Homeರಾಜ್ಯಪಾರ್ಕಿಂಗ್‌ ನೀತಿ ಜಾರಿಗೆ ಮುಂದಾದ ಸರ್ಕಾರಕ್ಕೆ ಆರ್‌.ಅಶೋಕ್‌ ಎಚ್ಚರಿಕೆ

ಪಾರ್ಕಿಂಗ್‌ ನೀತಿ ಜಾರಿಗೆ ಮುಂದಾದ ಸರ್ಕಾರಕ್ಕೆ ಆರ್‌.ಅಶೋಕ್‌ ಎಚ್ಚರಿಕೆ

R. Ashok warns government over parking policy

ಬೆಂಗಳೂರು,ಆ.14- ಮನೆ ಮುಂದೆ ವಾಹನ ನಿಲ್ಲಿಸುವುದಕ್ಕೂ ಶುಲ್ಕ ವಿಧಿಸುವಂತಹ ಜನವಿರೋಧಿ ಪಾರ್ಕಿಂಗ್‌ ನೀತಿಯನ್ನು ರಾಜ್ಯ ಸರ್ಕಾರ ತಕ್ಷಣವೇ ಹಿಂಪಡೆಯಬೇಕು. ಇಲ್ಲವಾದರೆ ಮುಂಬರುವ ಜಿಬಿಎ ಚುನಾವಣೆಯಲ್ಲಿ ಬೆಂಗಳೂರಿನ ಜನತೆ ಕಾಂಗ್ರೆಸ್‌‍ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಎಚ್ಚರಿಕೆ ನೀಡಿದ್ದಾರೆ.

ತಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರ್ಕಾರದ ವಿರುದ್ಧ ಪೋಸ್ಟ್‌ ಮಾಡಿರುವ ಅವರು, ರಾಜಧಾನಿ ಬೆಂಗಳೂರಿನಲ್ಲಿ ಮನೆಗಳ ಮುಂಭಾಗದ ರಸ್ತೆಯಲ್ಲಿ ಸ್ವಂತ ವಾಹನ ನಿಲ್ಲಿಸುವುದಕ್ಕೂ ವಾರ್ಷಿಕ ಶುಲ್ಕ ವಿಧಿಸುವ ಉದ್ದೇಶ ಹೊಂದಿರುವ ಜಿಬಿಎ (ಎಆಅ) ಪಾರ್ಕಿಂಗ್‌ ನಿಯಮಗಳ ಕುರಿತು ವ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಜನರು ಈಗಾಗಲೇ ವಿವಿಧ ರೀತಿಯ ತೆರಿಗೆ ಹಾಗೂ ಶುಲ್ಕಗಳನ್ನು ಪಾವತಿಸುತ್ತಿದ್ದು, ತಮ ಸ್ವಂತ ಮನೆಯ ಮುಂದೆ ವಾಹನ ನಿಲ್ಲಿಸುವುದಕ್ಕೂ ವರ್ಷಕ್ಕೆ 15 ಸಾವಿರ ರೂ.ಗಳಿಂದ 25 ಸಾವಿರ ರೂ.ಗಳವರೆಗೆ ಶುಲ್ಕ ವಿಧಿಸಲು ಸರ್ಕಾರ ಮುಂದಾಗಿರುವುದು ಜನವಿರೋಧಿ ನೀತಿ ಎಂದು ಅವರು ಆರೋಪಿಸಿದ್ದಾರೆ.

ಮನೆ ಮುಂದಿನ ಪಾರ್ಕಿಂಗ್‌ಗೂ ಟ್ಯಾಕ್ಸ್ ವಿಧಿಸುವ ಸರ್ಕಾರದ ಹೊಸ ಸ್ಕೆಚ್‌ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಆರ್‌.ಅಶೋಕ್‌, ಖಾಲಿ ನಿವೇಶನಗಳಲ್ಲಿ ಕಸ ವಿಲೇವಾರಿ ಸೇರಿದಂತೆ ವಿವಿಧ ವಿಚಾರಗಳಲ್ಲಿ ಜನರಿಂದ ಹಣ ವಸೂಲಿ ಮಾಡುವ ಪ್ರಯತ್ನಗಳ ಬೆನ್ನಲ್ಲೇ ಇದೀಗ ಮನೆಗಳ ಮುಂಭಾಗದ ಪಾರ್ಕಿಂಗ್‌ ಮೇಲೂ ಸರ್ಕಾರದ ಕಣ್ಣು ಬಿದ್ದಿದೆಯೇ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನ ರಸ್ತೆಗಳ ದುಸ್ಥಿತಿಯನ್ನೂ ಪ್ರಸ್ತಾಪಿಸಿರುವ ಅವರು, ನಗರದಲ್ಲಿ ಸಾಲು ಸಾಲು ಗುಂಡಿಗಳಿದ್ದು, ಮಳೆ ಬಂದಾಗ ರಸ್ತೆಗಳು ಜಲಾವೃತವಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ರಸ್ತೆಗಳನ್ನು ಸಮರ್ಪಕವಾಗಿ ಅಭಿವದ್ಧಿಪಡಿಸದೆ, ಜನರಿಂದ ಪಾರ್ಕಿಂಗ್‌ ಶುಲ್ಕ ವಸೂಲಿ ಮಾಡಲು ಸರ್ಕಾರಕ್ಕೆ ಯಾವ ನೈತಿಕ ಹಕ್ಕಿದೆ ಎಂದು ಪ್ರಶ್ನಿಸಿದ್ದಾರೆ.

ಪಾರ್ಕಿಂಗ್‌ ದರ ಹೆಚ್ಚಿಸುವ ಬದಲು ಸರ್ಕಾರ ಮೊದಲು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಬೇಕು. ಮೆಟ್ರೋ ಕಾಮಗಾರಿಗಳಿಗೆ ವೇಗ ನೀಡುವುದರ ಜತೆಗೆ ಬಿಎಂಟಿಸಿ ಬಸ್‌‍ಗಳ ಸಂಖ್ಯೆಯನ್ನು ಹೆಚ್ಚಿಸಿ ಜನರಿಗೆ ಉತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

RELATED ARTICLES
spot_img

Latest News