಮೆರಿಕದ ಹೊರಗಿದ್ದಾರೆ ಹಾಗೂ ಆರೋಪಿಗಳು ಅಮೆರಿಕದ ನ್ಯಾಯಾಲಯದ ಮುಂದೆ ಹಾಜರಾಗುವ ಸಾಧ್ಯತೆ ಕಡಿಮೆ ಎಂದು ವಾದಿಸಿದೆ.
ಇದಲ್ಲದೆ, ವಿದೇಶಿ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ದಾಖಲಿಸಲಾದ ಆರೋಪಗಳೂ ಈಗಿನ ಟ್ರಂಪ್‌ ಆಡಳಿತದ ಜಾರಿ ನೀತಿಗೆ ಹೊಂದಿಕೆಯಾಗುವುದಿಲ್ಲ. ಈ ನೀತಿಯು ಅಮೆರಿಕದ ರಾಷ್ಟ್ರೀಯ ಭದ್ರತೆ, ಅಮೆರಿಕದ ಕಂಪನಿಗಳು ಅಥವಾ ಅಂತರರಾಷ್ಟ್ರೀಯ ಅಪರಾಧ ಸಂಘಟನೆಗಳಿಗೆ ಸಂಬಂಧಿಸಿದ ಪ್ರಕರಣಗಳಿಗೆ ಆದ್ಯತೆ ನೀಡುತ್ತದೆ ಎಂದು ನ್ಯಾಯ ಇಲಾಖೆ ತಿಳಿಸಿದೆ.ಪ್ರಕರಣವನ್ನು ಇನ್ನಷ್ಟು ವಿಳಂಬವಿಲ್ಲದೆ ಸಂಪೂರ್ಣವಾಗಿ ಕೈಬಿಡುವಂತೆ ನ್ಯಾಯಾಲಯವನ್ನು ನ್ಯಾಯ ಇಲಾಖೆ ಕೋರಿದೆ.

RELATED ARTICLES

Latest News