ನವದೆಹಲಿ, ಮಾ.15- ಪೈಪ್ ಮೂಲಕ ಅಡುಗೆ (ಪಿಎನ್‌ಜಿ) ಅನಿಲ ಸಂಪರ್ಕ ಹೊಂದಿರುವ ಮನೆಗಳಿಗೆ ಸಬ್ಸಿಡಿ ಹೊಂದಿರುವ ಗೃಹ ಬಳಕೆಯ (ಎಲ್‌ಪಿಜಿ) ಸಿಲಿಂಡರ್ ಸಂಪರ್ಕಗಳನ್ನು ಇಟ್ಟುಕೊಳ್ಳುವುದಕ್ಕೂ ಅಥವಾ ಹೊಸದಾಗಿ ಪಡೆಯುವುದಕ್ಕೂ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದೆ.
ನಿನ್ನೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ ಸಪ್ಲೈ-ಡಿಸ್ಟ್ರಿಬ್ಯೂಷನ್ ಆರ್ಡರ್ 2000 ಮತ್ತು ಎಸ್ಸೆನ್ಷಿಯಲ್ ಕಮಾಡಿಟಿ ಆ್ಯಕ್ಟ್ ತಿದ್ದುಪಡಿಯ ಪ್ರಕಾರ ಪಿಎನ್‌ಜಿ ಸಂಪರ್ಕ ಪಡೆದವರು ಎಲ್‌ಪಿಜಿ ಸಂಪರ್ಕವನ್ನು ವಾಪಸ್ ನೀಡುವುದು ಕಡ್ಡಾಯವಾಗಿತ್ತು. ಜೊತೆಗೆ ಸರ್ಕಾರದ ತೈಲ ಕಂಪನಿಗಳು ಅಥವಾ ಅವರ ವಿತರಕರು ಪಿಎನ್‌ಜಿ ಗ್ರಾಹಕರಿಗೆ ಸಿಲಿಂಡರ್ ಪೂರೈಕೆ ಮಾಡುವುದಕ್ಕೂ ನಿರ್ಬಂಧಿಸಲಾಗಿದೆ. ಅದೇ ರೀತಿಯಲ್ಲಿ, ಪಿಎನ್‌ಜಿ ಸಂಪರ್ಕ ಹೊಂದಿರುವವರು ಹೊಸ ಸಂಪರ್ಕ ಪಡೆಯುವುದಕ್ಕೂ ಅವಕಾಶ ಇರುವುದಿಲ್ಲ.
ಪೂರೈಕೆಗೆ ಒತ್ತಡ ಕಡಿಮೆ ಮಾಡಲು ಕ್ರಮ:
ಪೈಪ್ ಗ್ಯಾಸಿನ ಸೌಲಭ್ಯ ಇಲ್ಲದ ಮನೆಗಳಿಗೆ ಪೂರೈಕೆಯನ್ನು ಆದ್ಯತೆಯಿಂದ ಒದಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.ಭಾರತ ತನ್ನ ಇಂಧನ ಅಗತ್ಯಗಳ ಬಹುಪಾಲನ್ನು ಆಮದು ಮಾಡಿಕೊಳ್ಳುತ್ತದೆ. ದೇಶವು ಸುಮಾರು ಶೇ. 88 ರಷ್ಟು ಕಚ್ಚಾ ತೈಲ, ಶೇ. 50ರಷ್ಟು ನೈಸರ್ಗಿಕ ಅನಿಲ, ಶೇ. 60ರಷ್ಟು ಎಲ್‌ಪಿಜಿಯನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ.
ಫೆಬ್ರವರಿ 28ರಂದು ಅಮೆರಿಕಾ-ಇಸ್ರೇಲ್ ದೇಶಗಳು ಇರಾನ್ ಮೇಲೆ ದಾಳಿ ನಡೆಸಿದ ನಂತರ ಉಂಟಾದ ಸಂಘರ್ಷದಿಂದ ಗಲ್‌್ಫ ಪ್ರದೇಶದಿಂದ ಇಂಧನ ಪೂರೈಕೆಗೆ ವ್ಯತ್ಯಯ ಉಂಟಾಗಿದೆ. ಹಾರ್ಮುಜ್ ಕಣಿವೆಯಲ್ಲಿ ತಡೆ ಉಂಟಾದ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಸರಬರಾಜು ಮೇಲೆ ಪರಿಣಾಮ ಬಿದ್ದಿದೆ.
ಪಿಎನ್‌ಜಿ ವಿಸ್ತರಣೆಗೆ ಒತ್ತಾಯ:
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (ಪಿಎನ್‌ಜಿಆರ್‌ಬಿ) ನಗರ ಅನಿಲ ವಿತರಣೆ ಕಂಪನಿಗಳಿಗೆ, ಮನೆಗಳಿಗೆ ಪಿಎನ್‌ಜಿ ಸಂಪರ್ಕವನ್ನು ವೇಗವಾಗಿ ಒದಗಿಸಲು ಸೂಚಿಸಿದೆ.
ಭಾರತದಲ್ಲಿ ಪ್ರಸ್ತುತ ದಿನಕ್ಕೆ ಸುಮಾರು 189 ಮಿಲಿಯನ್ ಮೆಟ್ರಿಕ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ ನೈಸರ್ಗಿಕ ಅನಿಲ ಬಳಕೆ ಆಗುತ್ತಿದ್ದು, ಅದರಲ್ಲಿ ಸುಮಾರು 97.5 ರಷ್ಟು ದೇಶೀಯವಾಗಿ ಉತ್ಪಾದನೆಯಾಗುತ್ತಿದೆ.
ಪಿಎನ್‌ಜಿ ಸಂಪರ್ಕಗಳ ವಿವರ:
2026ರ ಜನವರಿ 31ರ ವೇಳೆಗೆ ದೇಶದಲ್ಲಿ ಸುಮಾರು 1.65 ಕೋಟಿ ಪಿಎನ್‌ಜಿ ಸಂಪರ್ಕಗಳನ್ನು ನೀಡಲಾಗಿದ್ದು, ಅದರಲ್ಲಿ ಸುಮಾರು 1.03 ಕೋಟಿ ಮನೆಗಳು ಸಕ್ರಿಯವಾಗಿ ಬಳಸುತ್ತಿವೆ.
ಪೈಪ್ ಲೈನ್ ಈಗಾಗಲೇ ಇರುವ ಪ್ರದೇಶಗಳಿಗೆ ಅಡುಗೆ ಅನಿಲ ಸರಬರಾಜು ಮಾಡಲು ಮತ್ತು ಹೊಸ ಮೂಲಸೌಕರ್ಯವನ್ನು ವೇಗವಾಗಿ ನಿರ್ಮಿಸಲು ಮಂಡಳಿ ಸೂಚನೆ ನೀಡಿದೆ.
ಪಿಎನ್‌ಜಿ ಹೊಸ ಸಂಪರ್ಕಗಳಿಗಾಗಿ ಅರ್ಜಿ ಸಲ್ಲಿಕೆ ಮತ್ತು ಅನಿಲ ಪೂರೈಕೆ ಆರಂಭದ ನಡುವಿನ ಸಮಯವನ್ನು ಕಡಿಮೆ ಮಾಡಲು ಸೂಚಿಸಲಾಗಿದೆ.ರಾಜ್ಯ ಸರ್ಕಾರಗಳು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಸ್ಥಳೀಯ ಆಡಳಿತದೊಂದಿಗೆ ಸಮನ್ವಯ ಸಾಧಿಸಿ ಪಿಎನ್‌ಜಿ ಜಾಲವನ್ನು ವೇಗವಾಗಿ ವಿಸ್ತರಿಸಬೇಕು ಎಂದು ನಿಯಂತ್ರಣ ಮಂಡಳಿ ತಿಳಿಸಿದೆ.
ಈ ಕ್ರಮದಿಂದ ಸರಬರಾಜಿನ ಒತ್ತಡ ಕಡಿಮೆಯಾಗುವುದರ ಜೊತೆಗೆ ಸ್ವಚ್ಛ ಇಂಧನ ಬಳಕೆ ಹೆಚ್ಚಿಸಲು ಮತ್ತು ಜಾಗತಿಕ ರಾಜಕೀಯ ಬೆಳವಣಿಗೆಗಳಿಂದ ಉಂಟಾಗುವ ಇಂಧನ ವ್ಯತ್ಯಯವನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದು ತಿಳಿಸಲಾಗಿದೆ.
