ನವದೆಹಲಿ,ಏ.17- ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ವಿರುದ್ಧದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಪೊಲೀಸ್ ಪ್ರಕರಣ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ನೀಡಲಾಗಿದ್ದ ಮಧ್ಯಂತರ ಜಾಮೀನನ್ನು ಸುಪ್ರೀಂ ಕೋರ್ಟ್ ಇಂದು ಎರಡನೇ ಬಾರಿಗೆ ತಡೆಹಿಡಿದಿದೆ.
ಖೇರಾ ಅವರು ಬಹು ಪಾಸ್‌ಪೋರ್ಟ್‌ಗಳು ಮತ್ತು ವಿದೇಶಿ ಆಸ್ತಿಗಳನ್ನು ಹೊಂದಿರುವ ಆರೋಪದ ಮೇಲೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾಗೆ ಇದೀಗ ಬಂಧನದ ಭೀತಿ ಎದುರಾಗಿದೆ.
ಅಸ್ಸಾಂನಲ್ಲಿ ನ್ಯಾಯಾಲಯಗಳು ಪ್ರಸ್ತುತ ಮುಚ್ಚಿವೆ ಎಂದು ವಾದಿಸಿ ಖೇರಾ ಮಂಗಳವಾರದವರೆಗೆ ತನ್ನ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನನ್ನು ವಿಸ್ತರಿಸುವಂತೆ ಕೋರಿದ್ದರು. ಆದಾಗ್ಯೂ, ಸುಪ್ರೀಂ ಕೋರ್ಟ್ ಈ ಮನವಿಯನ್ನು ತಿರಸ್ಕರಿಸಿ ಯಾವುದೇ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿಳಂಬವಿಲ್ಲದೆ ಅಸ್ಸಾಂನ ಸೂಕ್ತ ನ್ಯಾಯಾಲಯದ ಮುಂದೆ ಸಲ್ಲಿಸುವಂತೆ ನಿರ್ದೇಶಿಸಿತು. ನ್ಯಾಯಮೂರ್ತಿ ಜೆ.ಕೆ.ಮಹೇಶ್ವರಿ ಮತ್ತು ನ್ಯಾಯಮೂರ್ತಿ ಅತುಲ್ ಎಸ್.ಚಂದೂರ್ಕರ್ ಅವರ ಪೀಠವು ಅವರ ಅರ್ಜಿಯನ್ನು ತಿರಸ್ಕರಿಸಿತು.
ನ್ಯಾಯಾಲಯವು ಅವರ ಅರ್ಜಿಯನ್ನು ಪುರಸ್ಕರಿಸಲು ನಿರಾಕರಿಸಿದಾಗ, ಖೇರಾ ಪರ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಇಂದು ಶುಕ್ರವಾರ, ಸೋಮವಾರ ನಾನು ಅರ್ಜಿ ಸಲ್ಲಿಸುತ್ತಿದ್ದೇನೆ. ಈ ಪರಿಹಾರವನ್ನು ನಿರಾಕರಿಸುವಷ್ಟು ನಾನು ಕಠೋರ ಅಪರಾಧಿಯೇ? ಎಂದು ಕೇಳಿದರು.
ಅಸ್ಸಾಂ ನ್ಯಾಯಾಲಯವು ಖೇರಾ ಅವರ ಅರ್ಜಿಯನ್ನು ಸ್ವತಂತ್ರವಾಗಿ, ದಾಖಲೆಯಲ್ಲಿರುವ ಮಾಹಿತಿ ಮತ್ತು ತನ್ನದೇ ಆದ ಅರ್ಹತೆಯ ಆಧಾರದ ಮೇಲೆ ನಿರ್ಧರಿಸುತ್ತದೆ ಮತ್ತು ಸುಪ್ರೀಂ ಕೋರ್ಟ್ ತನ್ನ ಹಿಂದಿನ ಆದೇಶದಲ್ಲಿ ಮಾಡಿದ ಯಾವುದೇ ಅವಲೋಕನಗಳಿಂದ ಪ್ರಭಾವಿತವಾಗುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಏನಿದು ಪ್ರಕರಣ? :
ಏಪ್ರಿಲ್ 5 ರಂದು ಪತ್ರಿಕಾಗೋಷ್ಠಿ ನಡೆಸಿದ್ದ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು, ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ ಶರ್ಮಾ ಅವರು ಹಲವು ಪಾಸ್ ಪೋರ್ಟ್‌ಗಳನ್ನು ಮತ್ತು ವಿದೇಶಗಳಲ್ಲಿ ಆಸ್ತಿಯನ್ನು ಹೊಂದಿದ್ದಾರೆ. ಇದನ್ನು ಅಸ್ಸಾಂ ಸಿಎಂ ತಮ ಅಫಿಡವಿಟ್‌ನಲ್ಲಿ ಘೋಷಿಸಿಲ್ಲ ಎಂದು ಆರೋಪಿಸಿದ್ದರು.
ಈ ಆರೋಪದ ವಿರುದ್ಧ ಅಸ್ಸಾಂ ಸಿಎಂ ಪತ್ನಿ ದೂರು ನೀಡಿದ್ದರು. ತಮ ವಿರುದ್ಧ ಕಾಂಗ್ರೆಸ್ ನಾಯಕ ಸುಳ್ಳು ಆರೋಪ ಮಾಡಿದ್ದಾರೆ. ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಕೋರಿದ್ದರು. ಖೇರಾ ವಿರುದ್ಧ ಗುವಾಹಟಿ ಅಪರಾಧ ವಿಭಾಗದ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಹಲವು ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.
ಬಂಧನದ ಭೀತಿ ಹಿನ್ನೆಲೆಯಲ್ಲಿ ಪವನ್ ಖೇರಾ ಅವರು, ತೆಲಂಗಾಣ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ನಿರೀಕ್ಷಣಾ ಜಾಮೀನು ಕೋರಿದ್ದರು. ಏಪ್ರಿಲ್ 10 ರಂದು ವಿಚಾರಣೆ ನಡೆಸಿದ ಹೈಕೋರ್ಟ್ ಕೆಲವು ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿತ್ತು.
