ಜೋರ್ಹಾಟ್, ಜೂನ್ 13-ಅಸ್ಸಾಂನ ಜೋರ್ಹಾಟ್‌ನಲ್ಲಿ ಭಾರತೀಯ ವಾಯುಪಡೆಯ ಎಎನ್-32 ಸಾರಿಗೆ ವಿಮಾನವು ನಿಯಮಿತ ತರಬೇತಿ ಹಾರಾಟದ ವೇಳೆ ಅಪಘಾತಕ್ಕೀಡಾಗಿದ್ದು, ಈ ದುರಂತದಲ್ಲಿ ಐವರು ವಾಯುಪಡೆ ಸಿಬ್ಬಂದಿ ಹುತಾತ್ಮ ರಾಗಿದ್ದಾರೆ.
ಭಾರತೀಯ ವಾಯುಪಡೆ (ಐಎಎಫ್) ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ಹೊರಡಿಸಿ, ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ಅಸ್ಸಾಂನ ಜೋರ್ಹಾಟ್‌ನಲ್ಲಿ ನಿಯಮಿತ ಕಾರ್ಯಾಚರಣೆಯ ಹಾರಾಟದ ವೇಳೆ ಐಎಎಫ್‌ನ ಎಎನ್-32 ವಿಮಾನ ಅಪಘಾತಕ್ಕೀಡಾಯಿತು.ಅಪಘಾತ ಸ್ಥಳದ ನಿರ್ವಹಣೆ ಹಾಗೂ ಪ್ರಾಥಮಿಕ ತನಿಖೆ ನಡೆಯುತ್ತಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಎಎನ್-32 ವಿಮಾನವು ಜೋರ್ಹಾಟ್ ವಾಯುಪಡೆ ನೆಲೆಯ ಆವರಣದಲ್ಲೇ ಲ್ಯಾಂಡಿಂಗ್ ವೇಳೆ ಪತನಗೊಂಡಿದೆ.ಅಪಘಾತದ ನಂತರ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತುರ್ತು ರಕ್ಷಣಾ ತಂಡಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿವೆ.
ದುರಂತದಲ್ಲಿ ಸ್ಕ್ವಾಡ್ರನ್ ಲೀಡರ್ ಪ್ರಶಾಂತ್ ಸಿಂಗ್,ಫ್ಲೈಟ್ ಲೆಫ್ಟಿನೆಂಟ್ ಶುಭಂ ಕುಮಾರ್, ಸಾರ್ಜೆಂಟ್ ಜಿತೇಂದ್ರ ಶರ್ಮಾ,ಅಗ್ನಿವೀರ್‌ವಾಯು ಖೇಮಾರಾಮ್ ಕುಮಾವತ್‌ಮತ್ತು ಅಗ್ನಿವೀರ್‌ವಾಯು ದಾನಿಶ್ ಆಲಂ ಹುತಾತರಾಗಿದ್ದಾರೆ.
ಈ ದುರ್ಘಟನೆಯಲ್ಲಿ ಜೀವಹಾನಿಯಾಗಿರುವುದಕ್ಕೆ ಭಾರತೀಯ ವಾಯುಪಡೆ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ. ಈ ದುಃಖದ ಸಮಯದಲ್ಲಿ ಮೃತರ ಕುಟುಂಬಗಳೊಂದಿಗೆ ನಾವು ದೃಢವಾಗಿ ನಿಂತಿದ್ದೇವೆ ಎಂದು ತಿಳಿಸಿದೆ.
ದೇಶಸೇವೆಯ ಪವಿತ್ರ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಈ ಐವರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ವಾಯುಪಡೆ ತಿಳಿಸಿದೆ.ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ವಾಯುಪಡೆಯ ಅಧಿಕಾರಿಗಳು ಸ್ಥಳದಲ್ಲೇ ತನಿಖೆ ಆರಂಭಿಸಿದ್ದು, ವಿಮಾನ ಪತನಕ್ಕೆ ಕಾರಣವಾದ ತಾಂತ್ರಿಕ ಅಥವಾ ಇತರ ಅಂಶಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
