Homeರಾಜ್ಯಸದ್ಯಕ್ಕಿಲ್ಲ ರಾಜ್ಯ ಸಚಿವ ಸಂಪುಟ ವಿಸ್ತರಣೆ

ಸದ್ಯಕ್ಕಿಲ್ಲ ರಾಜ್ಯ ಸಚಿವ ಸಂಪುಟ ವಿಸ್ತರಣೆ

No state cabinet expansion for now

ಬೆಂಗಳೂರು, ಜು.22- ನೀಟ್‌ ಪರೀಕ್ಷೆ ಅಕ್ರಮ ಮತ್ತು ವಿದ್ಯಾರ್ಥಿಗಳ ಮೇಲಿನ ಪೊಲೀಸ್‌‍ ದೌರ್ಜನ್ಯದಿಂದಾಗಿ ದೆಹಲಿಯಲ್ಲಿ ರಣರಂಗ ವಾತಾವರಣ ನಿರ್ಮಾಣವಾಗಿರುವುದರಿಂದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತೊಂದು ವಾರ ಕಾಲ ಮುಂದೂಡಿಕೆಯಾಗುವಂತಾಗಿದೆ. ಕಳೆದೆರಡು ದಿನಗಳ ಕ್ಷಿಪ್ರ ಬೆಳವಣಿಗೆಯಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವುದು ಇನ್ನೇನು ಖಚಿತ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಅದರೆ ದಿಢೀರ್‌ ಬೆಳವಣಿಗೆಯಲ್ಲಿ ಪ್ರತಿಭಟನೆಗಳು ತೀವ್ರಗೊಂಡಿದ್ದರಿಂದ ಎಲ್ಲವೂ ಅಯೋಮಯವಾಗಿದೆ. ಇಂದು ನಡೆಯಬೇಕಿದ್ದ ಸಚಿವ ಸಂಪುಟ ವಿಸ್ತರಣೆ ಶುಕ್ರವಾರ ಅಥವಾ ಮುಂದಿನ ವಾರಕ್ಕೆ ಮುಂದೂಡಿಕೆಯಾಗುವುದು ಖಚಿತವಾಗಿದೆ. ಸಚಿವ ಸಂಪುಟ ವಿಸ್ತರಣೆ ಕುರಿತಂತೆ ದೆಹಲಿಯಲ್ಲಿ ನಿನ್ನೆ ಇಡೀ ದಿನ ಯಾವುದೇ ಚರ್ಚೆಗಳಾಗದೇ ಆಕಾಂಕ್ಷಿಗಳು ಗಲಿಬಿಲಿಗೊಳಗಾಗಿದ್ದರು.

ಆಗಸ್ಟ್‌ ಮೊದಲ ವಾರದಿಂದ ವಿಧಾನಮಂಡಲ ಅಧಿವೇಶನ ಆರಂಭವಾಗುವುದರಿಂದ ಅದಕ್ಕೂ ಮುಂಚಿತವಾಗಿಯೇ ಸಂಪುಟ ವಿಸ್ತರಣೆ ಮಾಡಿ, ವಿವಿಧ ಖಾತೆಗಳ ಜವಾಬ್ದಾರಿಯನ್ನು ಹಂಚಬೇಕೆಂಬುದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಇರಾದೆಯಾಗಿತ್ತು.

ಈ ಕುರಿತು ಚರ್ಚಿಸುವ ಸಲುವಾಗಿಯೇ ನಿನ್ನೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಆಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ದೆಹಲಿಗೆ ತೆರಳಿದ್ದರು. ಮಧ್ಯಾಹ್ನ 12.30ರ ಬಳಿಕ ರಾಜ್ಯದ ಮೂರು ನಾಯಕರೊಂದಿಗೆ ವರಿಷ್ಠರು ಪ್ರತ್ಯೇಕ ಸಭೆಗಳನ್ನು ನಡೆಸಲು ಸಮಯ ನಿಗದಿಯಾಗಿತ್ತು.

ಮೊದಲ ಹಂತದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್‌, ರಣದೀಪ್‌ ಸಿಂಗ್‌ ಸುರ್ಜೇವಾಲ ಅವರ ನಡುವೆ ಸಭೆ ನಡೆಯಲಿದೆ. ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ಸಮುಖದಲ್ಲಿ ಚರ್ಚೆಗಳಾಗಿ ಸಂಜೆಯೊಳಗೆ ಸಚಿವರ ಪಟ್ಟಿ ಅಂತಿಮಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿತ್ತು.

ಆದರೆ ನಿನ್ನೆ ಇಡೀ ದಿನ ಕೆ.ಸಿ.ವೇಣುಗೋಪಾಲ್‌, ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ಸಂಸತ್‌ ಕಲಾಪ ಕಾರ್ಯದೊತ್ತಡದಲ್ಲಿ ತೊಡಗಿಸಿಕೊಂಡಿದ್ದರು. ಸಂಜೆಯ ಬಳಿಕ ರಾಹುಲ್‌ ಗಾಂಧಿ ಮತ್ತು ಖರ್ಗೆ ಅವರ ಸಮುಖದಲ್ಲಿ ಸಭೆ ನಡೆಯಬೇಕು ಎಂಬುವಷ್ಟರಲ್ಲಿ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಹಾಗೂ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ಹಾಗೂ ಅರೆಸೇನಾ ಪಡೆ ನಡೆಸಿದ ದೌರ್ಜನ್ಯಗಳನ್ನು ವಿರೋಧಿಸಿ ರಾಹುಲ್‌ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರು, ಪ್ರಧಾನಿಯವರ ಮನೆಯ ಮುಂದೆ ಪ್ರತಿಭಟನೆ ನಡೆಸಿದರು. ಬಳಿಕ ದೆಹಲಿ ಪೊಲೀಸರು ರಾಹುಲ್‌ ಗಾಂಧಿಯವರನ್ನು ಬಂಧಿಸಿ 3 ಗಂಟೆಗಳ ಬಳಿಕ ಬಿಡುಗಡೆ ಮಾಡಿದ್ದರಿಂದ ಸಂಪುಟ ವಿಸ್ತರಣೆಯ ಚರ್ಚೆಗಳು ನಡೆಯಲು ಸಾಧ್ಯವಾಗಿಲ್ಲ.

ಇಂದು ಬೆಳಿಗ್ಗೆ ಕೂಡ ದೆಹಲಿಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿರುವುದರಿಂದ ಹೈಕಮಾಂಡ್‌ನ ಎಲ್ಲಾ ನಾಯಕರು ಅದರಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ನಾಯಕರ ಜೊತೆಗೆ ಚರ್ಚೆಗೆ ಸಮಯ ಸಿಕ್ಕಿಲ್ಲ. ಹೀಗಾಗಿ ರಾಜ್ಯದ ಮೂವರು ನಾಯಕರು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಬರಿಗೈಯಲ್ಲಿ ವಾಪಾಸ್ಸಾಗಿದ್ದಾರೆ.

RELATED ARTICLES

Latest News