Homeರಾಷ್ಟ್ರೀಯವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ರಾಷ್ಟ್ರ ವಿರೋಧಿ ಘೋಷಣೆ : ದಿಕ್ಕು ತಪ್ಪಿದ ಹೋರಾಟ

ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ರಾಷ್ಟ್ರ ವಿರೋಧಿ ಘೋಷಣೆ : ದಿಕ್ಕು ತಪ್ಪಿದ ಹೋರಾಟ

Anti-national slogans during student protest

ನವದೆಹಲಿ,ಜು.22- ದೇಶಾದ್ಯಂತ ಭಾರೀ ಸಂಚಲನ ಮೂಡಿಸಿರುವ ನೀಟ್‌‍ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅವ್ಯವಸ್ಥೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟ ನೆಯು ಹೊಸ ತಿರುವು ಪಡೆದುಕೊಂಡಿದೆ.ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಯ ನೆಪದಲ್ಲಿ ದೇಶದಲ್ಲಿ ರಾಜಕೀಯ ಅಸ್ಥಿರತೆ ಹಾಗೂ ಗೊಂದಲ ಸೃಷ್ಟಿಸಲು ಕೆಲ ರಾಷ್ಟ್ರವಿರೋಧಿ ಅಥವಾ ತೀವ್ರಗಾಮಿ ಸಿದ್ಧಾಂತದ ಶಕ್ತಿಗಳುಈ ಚಳವಳಿಯ ಲಾಭ ಪಡೆಯಲು ಯತ್ನಿಸುತ್ತಿವೆ ಎಂಬ ಆರೋಪಗಳು ಕೇಳಿಬಂದಿವೆ.

ಜಂತರ್‌ ಮಂತರ್‌ನಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಯುವಜನ ಸಂಘಟನೆಗಳು ಬೃಹತ್‌ ಪ್ರತಿಭಟನೆಗಳನ್ನು ನಡೆಸುತ್ತಿದ್ದು, ರಸ್ತೆಗಳಲ್ಲಿ ಆಕ್ರೋಶದ ಕೂಗುಗಳಿಂದ ಮೊಳಗುತ್ತಿವೆ. ಆದರೆ, ದಿನಗಳು ಕಳೆದಂತೆ ವಿದ್ಯಾರ್ಥಿಗಳ ನ್ಯಾಯಯುತ ಕೂಗು ರಾಜಕೀಯ ಕೆಸರೆರಚಾಟದ ನಡುವೆ ದಿಕ್ಕು ತಪ್ಪುತ್ತಿದೆಯೇ? ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ಕಾಡಲಾರಂಭಿಸಿದೆ.ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಆರಂಭವಾದ ಈ ನ್ಯಾಯಯುತ ಹೋರಾಟವು ಇದೀಗ ಕೆಲವರ ಸ್ವಾರ್ಥ ರಾಜಕಾರಣ ಹಾಗೂ ಕಿಡಿಗೇಡಿಗಳ ಹಸ್ತಕ್ಷೇಪದಿಂದಾಗಿ ತನ್ನ ಮೂಲ ಉದ್ದೇಶದಿಂದ ದಿಕ್ಕು ತಪ್ಪುತ್ತಿದೆಯೆಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಆರಂಭದಲ್ಲಿ ಪೂರ್ಣವಾಗಿ ವಿದ್ಯಾರ್ಥಿಗಳ ಭವಿಷ್ಯ ಮತ್ತು ನ್ಯಾಯದ ಪರವಾಗಿದ್ದ ಈ ಹೋರಾಟ, ಪ್ರಸ್ತುತ ಹಲವು ಹಿತಾಸಕ್ತಿಗಳ ಸಂಘರ್ಷಕ್ಕೆ ವೇದಿಕೆಯಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧ ನಡೆಯಬೇಕಿದ್ದ ಸ್ಪಷ್ಟ ಹೋರಾಟವು, ರಾಜಕೀಯ ಹಾಗೂ ಸಮಾಜವಿರೋಧಿ ಶಕ್ತಿಗಳ ಹಸ್ತಕ್ಷೇಪದಿಂದಾಗಿ ದಿಕ್ಕು ತಪ್ಪುತ್ತಿದೆ ಎಂದು ಪೋಷಕರು ಮತ್ತು ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವುದಕ್ಕಿಂತ ಹೆಚ್ಚಾಗಿ ವಿವಿಧ ರಾಜಕೀಯ ಪಕ್ಷಗಳು ಇದನ್ನು ಪರ-ವಿರೋಧದ ಅಸ್ತ್ರವಾಗಿ ಬಳಸಿಕೊಳ್ಳುತ್ತಿವೆ. ಜಂತರ್‌ ಮಂತರ್‌ನಲ್ಲಿ ವಿದ್ಯಾರ್ಥಿಗಳ ಧ್ವನಿಗಿಂತ ರಾಜಕೀಯ ನಾಯಕರ ಭಾಷಣಗಳು ಹಾಗೂ ಮೈಕ್‌ ಸದ್ದುಗಳೇ ಹೆಚ್ಚಾಗುತ್ತಿವೆ.ಒಂದು ಗುಂಪು ಮರು ಪರೀಕ್ಷೆ ನಡೆಯಲೇಬೇಕು ಎಂದು ಪಟ್ಟು ಹಿಡಿದಿದ್ದರೆ, ಕಷ್ಟಪಟ್ಟು ಓದಿ ಉತ್ತಮ ಅಂಕ ಪಡೆದ ಇನ್ನೊಂದು ಗುಂಪಿನ ವಿದ್ಯಾರ್ಥಿಗಳು ಮರು ಪರೀಕ್ಷೆಯಿಂದ ನಮಗೆ ಅನ್ಯಾಯವಾಗುತ್ತದೆ, ಅಕ್ರಮ ಎಸಗಿದವರನ್ನು ಮಾತ್ರ ಶಿಕ್ಷಿಸಿ ಎಂದು ಆಗ್ರಹಿಸುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿ ಸಮುದಾಯವೇ ಇಬ್ಭಾಗವಾಗಿದೆ.

ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಬೇಕಾದ ವೇದಿಕೆಯಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯ ವೇಳೆ ದೇಶದ ಸಾರ್ವಭೌಮತೆಗೆ ಧಕ್ಕೆ ತರುವಂತಹ ಭಾರತ ವಿರೋಧಿ ಘೋಷಣೆಗಳು ಮೊಳಗಿವೆ ಎಂದು ವರದಿಯಾಗಿದೆ. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್‌ಎಸ್‌‍ಎಸ್‌‍ ವಿರುದ್ಧ ತೀವ್ರ ಸ್ವರೂಪದ ಧಿಕ್ಕಾರದ ಘೋಷಣೆಗಳನ್ನು ಕೂಗಲಾಗಿದೆ.

ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಯಾಗಿರಬೇಕಾದ ಈ ವಿಷಯವು ಸಂಪೂರ್ಣವಾಗಿ ರಾಜಕೀಯ ಪ್ರೇರಿತ ಮತ್ತು ದಿಕ್ಕು ತಪ್ಪಿದ ಸ್ವರೂಪ ಪಡೆದುಕೊಳ್ಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸ್ವಾರ್ಥ ಲಾಭಕ್ಕೆ ಹೋರಾಟದ ದುರ್ಬಳಕೆ :
ಈ ಬೆಳವಣಿಗೆಗಳ ಕುರಿತು ತೀವ್ರ ಕಳಳವಳ ವ್ಯಕ್ತಪಡಿಸಿರುವ ಎಎಪಿಯು ವಿದ್ಯಾರ್ಥಿಗಳ ನೋವನ್ನು ಕೆಲವರು ತಮ ಸ್ವಂತ ರಾಜಕೀಯ ಹಾಗೂ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ನೇರ ಆರೋಪ ಮಾಡಿದೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯಾಗಿರುವ ಈ ಗಂಭೀರ ಪ್ರಕರಣವನ್ನು ದಿಕ್ಕು ತಪ್ಪಿಸಿ, ತಮ ಬೇಳೆ ಬೇಯಿಸಿಕೊಳ್ಳಲು ಕೆಲವು ಗುಂಪುಗಳು ಯತ್ನಿಸುತ್ತಿರುವುದನ್ನು ಖಂಡಿಸಿದೆ.

ಪ್ರಧಾನಿ ನಿವಾಸದ ಎದುರು ಪ್ರತಿಭಟನೆ :
ಕಾಂಗ್ರೆಸ್‌‍ ನಾಯಕರು ಮತ್ತು ಕಾರ್ಯಕರ್ತರು ವಿವಿಧ ಸಾರ್ವಜನಿಕ/ರಾಜಕೀಯ ವಿಷಯಗಳನ್ನು ಮುನ್ನೆಲೆಗೆ ತಂದು ಪ್ರಧಾನಮಂತ್ರಿಯವರ ಅಧಿಕೃತ ನಿವಾಸದತ್ತ ಮೆರವಣಿಗೆ ನಡೆಸಿ ಮುತ್ತಿಗೆ ಹಾಕಲು ಯತ್ನಿಸಿದರು. ಪ್ರತಿಭಟನೆಯಲ್ಲಿ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್‌‍ನ ಪ್ರಮುಖ ಮುಖಂಡರು ಭಾಗವಹಿಸಿದ್ದರು.ಕಾಂಗ್ರೆಸ್‌‍ ನಡೆಸಿದ ಈ ಪ್ರತಿಭಟನೆಯ ವಿರುದ್ಧ ಆಮ್‌ ಆದಿ ಪಾರ್ಟಿಯ ನಾಯಕರು ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌‍ ಕೈಗೊಂಡಿರುವ ಈ ರೀತಿಯ ದಿಢೀರ್‌ ಪ್ರತಿಭಟನೆಗಳು ಸಾರ್ವಜನಿಕರ ನೈಜ ಸಮಸ್ಯೆಗಳ ಹೋರಾಟದ ದಿಕ್ಕನ್ನು ತಪ್ಪಿಸುತ್ತಿವೆ. ಮಾಧ್ಯಮಗಳ ಗಮನ ಸೆಳೆಯಲು ಮಾತ್ರ ಇಂತಹ ನಾಟಕೀಯ ಹೋರಾಟಗಳನ್ನು ಮಾಡಲಾಗುತ್ತಿದೆ ಎಂದು ಎಎಪಿ ನಾಯಕರು ಆರೋಪಿಸಿದ್ದಾರೆ.

ರಾಷ್ಟ್ರವಿರೋಧಿ ದ್ರೋಹಿಗಳ ಭಾಗಿ ಶಂಕೆ :
ಪ್ರತಿಭಟನೆಯ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸುತ್ತಿರುವವರ ಮುಖವಾಡದ ಹಿಂದೆ ರಾಷ್ಟ್ರ ವಿರೋಧಿ ಶಕ್ತಿಗಳು ಮತ್ತು ದೇಶದ್ರೋಹಿಗಳು ಅಡಗಿ ಕುಳಿತಿದ್ದಾರೆ ಎಂಬ ಗಂಭೀರ ಶಂಕೆ ಈಗ ವ್ಯಕ್ತವಾಗಿದೆ.
ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕಿ, ವ್ಯವಸ್ಥೆಯ ವಿರುದ್ಧ ಅಶಾಂತಿ ಸೃಷ್ಟಿಸಲು ಮತ್ತು ದೇಶದಲ್ಲಿ ಒಡೆದಾಳುವ ನೀತಿಯನ್ನು ಅನುಸರಿಸಲು ಈ ಕೃತ್ಯ ಎಸಗಲಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ. ಕಳೆದ ಕೆಲವು ತಿಂಗಳುಗಳಿಂದ ನೀಟ್‌ ಪರೀಕ್ಷಾ ಅಕ್ರಮದ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿ ಸಮುದಾಯ ಹಾಗೂ ವಿವಿಧ ಸಂಘಟನೆಗಳು ಕಾನೂನುಬದ್ಧವಾಗಿ ಮತ್ತು ಶಾಂತಿಯುತವಾಗಿ ಹೋರಾಟ ನಡೆಸುತ್ತಾ ಬಂದಿದ್ದವು. ನ್ಯಾಯಾಲಯದ ಮೆಟ್ಟಿಲೇರುವುದು, ಮರುಪರೀಕ್ಷೆಗೆ ಆಗ್ರಹಿಸುವುದು ಮತ್ತು ಪಾರದರ್ಶಕತೆಗೆ ಒತ್ತಾಯಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು.

ಭಾರತ ವಿರೋಧಿ ಘೋಷಣೆಗಳು :
ಪ್ರತಿಭಟನಾ ಸ್ಥಳದಲ್ಲಿ ಹಠಾತ್ತಾಗಿ ಭಾರತ ವಿರೋಧಿ ಹಾಗೂ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಹ ಘೋಷಣೆಗಳು ಮೊಳಗಿರುವುದು ವರದಿಯಾಗಿದೆ. ಮೂಲ ಬೇಡಿಕೆಗಳಿಗೂ ಹಾಗೂ ಸ್ಥಳದಲ್ಲಿ ಕೂಗಲಾದ ವಿವಾದಾತಕ ಘೋಷಣೆಗಳಿಗೂ ಯಾವುದೇ ಸಂಬಂಧವಿಲ್ಲದಿರುವುದು ಸಾರ್ವಜನಿಕರ ಹಾಗೂ ಭದ್ರತಾ ಸಂಸ್ಥೆಗಳ ಹುಬ್ಬೇರಿಸಿದೆ. ಈ ರೀತಿಯ ನಡವಳಿಕೆಯಿಂದಾಗಿ ಹೋರಾಟದ ನಿಜವಾದ ಉದ್ದೇಶವೇ ಹಳಿ ತಪ್ಪುತ್ತಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಹೋರಾಟದ ತೀವ್ರತೆ ಹಾಗೂ ಶೈಲಿಯನ್ನು ಗಮನಿಸಿದಾಗ, ಇದರ ಹಿಂದೆ ರಾಷ್ಟ್ರ ವಿರೋಧಿ ದ್ರೋಹಿಗಳು ಅಥವಾ ಕೃತ್ಯವೆಸಗುವ ಸಮಾಜಘಾತಕ ಶಕ್ತಿಗಳು ಭಾಗಿಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ನಡೆದ ಹಲವು ದೊಡ್ಡ ಮಟ್ಟದ ಪ್ರತಿಭಟನೆಗಳಲ್ಲಿಯೂ ದೇಶವಿರೋಧಿ ಶಕ್ತಿಗಳು ನುಸುಳಿ, ಶಾಂತಿಯುತ ಹೋರಾಟವನ್ನು ಹಿಂಸಾಚಾರ ಹಾಗೂ ದೇಶವಿರೋಧಿ ಚಟುವಟಿಕೆಗಳತ್ತ ತಿರುಗಿಸಿದ್ದನ್ನು ಇಲ್ಲಿ ಸರಿಸಬಹುದು. ಪ್ರಸ್ತುತ ನಡೆಯುತ್ತಿರುವ ಘಟನೆಯಲ್ಲೂ ಇದೇ ಮಾದರಿಯ ಕುಮಕ್ಕು ಇದೆಯೇ ಎಂಬ ಬಗ್ಗೆ ತನಿಖಾ ಸಂಸ್ಥೆಗಳು ಕಣ್ಣಿಟ್ಟಿವೆ.

ವಿದೇಶಿ ಧನಸಹಾಯದ ಸಾಧ್ಯತೆ :
ಪ್ರತಿಭಟನೆಗೆ ಆರ್ಥಿಕ ನೆರವು ಎಲ್ಲಿಂದ ಬರುತ್ತಿದೆ ಎಂಬ ವಿಚಾರದಲ್ಲೂ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಬಹತ್‌ ಮಟ್ಟದಲ್ಲಿ ಮೂಲಸೌಕರ್ಯ, ಸಾಮಾಜಿಕ ಜಾಲತಾಣ ಅಭಿಯಾನ ಹಾಗೂ ಸತತ ಧರಣಿ ಸಂಘಟಿಸಲು ವಿದೇಶಿ ಹಣಕಾಸು ನೆರವು ಅಥವಾ ಎನ್‌ಜಿಒಗಳ ಪಾತ್ರವಿದೆಯೇ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂಬ ಆಗ್ರಹವು ಕೇಳಿಬಂದಿದೆ.ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಭರವಸೆಗಳ ನಡುವೆಯೂ, ಪ್ರತಿಭಟನೆಯ ಹಿನ್ನೆಲೆ, ಆರ್ಥಿಕ ಮೂಲ ಹಾಗೂ ರಾಜಕೀಯ ಪ್ರಚೋದನೆಗಳ ಕುರಿತು ಗೃಹ ಸಚಿವಾಲಯ ಮತ್ತು ದೆಹಲಿ ಪೊಲೀಸರು ಹತ್ತಿರದಿಂದ ನಿಗಾ ವಹಿಸಿದ್ದಾರೆ.

ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆಗಾಗಿ ನಡೆಯಬೇಕಾದ ಈ ಹೋರಾಟವು ದೇಶ ವಿರೋಧಿ ಚಟುವಟಿಕೆಗಳ ಅಡ್ಡೆಯಾಗುತ್ತಿರುವುದು ವಿದ್ಯಾರ್ಥಿ ಸಮುದಾಯದ ನೈತಿಕ ಸ್ಥೈರ್ಯವನ್ನೇ ಕುಗ್ಗಿಸುವಂತಿದೆ. ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತುಕೊಂಡು, ಹೋರಾಟದ ಹೆಸರಿನಲ್ಲಿ ನಡೆಯುತ್ತಿರುವ ಈ ರೀತಿಯ ದೇಶವಿರೋಧಿ ಹಾಗೂ ಸ್ವಾರ್ಥ ರಾಜಕೀಯ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ ಎಂಬುದು ಕೆಲವರ ಆಗ್ರಹವಾಗಿದೆ.

ಪೊಲೀಸರ ಮೇಲೆ ಹಲ್ಲೆ :
ಪರಿಸ್ಥಿತಿಯನ್ನು ಹತೋಟಿಗೆ ತರಲು ಯತ್ನಿಸಿದ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರ ಮೇಲೆ ಪುಂಡರು ಹಲ್ಲೆ ನಡೆಸಿದ್ದಾರೆ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಲು ಯತ್ನಿಸಿದ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.ಪರೀಕ್ಷೆಯ ಪಾರದರ್ಶಕತೆ ಮತ್ತು ತನಿಖೆಗಾಗಿ ನ್ಯಾಯಯುತವಾಗಿ ಹೋರಾಡುತ್ತಿರುವ ವಿದ್ಯಾರ್ಥಿಗಳ ದ್ವನಿ ಹಿನ್ನೆಲೆಗೆ ಸರಿದು, ಇಂತಹ ಅಹಿತಕರ ಘಟನೆಗಳು ಮುನ್ನೆಲೆಗೆ ಬರುತ್ತಿರುವುದು ನಿಜಕ್ಕೂ ದುರದೃಷ್ಟಕರ.

RELATED ARTICLES

Latest News