ನವದೆಹಲಿ, ಮಾ.15- ದೇಶದ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಳ ದಿನಾಂಕವನ್ನು ಚುನಾವಣಾ ಆಯೋಗ ಇಂದು ಸಂಜೆ ಘೋಷಿಸಲಿದೆ.
ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ರಾಜ್ಯಗಳು ಹಾಗೂ ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಬೇಕಿದೆ.ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲು ಚುನಾವಣಾ ಆಯೋಗ ಇಂದು ಸಂಜೆ 4 ಗಂಟೆಗೆ ಪತ್ರಿಕಾಗೋಷ್ಠಿ ಕರೆದಿದೆ. ಈ ರಾಜ್ಯಗಳ ವಿಧಾನಸಭೆಗಳ ಅವಧಿ ಮೇ ಮತ್ತು ಜೂನ್ ತಿಂಗಳಲ್ಲಿ ವಿಭಿನ್ನ ದಿನಾಂಕಗಳಲ್ಲಿ ಮುಕ್ತಾಯಗೊಳ್ಳಲಿದೆ.
ಚುನಾವಣೆ ಸಿದ್ಧತೆಯ ಭಾಗವಾಗಿ, ವಿಶೇಷ ತೀವ್ರ ಪರಿಶೀಲನೆ ಪ್ರಕ್ರಿಯೆ ಅಡಿ ನಾಲ್ಕು ರಾಜ್ಯಗಳು ಮತ್ತು ಪುದುಚೇರಿ ಪ್ರದೇಶದ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ಕು ರಾಜ್ಯಗಳ ಪೈಕಿ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಅತೀ ದೊಡ್ಡ ರಾಜ್ಯಗಳಾಗಿವೆ. 294 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪಶ್ಚಿಮ ಬಂಗಾಳದ ಶಾಸನ ಸಭೆಯ ಅಧಿಕಾರಾವಧಿ ಮೇ 7ಕ್ಕೆ ಮುಕ್ತಾಯಗೊಳ್ಳಲಿದೆ. ಈ ರಾಜ್ಯದಲ್ಲಿ 42 ಸಂಸದರು, 16 ರಾಜ್ಯಸಭೆಯ ಸದಸ್ಯರು ಆಯ್ಕೆಯಾಗಲಿದ್ದು, ರಾಷ್ಟ್ರ ರಾಜಕಾರಣದಲ್ಲಿ ಮಹತ್ವ ಪಡೆದುಕೊಂಡಿದೆ.
ಮಮತಾಬ್ಯಾನರ್ಜಿ 2011ರಿಂದ ನಿರಂತರವಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ. 2011, 2016, 2021ರಲ್ಲಿ ತೃಣಮೂಲ ಕಾಂಗ್ರೆಸ್ ಅನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳುವ ಮೂಲಕ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಸತತ ನಾಲ್ಕನೇ ಬಾರಿಗೆ ತಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಈ ಬಾರಿ ಬಿಜೆಪಿ ಪ್ರಬಲ ಪೈಪೋಟಿ ನೀಡುತ್ತಿದೆ. ಒಟ್ಟು 14 ವರ್ಷ 298 ದಿನಗಳ ಆಡಳಿತ ನಡೆಸಿ ಎರಡನೇ ಅತ್ಯಧಿಕ ಅವಧಿಯ ಮುಖ್ಯಮಂತ್ರಿ ಎಂಬ ಕೀರ್ತಿಗೆ ಮಮತಾಬ್ಯಾನರ್ಜಿ ಪಾತ್ರರಾಗಿದ್ದಾರೆ.
ಸಿಪಿಐಎಂನ ಜ್ಯೋತಿ ಬಸು 23 ವರ್ಷ 138 ದಿನ ಮುಖ್ಯಮಂತ್ರಿಯಾಗಿ ನಂ-1 ಸ್ಥಾನದಲ್ಲಿದ್ದಾರೆ. ಪಶ್ಚಿಮ ಬಂಗಾಳದ ಮೊದಲ ಮಹಿಳಾ ಮುಖ್ಯಮಂತ್ರಿ ಮಮತಾಬ್ಯಾನರ್ಜಿ ನಾಲ್ಕನೇ ಅವಧಿಗೂ ಪುನರ್ ಆಯ್ಕೆಯಾಗಲಿದ್ದಾರೆಯೋ ಎಂಬುದು ಕುತೂಹಲ ಕೆರಳಿಸಿದೆ.
ತಮಿಳುನಾಡಿನ ವಿಧಾನಸಭೆಯಲ್ಲಿ 234 ಕ್ಷೇತ್ರಗಳಿವೆ. 39 ಸಂಸದರು 18 ರಾಜ್ಯಸಭಾ ಸದಸ್ಯರಿದ್ದಾರೆ. ಪ್ರಾದೇಶಿಕ ಪಕ್ಷವೇ ಪ್ರಾಬಲ್ಯ ಹೊಂದಿರುವ ತಮಿಳುನಾಡಿಗೆ ರಾಷ್ಟ್ರ ನಾಯಕತ್ವ ಸದಾಕಾಲ ಶರಣಾಗಿರುವುದು ಕಂಡು ಬರುತ್ತದೆ.
ಈ ಬಾರಿ ತಮಿಳುನಾಡಿನಲ್ಲಿ ಮತದಾರ ಯಾರತ್ತ ಒಲವು ತೋರಿಸಲಿದ್ದಾನೆ ಎಂದು ಕಾದು ನೋಡಬೇಕಿದೆ. ಅಸ್ಸಾಂ ವಿಧಾನಸಭೆಗೆ 126 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈಶಾನ್ಯ ರಾಜ್ಯವಾಗಿರುವ ಅಸ್ಸಾಂನ ಶಾಸನಸಭೆಯ ಅವಧಿ ಮೇ 20ಕ್ಕೆ ಕೊನೆಗಳ್ಳಲಿದೆ.
ಇಲ್ಲಿ 14 ಸಂಸದರು, 7 ರಾಜ್ಯಸಭೆಯ ಸದಸ್ಯರಿದ್ದಾರೆ. ಕರ್ನಾಟಕದ ನೆರೆ ರಾಜ್ಯ ಕೇರಳ ದೇವರ ನಾಡು ಎಂದೇ ಪ್ರಖ್ಯಾತವಾಗಿದೆ. 140 ಶಾಸಕರನ್ನು ಹೊಂದಿರುವ ಇಲ್ಲಿನ ಶಾಸನಸಭೆಯ ಅವಧಿ ಮೇ 23ಕ್ಕೆ ಕೊನೆಗೊಳ್ಳಲಿದೆ. 20 ಸಂಸದರು, 19 ರಾಜ್ಯಸಭೆಯ ಸದಸ್ಯರನ್ನು ಈ ರಾಜ್ಯ ಹೊಂದಿದೆ.
ಪುದುಚೇರಿ ಕೇಂದ್ರಾಡಳಿತ ಪ್ರದೇಶವಾಗಿದ್ದು 30 ಶಾಸಕರನ್ನು ಮಾತ್ರ ಹೊಂದಿದೆ. ಜೂನ್ 15ಕ್ಕೆ ಇಲ್ಲಿನ ಅವಧಿ ಮುಕ್ತಾಯಗೊಳ್ಳುತ್ತಿದೆ. ತಲಾ ಒಂದು ಸಂಸದ ಹಾಗೂ ರಾಜ್ಯಸಭಾ ಸ್ಥಾನವನ್ನು ಪುದುಚೇರಿ ಹೊಂದಿದೆ.ಇಷ್ಟು ಶಾಸನ ಸಭೆಗಳ ಅವಧಿ ನವೀಕರಣಕ್ಕಾಗಿ ಕೇಂದ್ರ ಚುನಾವಣಾ ಆಯೋಗ ಇಂದು ಮಧ್ಯಾಹ್ನ ವೇಳಾಪಟ್ಟಿಯನ್ನು ಘೋಷಿಸಲಿದೆ.
