ಮೆಲ್ಬೋರ್ನ್, ಮಾ.15- ಆಸ್ಟ್ರೇಲಿಯಾದಲ್ಲಿ ನಿರಾಶ್ರಿತರ ವೀಸಾ ಸ್ವೀಕರಿಸಿ ಉಳಿಯಲು ನಿರ್ಧರಿಸಿದ್ದ ಇರಾನ್ ಮಹಿಳಾ ಫುಟ್‌ಬಾಲ್ ತಂಡದ ಇನ್ನೂ ಮೂವರು ಸದಸ್ಯರು ತಮ್ಮ ನಿರ್ಧಾರವನ್ನು ಬದಲಿಸಿ ಸ್ವದೇಶಕ್ಕೆ ಮರಳಲು ತೀರ್ಮಾನಿಸಿದ್ದಾರೆ ಎಂದು ಆಸ್ಟ್ರೇಲಿಯಾ ಗೃಹ ವ್ಯವಹಾರಗಳ ಸಚಿವ ಟೋನಿ ಬರ್ಕ್ ಇಂದು ತಿಳಿಸಿದ್ದಾರೆ.
ಈ ಬೆಳವಣಿಗೆಯಿಂದ ಆರಂಭದಲ್ಲಿ ಆಸ್ಟ್ರೇಲಿಯಾದಲ್ಲಿ ಉಳಿದಿದ್ದ ಏಳು ಆಟಗಾರ್ತಿಯರಲ್ಲಿ ಈಗ ಮೂವರು ಮಾತ್ರ ಅಲ್ಲಿಯೇ ಉಳಿದಿದ್ದಾರೆ.ರಾತ್ರಿ ವೇಳೆ ಇರಾನ್ ಮಹಿಳಾ ಫುಟ್‌ಬಾಲ್ ತಂಡದ ಮೂವರು ಸದಸ್ಯರು ಉಳಿದ ತಂಡದೊಂದಿಗೆ ಇರಾನ್‌ಗೆ ಮರಳಲು ನಿರ್ಧರಿಸಿದ್ದಾರೆ ಎಂದು ಸಚಿವ ಬರ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಟಗಾರ್ತಿಯರಿಗೆ ತಮ ಆಯ್ಕೆಗಳ ಬಗ್ಗೆ ಚರ್ಚಿಸಲು ಹಲವು ಬಾರಿ ಅವಕಾಶ ನೀಡಲಾಗಿದೆ ಎಂದೂ ಅವರು ಹೇಳಿದರು.ಇರಾನ್ ಮಹಿಳಾ ತಂಡ ಕಳೆದ ತಿಂಗಳು ಮಹಿಳಾ ಏಷ್ಯನ್ ಕಪ್ ಪಂದ್ಯಾವಳಿಗಾಗಿ ಆಸ್ಟ್ರೇಲಿಯಾಗೆ ಆಗಮಿಸಿತ್ತು. ಫೆಬ್ರವರಿ 28ರಂದು ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾಗುವ ಮೊದಲು ತಂಡ ಅಲ್ಲಿಗೆ ಬಂದಿತ್ತು.
26 ಸದಸ್ಯರ ತಂಡದಲ್ಲಿ ಆರಂಭದಲ್ಲಿ ಆರು ಆಟಗಾರ್ತಿಯರು ಹಾಗೂ ಒಬ್ಬ ಸಹಾಯಕ ಸಿಬ್ಬಂದಿ ಸದಸ್ಯರು ಮಾನವೀಯ ವೀಸಾ ಸ್ವೀಕರಿಸಿ ಆಸ್ಟ್ರೇಲಿಯಾದಲ್ಲೇ ಉಳಿಯಲು ನಿರ್ಧರಿಸಿದ್ದರು. ಉಳಿದ ತಂಡ ಮಾರ್ಚ್ 9ರಂದು ಸಿಡ್ನಿಯಿಂದ ಮಲೇಶ್ಯಾಕ್ಕೆ ಪ್ರಯಾಣಿಸಿತ್ತು.
ನಂತರ ಒಬ್ಬ ಆಟಗಾರ್ತಿ ತನ್ನ ನಿರ್ಧಾರ ಬದಲಿಸಿ ದೇಶ ತೊರೆದಿದ್ದು, ನಿನ್ನೆ ರಾತ್ರಿ ಇನ್ನೂ ಮೂವರು ಸಿಡ್ನಿಯಿಂದ ಮಲೇಶ್ಯಾದ ಕೌಲಾಲಂಪುರಕ್ಕೆ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ಪಂದ್ಯಕ್ಕೂ ಮುನ್ನ ಇರಾನ್ ರಾಷ್ಟ್ರೀಯ ಗೀತೆಯನ್ನು ಆಟಗಾರ್ತಿಯರು ಹಾಡದ ಹಿನ್ನೆಲೆ, ಅವರು ಸ್ವದೇಶಕ್ಕೆ ಹಿಂತಿರುಗಿದರೆ ಭದ್ರತೆ ಸಮಸ್ಯೆ ಎದುರಾಗಬಹುದು ಎಂಬ ಆತಂಕ ವ್ಯಕ್ತವಾಗಿತ್ತು.
ಆಸ್ಟ್ರೇಲಿಯಾದಲ್ಲಿರುವ ಇರಾನಿಯನ್ ಸಮುದಾಯ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್ ಕೂಡ ಆಟಗಾರ್ತಿಯರಿಗೆ ಸಹಾಯ ಮಾಡಲು ಆಸ್ಟ್ರೇಲಿಯಾ ಸರ್ಕಾರವನ್ನು ಮನವಿ ಮಾಡಿದ್ದರು.
ಇರಾನ್‌ನ ತಸ್ನೀಮ್ ಸುದ್ದಿ ಸಂಸ್ಥೆ, ಆಟಗಾರ್ತಿಯರು ತಮ ಕುಟುಂಬ ಮತ್ತು ಸ್ವದೇಶದ ಆತೀಯ ಅಪ್ಪುಗೆಗೆ ಮರಳುತ್ತಿದ್ದಾರೆ ಎಂದು ಹೇಳಿದೆ. ಇದೇ ವೇಳೆ ಈ ಬೆಳವಣಿಗೆ ಅಮೆರಿಕಾ-ಆಸ್ಟ್ರೇಲಿಯಾ ಯೋಜನೆಯ ವಿಫಲತೆ ಹಾಗೂ ಟ್ರಂಪ್ ಅವರಿಗೆ ಮತ್ತೊಂದು ಹಿನ್ನಡೆ ಎಂದು ಸಂಸ್ಥೆ ಪ್ರತಿಕ್ರಿಯಿಸಿದೆ.
