Thursday, May 14, 2026
Homeರಾಷ್ಟ್ರೀಯಕಾಂಗ್ರೆಸ್‌‍ ಊಸರವಳ್ಳಿಗಿಂತಲೂ ವೇಗವಾಗಿ ಬಣ್ಣ ಬದಲಿಸುತ್ತೆ : ಅಣ್ಣಾಮಲೈ

ಕಾಂಗ್ರೆಸ್‌‍ ಊಸರವಳ್ಳಿಗಿಂತಲೂ ವೇಗವಾಗಿ ಬಣ್ಣ ಬದಲಿಸುತ್ತೆ : ಅಣ್ಣಾಮಲೈ

‘Changes colour faster than chameleon’; Annamalai

ಚೆನ್ನೈ, ಮೇ 11- ಹಿರಿಯ ಸಂಸದ ಶಶಿ ತರೂರ್‌ ಅವರ ಸಮುಖದಲ್ಲೇ ಕಾಂಗ್ರೆಸ್‌‍ ಪಕ್ಷವನ್ನು ಬಿಜೆಪಿ ಮುಖಂಡ ಅಣ್ಣಾಮಲೈ ಅವರು ಊಸರವಳ್ಳಿಗೆ ಹೋಲಿಸಿದ್ದಾರೆ.ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾವಿಲಯದಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್‌‍ ಪಕ್ಷವನ್ನು ಊಸರವಳ್ಳಿಗೆ ಹೋಲಿಸಿ ವಾಗ್ದಾಳಿ ನಡೆಸಿದ್ದಾರೆ.

ತಮಿಳುನಾಡಿನಲ್ಲಿ ಕಾಂಗ್ರೆಸ್‌‍ ಪಕ್ಷವು ಡಿಎಂಕೆ ಭಾಷೆಯನ್ನೇ ಇಷ್ಟು ವರ್ಷ ಬಳಸುತ್ತಿತ್ತು, ಆದರೆ ಈಗ ರಾತ್ರೋರಾತ್ರಿ ನಟ ವಿಜಯ್‌ ಅವರ ಪಕ್ಷದತ್ತ ಒಲವು ತೋರುತ್ತಿದೆ. ಈ ಬದಲಾವಣೆಯನ್ನು ಕಂಡು ಊಸರವಳ್ಳಿಯೂ ಕೂಡ ಇಷ್ಟು ವೇಗವಾಗಿ ಬಣ್ಣ ಬದಲಿಸುವುದಿಲ್ಲ ಎಂದು ಅಣ್ಣಾಮಲೈ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್‌‍ ಸ್ವತಂತ್ರ ಅಸ್ತಿತ್ವವನ್ನು ಕಳೆದುಕೊಂಡಿದ್ದು, ಅಧಿಕಾರದಲ್ಲಿರುವ ಪ್ರಾದೇಶಿಕ ಪಕ್ಷಗಳ ಮೇಲೆ ಸವಾರಿ ಮಾಡುತ್ತಾ ತನ್ನ ನಿಲುವನ್ನು ಬದಲಾಯಿಸಿಕೊಳ್ಳುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಕಾಂಗ್ರೆಸ್‌‍ ಪಕ್ಷ ಯಾವುದಾದರೂ ಒಂದು ದಕ್ಷಿಣ ರಾಜ್ಯವನ್ನು ಗೆದ್ದು ಬಿಟ್ಟರೆ ಸಾಕು, ದಕ್ಷಿಣ ಭಾರತ ಬೇರೆ, ಕೇರಳ ಬೇರೆ, ತಮಿಳುನಾಡು ಬೇರೆ, ಆಂಧ್ರ ಬೇರೆ, ತೆಲಂಗಾಣ ಬೇರೆ ಎಂದು ಯಾರಾದರೂ ಒಬ್ಬ ಕಾಂಗ್ರೆಸ್‌‍ ಸಂಸದ ಟ್ವೀಟ್‌ ಮಾಡಲು ಆರಂಭಿಸುತ್ತಾರೆ. ಶಶಿ ತರೂರ್‌ ಅವರು ಇಂತಹ ಸಂಸದರಿಗೆ ಆಪ್ತರಾಗಿದ್ದಾರೆ ಎಂದು ಅಣ್ಣಾಮಲೈ ಬೇಸರ ವ್ಯಕ್ತಪಡಿಸಿದ್ದಾರೆ.
ಶಶಿ ತರೂರ್‌ ಅವರು ವಿಶ್ವಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಗೌರವಾನ್ವಿತ ವ್ಯಕ್ತಿ. ಆದರೆ ಅವರು ಕಾಂಗ್ರೆಸ್‌‍ ಪಕ್ಷದ ಭಾಷೆ ಮಾತನಾಡಲು ಶುರು ಮಾಡಿದರೆ ವಿವಾದಗಳು ಸೃಷ್ಟಿಯಾಗುತ್ತವೆ ಎಂದಿದ್ದಾರೆ.

ಕಾಂಗ್ರೆಸ್‌‍ ಪಕ್ಷವು ಮತದಾರರ ಪಟ್ಟಿ ಮತ್ತು ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಲಕ್ಷಾಂತರ ಜನರ ಮತಗಳನ್ನು ತೆಗೆದುಹಾಕಲಾಗಿದೆ ಎಂಬ ಕಾಂಗ್ರೆಸ್‌‍ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಅವರು ತಿರುಗೇಟು ನೀಡಿದರು.

ಭಾರತವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ, ಆದರೆ ಕಾಂಗ್ರೆಸ್‌‍ ಇನ್ನೂ 1960ರ ದಶಕದಲ್ಲೇ ಉಳಿದುಕೊಂಡಿದೆ. ಇಂದಿನ ಯುವ ಪೀಳಿಗೆ ಅಭಿವೃದ್ಧಿ ಪರ ರಾಜಕೀಯವನ್ನು ಬಯಸುತ್ತಿದೆ. ಹಳೆಯ ಕಾಲದ ವೈಫಲ್ಯಗಳಿಗೆ ಈಗಿನ ಬಿಜೆಪಿ ಸರ್ಕಾರವನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ಅಣ್ಣಾಮಲೈ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

RELATED ARTICLES

Latest News