ನವದೆಹಲಿ,ಫೆ..17-ದೇಶದಾದ್ಯಂತ ಇಂದು ಸಿಬಿಎಸ್‌ಇ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಆರಂಭವಾಗಿದೆ.ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಪರೀಕ್ಷೆ ಇಂದು ಆರಂಭವಾಗಿದ್ದು ಭಾರತದಾದ್ಯಂತ ಮತ್ತು ವಿದೇಶದ 26 ದೇಶಗಳಲ್ಲಿ 43 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ಮೊದಲ ದಿನ, 10ನೇ ತರಗತಿಯ ವಿದ್ಯಾರ್ಥಿಗಳು ಗಣಿತ (ಮೂಲ) ಮತ್ತು ಗಣಿತ (ಪ್ರಮಾಣಿತ) ಪರೀಕ್ಷೆ ಬರೆದಿದ್ದು,12ನೇ ತರಗತಿಯ ಅಭ್ಯರ್ಥಿಗಳು ಜೈವಿಕ ತಂತ್ರಜ್ಞಾನ, ಉದ್ಯಮಶೀಲತೆ, ಎಂಜಿನಿಯರಿಂಗ್ ಗ್ರಾಫಿಕ್ಸ್ ಮತ್ತು ವ್‌ವ್ಯವಹಾರ ಅಧ್ಯಯನ ಪರೀಕ್ಷೆ ಬರೆದು ಮುದಲ ದಿನದ ಮಹತ್ವದ ಹೆಜ್ಜೆ ಮುಂದಿಟ್ಟಿದ್ದಾರೆ.
10ನೇ ತರಗತಿಯ ಪರೀಕ್ಷೆ 8,074 ಕೇಂದ್ರಗಳಲ್ಲಿ ಮತ್ತು 12ನೇ ತರಗತಿಯ ಪರೀಕ್ಷೆ 7,574 ಕೇಂದ್ರಗಳಲ್ಲಿ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ ಒಂದೇ ಪಾಳಿಯಲ್ಲಿ ನಡೆಸಲಾಗಿದೆ.ಸಂಚಾರ ಪರಿಸ್ಥಿತಿಗಳನ್ನು ಪರಿಗಣಿಸಿ ಬೆಳಿಗ್ಗೆ 10 ಗಂಟೆಗೆ ಒಳಗೆ ಪರೀಕ್ಷಾ ಕೇಂದ್ರ ತಲುಪಲು ವಿದ್ಯಾರ್ಥಿಗಳಿಗೆ ಸೂಚಿಸಲಾಗಿತ್ತು.
ಮೂಲಗಳ ಪ್ರಕಾರ ಸುಮಾರು 14 ಲಕ್ಷ ಹುಡುಗರು ಮತ್ತು 10.9 ಲಕ್ಷ ಹುಡುಗಿಯರು ಸೇರಿದಂತೆ 10ನೇ ತರಗತಿಗೆ ಸುಮಾರು 25 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.
12ನೇ ತರಗತಿಗೆ 18.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಅದರಲ್ಲಿ 10.2 ಲಕ್ಷ ಹುಡುಗರು ಮತ್ತು 8.3 ಲಕ್ಷ ಹುಡುಗಿಯರು ಸೇರಿದ್ದಾರೆ. 10 ನೇ ತರಗತಿಗೆ ಇಂದು ಪರೀಕ್ಷೆಗಳು ಆರಂಭಗೊಂಡಿದ್ದು ಮಾರ್ಚ್10 ರಂದು ಮುಕ್ತಾಯಗೊಳ್ಳಲಿದ್ದು,
12ನೇ ತರಗತಿ ಪರೀಕ್ಷೆಗಳು ಏಪ್ರಿಲ್ 10 ರಂದು ಕೊನೆಗೊಳ್ಳಲಿವೆ.
