Sunday, May 19, 2024
Homeರಾಷ್ಟ್ರೀಯ'ಹಿಂದೂ ವಿರೋಧಿ' ಅಸ್ತ್ರ ಝಳಪಿಸಿ ಕಾಂಗ್ರೆಸ್ ವಿರುದ್ಧ ಮೋದಿ ಸಿಡಿಲಬ್ಬರದ ಭಾಷಣ

‘ಹಿಂದೂ ವಿರೋಧಿ’ ಅಸ್ತ್ರ ಝಳಪಿಸಿ ಕಾಂಗ್ರೆಸ್ ವಿರುದ್ಧ ಮೋದಿ ಸಿಡಿಲಬ್ಬರದ ಭಾಷಣ

ಜೈಪುರ,ಆ.23- ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಹನುಮಾನ್ ಚಾಲೀಸಾ ನುಡಿಸುವಂತಿಲ್ಲ. ಜೈಶ್ರೀರಾಮ್ ಎನ್ನುವವರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರಮೋದಿ ಅವರು ಮತ್ತೆ ಕೈ ಪಕ್ಷದ ಮೇಲೆ ಬೆಂಕಿ ಉಗುಳಿದ್ದಾರೆ.

ಕರ್ನಾಟಕದ ರಾಜಧಾನಿ ಬೆಂಗಳೂರಿನ ಎಚ್‍ಎಎಲ್ ಬಳಿಯ ಕುಂದಲಹಳ್ಳಿಯ ರಾಮೇಶ್ವರ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಪೋಟ ಪ್ರಕರಣವನ್ನು ಪ್ರಸ್ತಾಪಿಸಿದ ಅವರು, ಕಾಂಗ್ರೆಸ್ ಆಡಳಿತ ಇರುವ ಕಡೆ ಬಾಂಬ್ ದಾಳಿಯಾಗುತ್ತದೆ. ಯಾರೊಬ್ಬರಿಗೂ ನೆಮ್ಮದಿಯಾಗಿ ಬದುಕುವ ಗ್ಯಾರಂಟಿ ಇಲ್ಲ ಎಂದು ಕೆಂಡಕಾರಿದರು.

ರಾಜಸ್ಥಾನದ ಬನ್ಸ್ವಾರದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ ನರೇಂದ್ರಮೋದಿ ಅವರು ಮತ್ತೆ ಕಾಂಗ್ರೆಸ್ ವಿರುದ್ಧ ಅಕ್ಷರಶಃ ಸಿಡಿಲಬ್ಬರದ ಭಾಷಣ ಮಾಡಿದರು.ತಮ್ಮ ಭಾಷಣದಲ್ಲಿ ಕರ್ನಾಟಕದಲ್ಲಿ ನಡೆದ ಕೆಲವು ಘಟನೆಗಳನ್ನು ಪ್ರಸ್ತಾಪಿಸಿದ ಮೋದಿ, ಕಾಂಗ್ರೆಸ್ ಆಡಳಿತವಿರುವ ಈ ರಾಜ್ಯದಲ್ಲಿ ಹನುಮಾನ್ ಚಾಲೀಸ ಪಠಿಸಿದರೆ ಮಹಾನ್ ಅಪರಾಧ, ಜೈ ಶ್ರೀರಾಮ್ ಎಂದು ಹೇಳಬೇಡಿ ಎಂದು ನಮ್ಮ ಯುವಕರ ಮೇಲೆ ಹಲ್ಲೆಯಾಗುತ್ತದೆ, ಎಲ್ಲೆಂದರಲ್ಲಿ ಬಾಂಬ್ ಸ್ಪೋಟವಾಗುತ್ತಿದೆ, ವಿದ್ಯಾರ್ಥಿನಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಜನರಿಗೆ ಬದುಕುವ ಗ್ಯಾರಂಟಿ ಕಾಂಗ್ರೆಸ್ ಕೊಡುತ್ತದೆಯೇ ಎಂದು ಪ್ರಶ್ನೆ ಮಾಡಿದರು.

ರಾಮನವಮಿಯಂದು ಶೋಭಾಯಾತ್ರೆಯ ಮೆರಣವಣಿಗೆಗೆ ಕೆಲವರು ಅಡ್ಡಿಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಮನವಮಿ ಹಬ್ಬವನ್ನು ನಿಷೇಧಿಸಿತ್ತು. ಸಂಪತ್ತಿನ ಮರುಹಂಚಿಕೆ ಮಾಡುತ್ತೇವೆ ಎಂದು ನಾನು ಹೇಳಿದ್ದಕ್ಕೆ ಕಾಂಗ್ರೆಸ್ ಮಾತ್ರವಲ್ಲದೆ ಇಂಡಿಯಾ ಮೈತ್ರಿಕೂಟದ ನಾಯಕರು ನನ್ನ ವಿರುದ್ಧ ವೈಯಕ್ತಿಕ ಚಾರಿತ್ರ್ಯ ಹರಣ ಮಾಡುತ್ತಿದ್ದಾರೆ.

ನನ್ನ ಮಾತು ಅವರಿಗೆ ಎಷ್ಟು ಕೆರಳಿಸಿದೆ ಎಂದರೆ ಎಲ್ಲೆಡೆ ಮೋದಿ ನಿಂದನೆ ಮಾಡುವ ಒಂದಂಶದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ನಿಮ್ಮ ಸಂಪತ್ತನ್ನು ಕಿತ್ತುಕೊಂಡು ಬೇರೆಯವರಿಗೆ ಹಂಚುತ್ತೇನೆ ಎಂದರೆ ನಾವು ಸುಮ್ಮನಿರಬೇಕೆ ಎಂದು ಮತದಾರರನ್ನು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷದ ತುಷ್ಟೀಕರಣದ ನೀತಿಯನ್ನು ನಾನು ಬಹಿರಂಗಪಡಿಸಿದ್ದಕ್ಕೆ ನನ್ನ ವಿರುದ್ಧ ಬಳಸಬಾರದ ಪದಗಳನ್ನೆಲ್ಲ ಬಳಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸತ್ಯ ಹೇಳಿದರೆ ಸಹಿಸಿಕೊಳ್ಳುವುದಿಲ್ಲ. ಏಕೆಂದರೆ ಅವರು ಅಧಿಕಾರದುದ್ದಕ್ಕೂ ಸುಳ್ಳುಗಳನ್ನೇ ಹೇಳಿಕೊಂಡು ಬಂದಿದ್ದರು.

ಅವರ ಹಿಡನ್ ಅಜೆಂಡಾವನ್ನು ನಾನು ಬಯಲು ಮಾಡಿದ್ದಕ್ಕೆ ನನ್ನ ವಿರುದ್ಧ ಆಧಾರ ರಹಿತ ಟೀಕೆಗಳನ್ನು ಮಾಡುತ್ತಿದ್ದಾರೆ. ಅವರು ಎಷ್ಟು ಟೀಕೆ ಮಾಡುತ್ತಾರೋ ನನಗೆ ಮತದಾರರ ಆಶೀರ್ವಾದ ಸಿಗುತ್ತದೆ ಎಂದು ಹೇಳಿದರು.

ಧರ್ಮ ಆಧರಿತ ಮೀಸಲಾತಿ ಇಲ್ಲ:
ಇನ್ನು ನರೇಂದ್ರಮೋದಿ ಅವರು ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಎಸ್ಸಿ-ಎಸ್ಟಿ ಮತ್ತು ಒಬಿಸಿಗಳ ಮೀಸಲಾತಿಯನ್ನು ಕಿತ್ತುಕೊಂಡು ಅಲ್ಪಸಂಖ್ಯಾತರಿಗೆ ನೀಡಲು ಮುಂದಾಗಿದೆ. ನೀವು ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ನಿಮ್ಮ ಮಕ್ಕಳು ಬದುಕುವುದೇ ಕಷ್ಟವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶವಿಲ್ಲ. ಆದರೆ ಕಾಂಗ್ರೆಸ್ ನಾಯಕರು ದಲಿತರು, ಹಿಂದುಳಿದವರು, ಬುಡಕಟ್ಟು ಜನಾಂಗದವರಿಗೆ ಸಂವಿಧಾನಬದ್ದವಾಗಿ ನೀಡುವ ಮೀಸಲಾತಿಯನ್ನು ಕಿತ್ತುಕೊಂಡು ಮುಸ್ಲಿಮರಿಗೆ ನೀಡಲು ಹೊರಟಿದೆ ಎಂದು ನೇರವಾಗಿಯೇ ವಾಗ್ದಾಳಿ ನಡೆಸಿದರು.

2004ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ತಕ್ಷಣವೇ ಆಂಧ್ರಪ್ರದೇಶದಲ್ಲಿ ಎಸ್ಸಿ-ಎಸ್ಟಿ ಮೀಸಲಾತಿಯನ್ನು ಸ್ಥಗಿತಗೊಳಿಸಿ ಮುಸ್ಲಿಮರಿಗೆ ಮೀಸಲಾತಿ ಹೆಚ್ಚಳ ಮಾಡುವುದೇ ಅವರ ಕಾರ್ಯಕ್ರಮಗಳಲ್ಲಿ ಒಂದಾಗಿತ್ತು. ಆದರೆ ಇದಕ್ಕೆ ನ್ಯಾಯಾಲಯ ಅವಕಾಶ ಕೊಡಲಿಲ್ಲ ಎಂದು ಮೋದಿ ನೆನಪಿಸಿದರು.

ಯಾವುದೇ ಕಾರಣಕ್ಕೂ ದಲಿತರು, ಹಿಂದುಳಿದವರು, ಬುಡಕಟ್ಟು ಜನಾಂಗದವರ ಮೀಸಲಾತಿಯನ್ನು ಕಿತ್ತುಕೊಳ್ಳಲು ಅವಕಾಶ ನೀಡುವುದಿಲ್ಲ. ಇದಲ್ಲದೆ ಧರ್ಮದ ಹೆಸರಿನಲ್ಲಿ ವಿಭಜಿಸುವುದಕ್ಕೂ ಅವಕಾಶ ಕೊಡುವುದಿಲ್ಲ. ನಾನು ಇದನ್ನು ನನ್ನ ಹೃದಯಾಂತರಾಳದಿಂದ ಹೇಳುತ್ತಿದ್ದೇನೆ. ನಿಮ್ಮೆಲ್ಲರ ಹಿತ ಕಾಪಾಡೇ ಕಾಪಾಡುತ್ತೇವೆ ಎಂದು ಭರವಸೆ ನೀಡಿದರು.

ಸಂವಿಧಾನವನ್ನು ಅರ್ಥ ಮಾಡಿಕೊಳ್ಳದ ಕೆಲವರು ಬಾಯಿಗೆ ಬಂದಂತೆ ನಾವು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಆರಾಸುವವರು. ಅವರು ದೇಶಕ್ಕೆ ಕೊಟ್ಟ ಸಂವಿಧಾನದಲ್ಲಿ ನಂಬಿಕೆ ಇಟ್ಟು ಮುನ್ನಡೆಯುತ್ತಿದ್ದೇವೆ. ನಮ್ಮ ಸರ್ಕಾರ ಸಂವಿಧಾನಕ್ಕೆ ಸಮರ್ಪಕವಾಗಿಯೇ ನಡೆದುಕೊಂಡು ಹೋಗುತ್ತಿದೆ ಎಂದು ಮೋದಿ ಹೇಳಿದರು.

RELATED ARTICLES

Latest News