ಬೆಂಗಳೂರು, ಜೂ. 12- ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿಂದು ರಾಷ್ಟ್ರಪತಿ ಹಾಗೂ ಉಪ ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಡಿ.ಕೆ.ಶಿವ ಕುಮಾರ್ ಭೇಟಿ ಮಾಡಿದ್ದರು.
ನಂತರ ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣಾ ಅವರನ್ನು ಭೇಟಿ ಮಾಡಿದ್ದಾರೆ.ಕಳೆದ ಮೂರು ದಿನಗಳಿಂದಲೂ ದೆಹಲಿಯಲ್ಲೇ ಇರುವ ಮುಖ್ಯಮಂತ್ರಿಯವರು, ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದರು.
ಅದಕ್ಕೂ ಮುನ್ನ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಲೋಕ ಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕ ಗಾಂಧಿಯವರನ್ನು ಭೇಟಿ ಮಾಡಿದ್ದರು. ದೆಹಲಿಯಲ್ಲಿ ಅಖಿಲ ಭಾರತ ಕಾಂಗ್ರೆಸ್‌ನ ಯುವ ಮಹಿಳಾ ಹಾಗೂ ವಿದ್ಯಾರ್ಥಿ ಘಟಕಗಳಿಗೆ ಭೇಟಿ ನೀಡಿ, ಡಿ.ಕೆ.ಶಿವಕುಮಾರ್ ಚರ್ಚೆ ನಡೆಸಿದರು. ದೆಹಲಿಯಲ್ಲಿ ಪ್ರಮುಖ ನಾಯಕರು ಹಾಗೂ ಕೇಂದ್ರ ಸಚಿವರ ಜೊತೆ ಸಭೆಗಳ ಮೂಲಕ ಡಿ.ಕೆ.ಶಿವಕುಮಾರ್ ರಾಜ್ಯದ ಅಭಿವೃದ್ಧಿಗೆ ಭದ್ರ ಬುನಾದಿಯ ಸಿದ್ಧತೆಯಲ್ಲಿದ್ದಾರೆ.
