Thursday, May 14, 2026
Homeರಾಷ್ಟ್ರೀಯ10 ದಿನಗಳ ಹರಸಾಹಸಕ್ಕೆ ತೆರೆ : ಕೇರಳ ಸಿಎಂ ಆಗಿ ವಿ.ಡಿ.ಸತೀಸನ್‌ ಆಯ್ಕೆ

10 ದಿನಗಳ ಹರಸಾಹಸಕ್ಕೆ ತೆರೆ : ಕೇರಳ ಸಿಎಂ ಆಗಿ ವಿ.ಡಿ.ಸತೀಸನ್‌ ಆಯ್ಕೆ

Congress names V.D. Satheesan as Kerala CM


ನವದೆಹಲಿ,ಮೇ 14- ದೇವರ ನಾಡು ಕೇರಳಂ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಹಿರಿಯ ಕಾಂಗ್ರೆಸ್‌‍ ಮುಖಂಡ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್‌ ಅವರನ್ನು ಕಾಂಗ್ರೆಸ್‌‍ ಘೋಷಣೆ ಮಾಡಿದೆ.

ಇದರೊಂದಿಗೆ ಕೇರಳಂನಲ್ಲಿ ಕಾಂಗ್ರೆಸ್‌‍ ನೇತೃತ್ವದ ಯುಡಿಎಫ್‌ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ನಂತರ 10 ದಿನಗಳ ಕಾಲ ನಡೆದ ಮ್ಯಾರಥಾನ್‌ ಚರ್ಚೆಗೆ ಪೂರ್ಣ ವಿರಾಮ ಬಿದ್ದಿದೆ.

61 ವರ್ಷದ ವಿ.ಡಿ.ಸತೀಶನ್‌ ಕೇರಳಂನ ಪ್ರಬಲ ನಾಯರ್‌ ಸಮುದಾಯಕ್ಕೆ ಸೇರಿದವರಾಗಿದ್ದು, ವಿಧಾನಸಭೆ ಪ್ರತಿಪಕ್ಷ ನಾಯಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.ಕೇರಳಂ ಸಿಎಂ ಪಟ್ಟಕ್ಕೆ ಮೂವರ ಹೆಸರುಗಳು ಕೇಳಿಬಂದಿದ್ದವು. ಅದರಲ್ಲಿ ಪ್ರಮುಖವಾಗಿ ವಿ.ಡಿ.ಸತೀಶನ್‌, ಕೆ.ಸಿ.ವೇಣುಗೋಪಾಲ್‌ ಮತ್ತು ರಮೇಶ್‌ ಚೆನ್ನಿತ್ತಲ ಪ್ರಬಲ ಆಕಾಂಕ್ಷಿಗಳಾಗಿದ್ದರು. ಅಂತಿಮವಾಗಿ ಕಾಂಗ್ರೆಸ್‌‍ ಹೈಕಮಾಂಡ್‌ ವಿ.ಡಿ.ಸತೀಶನ್‌ ಅವರನ್ನು ಆಯ್ಕೆ ಮಾಡಿದೆ. ಕೇರಳಂನ ಆಡಳಿತಾರೂಢ ಯುಡಿಎಫ್‌ ಮೈತ್ರಿಕೂಟದ ಅನ್ಯ ಪಕ್ಷಗಳೂ ಕೂಡ ವಿ.ಡಿ.ಸತೀಶನ್‌ ಪರವಾಗಿ ಬ್ಯಾಟ್‌ ಬೀಸಿದ್ದವು.

ಕಾಂಗ್ರೆಸ್‌‍ ಶಾಸಕಾಂಗ ಪಕ್ಷವು ಮೇ 7, 2026 ರಂದು ತಿರುವನಂತಪುರದಲ್ಲಿ ಸಭೆ ಸೇರಿ, ಕೇರಳಂ ರಾಜ್ಯದಲ್ಲಿ ಸಿಎಲ್‌ಪಿಯ ಹೊಸ ನಾಯಕನನ್ನು ನೇಮಿಸಲು ಕಾಂಗ್ರೆಸ್‌‍ ಅಧ್ಯಕ್ಷರಿಗೆ ಅಧಿಕಾರ ನೀಡಲು ಸರ್ವಾನುಮತದಿಂದ ನಿರ್ಧರಿಸಿತ್ತು. ವಿ.ಡಿ .ಸತೀಶನ್‌ ಅವರನ್ನು ಸಿಎಲ್‌ಪಿಯ ನಾಯಕರನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್‌‍ ನಾಯಕಿ ದೀಪಾ ದಾಸ್‌‍ಮುನ್ಶಿ ದೆಹಲಿಯಲ್ಲಿ ಕಿಕ್ಕಿರಿದು ತುಂಬಿದ್ದ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.

ಕಾಂಗ್ರೆಸ್‌‍ ಶಾಸಕಾಂಗ ಪಕ್ಷದ ಬಹುಪಾಲು ಸದಸ್ಯರು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ಅವರನ್ನು ಬೆಂಬಲಿಸಿದ್ದಾರೆಂದು ಹೇಳಲಾಗಿತ್ತಾದರೂ, 2021 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿತ್ತು. ಕಳೆದ ಐದು ವರ್ಷಗಳಲ್ಲಿ ಪಕ್ಷದ ಪ್ರಮುಖ ಅಭ್ಯರ್ಥಿಯಾಗಿ ಹೊರಹೊಮಿದ ನಂತರ ಸತೀಶನ್‌ ಅವರಿಗೆ ಭಾರಿ ಜನಪ್ರಿಯ ಬೆಂಬಲ ಸಿಕ್ಕಿತ್ತು.
ಆಕ್ರಮಣಕಾರಿ ಪ್ರಚಾರ ಮತ್ತು ವಿಶಾಲವಾದ ಒಕ್ಕೂಟದ ರಚನೆಯಿಂದ ಯುಡಿಎಫ್‌ನ 102 ಸ್ಥಾನಗಳ ಗೆಲುವಿನ ರೂವಾರಿ ಎಂದೇ ಸತೀಶನ್‌ ಬಿಂಬಿತರಾಗಿದ್ದರು.

ಎಲ್‌ಡಿಎಫ್‌ ಸರ್ಕಾರದ ಭ್ರಷ್ಟಾಚಾರ ಆರೋಪಗಳು, ಆಡಳಿತ ಸಮಸ್ಯೆಗಳು ಮತ್ತು ಪ್ರಮುಖ ರಾಜಕೀಯ ವೇದಿಕೆಗಳಲ್ಲಿ ಆರ್ಥಿಕ ಕಾಳಜಿಗಳ ಕುರಿತು ಪಿಣರಾಯಿ ವಿಜಯನ್‌ ನೇತೃತ್ವದ ಸರ್ಕಾರದ ಮೇಲೆ ವ್ಯಾಪಕ ವಾಗ್ದಾಳಿ ನಡೆಸಿದ್ದರು.

ಯುಡಿಎಫ್‌ ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷವಾದ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ ವಿ.ಡಿ.ಸತೀಶನ್‌ ಅವರ ಆಯ್ಕೆಗೆ ಪ್ರಬಲ ಬೆಂಬಲ ವ್ಯಕ್ತಪಡಿಸಿತ್ತು. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೆ.ಸಿ .ವೇಣುಗೋಪಾಲ್‌ ಹೈಕಮಾಂಡ್‌ ಹಾಗೂ ರಾಹುಲ್‌ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಶಾಸಕರ ಬೆಂಬಲ ಹಾಗೂ ಹೈಕಮಾಂಡ್‌ ಒಲವು ಇವರ ಪರ ಹೆಚ್ಚಾಗಿತ್ತು.

ಕೇರಳಂ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಎಲ್‌ಡಿಎಫ್‌ ಸರ್ಕಾರದ ವಿರುದ್ಧ ಮುಂಚೂಣಿಯಲ್ಲಿ ಹೋರಾಡಿದ್ದ ವಿ.ಡಿ.ಸತೀಶನ್‌ ತನಗೆ ಸಿಎಂ ಪಟ್ಟ ನೀಡದಿದ್ದರೆ ಬೇರೆ ಯಾವುದೇ ಸಚಿವ ಸ್ಥಾನ ಬೇಡ ಎಂಬ ಬಿಗಿ ನಿಲುವನ್ನು ತಳೆದಿದ್ದರು.

ಕಾಂಗ್ರೆಸ್‌‍ನ ಮತ್ತೊಬ್ಬ ಹಿರಿಯ ನಾಯಕ ರಮೇಶ್‌ ಚೆನ್ನಿತ್ತಲ ಇವರೂ ಸಹ ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಶಾಸಕರ ಬೆಂಬಲ ವಿ.ಡಿ.ಸತೀಶನ್‌ ಮತ್ತು ಕೆ.ಸಿ.ವೇಣುಗೋಪಾಲ್‌ ಅವರಿಗೆ ಇದ್ದ ಕಾರಣ ಸಿಎಂ ರೇಸ್‌‍ನಲ್ಲಿ ಇವರು ಹಿಂದೆ ಸರಿದಿದ್ದರು.
ಮೂವರಲ್ಲಿ ಯಾರನ್ನೇ ಒಬ್ಬರನ್ನು ಆಯ್ಕೆ ಮಾಡಿದರೂ ಪಕ್ಷದಲ್ಲಿ ಬಣ ರಾಜಕೀಯ ತೀವ್ರಗೊಳ್ಳುವ ಸಾಧ್ಯತೆ ಇರುವುದರಿಂದ, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಸರ್ವಸಮತ ಸೂತ್ರಕ್ಕಾಗಿ ಹೈಕಮಾಂಡ್‌ ಹೆಣಗಾಟ ನಡೆಸಿತ್ತು.

ಸಿಎಂ ಆಯ್ಕೆ ವಿಳಂಬವಾಗುತ್ತಿರುವುದಕ್ಕೆ ಬೇಸತ್ತು ವಯನಾಡ್‌ ಸೇರಿದಂತೆ ಹಲವು ಭಾಗಗಳಲ್ಲಿ ನಾಯಕರ ಪರ-ವಿರೋಧದ ಪೋಸ್ಟರ್‌ಗಳು ಪ್ರತ್ಯಕ್ಷವಾಗುವ ಮೂಲಕ ಕಾಂಗ್ರೆಸ್‌‍ನ ಒಳಜಗಳ ಬೀದಿಗೆ ಬಂದಿತ್ತು.

ವಿ.ಡಿ.ಸತೀಶನ್‌ ಪ್ರಬಲ ಪ್ರಚಾರ :
ಹಿಂದಿನ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಅವರು ಎಡಪಕ್ಷ ಸರ್ಕಾರದ ವಿರುದ್ಧ ಕಾಂಗ್ರೆಸ್‌‍ ನಡೆಸಿದ ಪ್ರಚಾರದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪಕ್ಷದ ಕಾರ್ಯಕರ್ತರು ಹಾಗೂ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ (ಐಯುಎಂಎಲ್‌) ಸೇರಿ ಪ್ರಮುಖ ಮೈತ್ರಿ ಪಕ್ಷಗಳ ಬೆಂಬಲವೂ ಅವರಿಗೆ ದೊರಕಿದ್ದು ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಲು ಕಾರಣ ಎಂದು ಮೂಲಗಳು ತಿಳಿಸಿವೆ.

ಅಳೆದು ತೂಗಿ ನಿರ್ಧಾರ :
ಕಾಂಗ್ರೆಸ್‌‍ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹಿರಿಯ ನಾಯಕ ರಾಹುಲ್‌ ಗಾಂಧಿ ಕಳೆದ ಕೆಲವು ದಿನಗಳಲ್ಲಿ ಹಲವು ಸುತ್ತಿನ ಚರ್ಚೆಗಳನ್ನು ನಡೆಸಿದ್ದಾರೆ. ಅಂತಿಮ ಒಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಈ ಮಾತುಕತೆಗಳು ನಡೆದಿದ್ದವು. ತಿರುವನಂತಪುರಂನ ಏಅಅ ಕಚೇರಿಯಲ್ಲಿ ಕಾಂಗ್ರೆಸ್‌‍ ವಿಧಾನಮಂಡಲ ಪಕ್ಷದ ಸಭೆ ನಡೆದಿದ್ದು, ಅದರಲ್ಲಿ ಅಧಿಕೃತವಾಗಿ ನಾಯಕನ ಆಯ್ಕೆ ಮಾಡಲಾಗಿದೆ.

ಕಾಂಗ್ರೆಸ್‌‍ ಪಕ್ಷವನ್ನು ಪುನರ್‌ ನಿರ್ಮಿಸಲು ಮತ್ತು ಕೇರಳದಲ್ಲಿ ಪಕ್ಷದ ಬಲವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಮರ್ಥರಾಗಿರುವ ಯುವ ಹಾಗೂ ಆಕ್ರಮಣಕಾರಿ ನಾಯಕನಾಗಿ ಕಾಣಲಾಗುತ್ತಿದೆ. ಇದೀಗ ಸತೀಶನ್‌ ಅವರ ನಿವಾಸದ ಹೊರಗೆ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದರು.

ಕೇರಳಂನಲ್ಲಿ ಸಂಭ್ರಮಾಚರಣೆ :
ಕೇರಳಂ ರಾಜ್ಯದ ನೂತನ ಸಿಎಂ ಆಗಿ ವಿ.ಡಿ.ಸತೀಶನ್‌ ಆಯ್ಕೆ ಬೆನ್ನಲ್ಲೇ ತಿರುವನಂತಪುರಂನಲ್ಲಿರುವ ಕಾಂಗ್ರೆಸ್‌‍ ಕಚೇರಿಯಲ್ಲಿ ಕಾರ್ಯಕರ್ತರಿಂದ ಸಂಭ್ರಮಾಚರಣೆ ನಡೆಸಲಾಯಿತು.ನೂತನ ಸಿಎಂ ಆಗಿ ವಿ.ಡಿ.ಸತೀಶನ್‌ ಆಯ್ಕೆ ಸಂಬಂಧ ಕೇರಳ ಕಾಂಗ್ರೆಸ್‌‍ ಅಧ್ಯಕ್ಷ ಸನ್ನಿ ಜೋಸೆಫ್‌ ಪ್ರತಿಕ್ರಿಯೆ ನೀಡಿದ್ದಾರೆ. ತಿರುವನಂತಪುರಂನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಇದು ತುಂಬಾ ಒಳ್ಳೆಯ ನಿರ್ಧಾರ ಎಂದು ಅಭಿಪ್ರಾಯಪಟ್ಟಿದ್ದಾರೆ.

RELATED ARTICLES

Latest News