Homeರಾಜ್ಯವಿಧಾನಸಭೆ ಸ್ಪೀಕರ್‌ ಆಗಿ ಜಿ.ಎಸ್‌‍.ಪಾಟೀಲ್‌, ಪರಿಷತ್ ಸಭಾಪತಿಯಾಗಿ ಸಲೀಂ ಅಹಮದ್‌ ಆಯ್ಕೆ

ವಿಧಾನಸಭೆ ಸ್ಪೀಕರ್‌ ಆಗಿ ಜಿ.ಎಸ್‌‍.ಪಾಟೀಲ್‌, ಪರಿಷತ್ ಸಭಾಪತಿಯಾಗಿ ಸಲೀಂ ಅಹಮದ್‌ ಆಯ್ಕೆ

G.S. Patil elected as Assembly Speaker, Salim Ahmed elected as Council Chairman

ಬೆಂಗಳೂರು,ಆ.14- ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಉಭಯ ಸದನಗಳಿಗೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇಂದು ನಡೆಯಿತು. ವಿಧಾನಸಭೆಯ ಸ್ಪೀಕರ್‌ ಆಗಿ ಗದಗ ಜಿಲ್ಲೆಯ ರೋಣ ಕ್ಷೇತ್ರದ ಶಾಸಕ ಜಿ.ಎಸ್‌‍.ಪಾಟೀಲ್‌ ಅವರು ಅವಿರೋಧವಾಗಿ ಆಯ್ಕೆಯಾದರೆ, ವಿಧಾನ ಪರಿಷತ್ತಿನ ಸಭಾಪತಿಯಾಗಿ ಸಲೀಂ ಅಹಮದ್‌ ಅವರು ಚುನಾವಣಾ ಪ್ರಕ್ರಿಯೆಯ ಮೂಲಕ ಆಯ್ಕೆಯಾಗಿದ್ದಾರೆ.

ವಿಧಾನಸಭೆಯ ಸಭಾಧ್ಯಕ್ಷ ಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಜಿ.ಎಸ್‌‍.ಪಾಟೀಲ್‌ ಅವರ ಹೆಸರನ್ನು ಪ್ರಸ್ತಾಪಿಸಿದರು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು ಇದನ್ನು ಅನುಮೋದಿಸಿದರು. ಪ್ರತಿಪಕ್ಷಗಳ ಗೈರುಹಾಜರಿಯ ಹಿನ್ನೆಲೆಯಲ್ಲಿ ಜಿ.ಎಸ್‌‍.ಪಾಟೀಲ್‌ ಅವರು ಅವಿರೋಧವಾಗಿ ಆಯ್ಕೆಯಾದರು.

ಡಿ.ಕೆ.ಶಿವಕುಮಾರ್‌ ನೇತೃತ್ವದ ಸರ್ಕಾರ ರಚನೆಯಾದ ಬಳಿಕ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಅಧ್ಯಕ್ಷ ಸ್ಥಾನಗಳಲ್ಲೂ ಬದಲಾವಣೆಯಾಗಿವೆ. ಈ ಹಿಂದೆ ವಿಧಾನಸಭೆಯ ಸ್ಪೀಕರ್‌ ಆಗಿದ್ದ ಯು.ಟಿ.ಖಾದರ್‌ ಅವರಿಗೆ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆ ನೀಡಲಾಗಿದೆ. ಅವರಿಂದ ತೆರವಾದ ಸ್ಥಾನಕ್ಕೆ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ರೋಣದ ಶಾಸಕ ಜಿ.ಎಸ್‌‍.ಪಾಟೀಲ್‌ ಅವರನ್ನು ಆಯ್ಕೆ ಮಾಡಲು ಕಾಂಗ್ರೆಸ್‌‍ ಹೈಕಮಾಂಡ್‌ ನಿರ್ಧರಿಸಿತ್ತು.

ನೂತನ ಸಚಿವರ ನೇಮಕಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌‍ ಹೈಕಮಾಂಡ್‌ ಪ್ರಕಟಿಸಿದ್ದ ಪಟ್ಟಿಯಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ನೇಮಕದ ಕುರಿತು ಸೂಚನೆ ನೀಡಲಾಗಿತ್ತು. ಅದರಂತೆ ವಿಧಾನಸಭೆಗೆ ಜಿ.ಎಸ್‌‍ .ಪಾಟೀಲ್‌ ಅವರನ್ನು ಸ್ಪೀಕರ್‌ ಆಗಿ ಆಯ್ಕೆ ಮಾಡಲಾಗಿದೆ.

ವಿಧಾನಸಭೆಯಲ್ಲಿ ಕಾಂಗ್ರೆಸ್‌‍ಗೆ ಸ್ಪಷ್ಟ ಬಹುಮತವಿದ್ದು, ಸುಮಾರು 135 ಶಾಸಕರ ಸಂಖ್ಯಾಬಲ ಹೊಂದಿದೆ. ರೈತ ಸಂಘದ ಶಾಸಕ ದರ್ಶನ್‌ ಪುಟ್ಟಣ್ಣಯ್ಯ, ಇಬ್ಬರು ಪಕ್ಷೇತರ ಶಾಸಕರು ಹಾಗೂ ಬಿಜೆಪಿ ಉಚ್ಚಾಟಿತ ಇಬ್ಬರು ಶಾಸಕರ ಬೆಂಬಲವನ್ನು ಪರಿಗಣಿಸಿದರೆ ಆಡಳಿತ ಪಕ್ಷದ ಬಲ 141 ರಷ್ಟಾಗುತ್ತದೆ. ಮತ್ತೊಂದೆಡೆ ಬಿಜೆಪಿ 62 ಶಾಸಕರನ್ನು ಹೊಂದಿದ್ದು, ಜನಾರ್ದನ ರೆಡ್ಡಿ ಮತ್ತು ಬಿಜೆಪಿ ಉಚ್ಚಾಟಿತ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಸೇರಿಸಿದರೂ ಸಂಖ್ಯಾಬಲ 64 ಕ್ಕೆ ತಲುಪುತ್ತದೆ. ಎನ್‌ಡಿಎ ಮೈತ್ರಿಕೂಟದ ಜೆಡಿಎಸ್‌‍ 18 ಸದಸ್ಯರನ್ನು ಹೊಂದಿದ್ದು, ಒಟ್ಟಾರೆ ಎನ್‌ಡಿಎ ಬಲ ಸುಮಾರು 82ರಷ್ಟಿದೆ.

ಈ ಸಂಖ್ಯಾಬಲದ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌‍ ಸ್ಪೀಕರ್‌ ಚುನಾವಣೆಯಿಂದ ಹಿಂದೆ ಸರಿದಿದ್ದವು. ಅಲ್ಲದೆ, ಪ್ರಜಾಸತ್ತಾತಕವಾಗಿ ನಡೆಯಬೇಕಿದ್ದ ಸ್ಪೀಕರ್‌ ಆಯ್ಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌‍ ಹೈಕಮಾಂಡ್‌ ಪಕ್ಷದ ಲೆಟರ್‌ಹೆಡ್‌ನಲ್ಲಿ ಅಭ್ಯರ್ಥಿಯ ಹೆಸರನ್ನು ಕಳುಹಿಸಿದೆ ಎಂದು ಆರೋಪಿಸಿ ಬಿಜೆಪಿ ವಿಧಾನಸಭಾಧ್ಯಕ್ಷರ ಚುನಾವಣೆಯನ್ನು ಬಹಿಷ್ಕರಿಸಿತು. ಹೀಗಾಗಿ ಜಿ.ಎಸ್‌‍.ಪಾಟೀಲ್‌ ಅವರು ಅವಿರೋಧವಾಗಿ ಆಯ್ಕೆಯಾದರು.

ಇನ್ನು ವಿಧಾನ ಪರಿಷತ್ತಿನಲ್ಲಿ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಅವರು ಆ.7ರಂದು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸ್ಥಾನ ತೆರವಾಗಿತ್ತು. ತೆರವಾದ ಸ್ಥಾನಕ್ಕೆ ಹಿರಿಯ ಸದಸ್ಯ ಪುಟ್ಟಣ್ಣ ಅವರು ಹಂಗಾಮಿ ಸಭಾಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ನೇತತ್ವದಲ್ಲಿ ನಡೆದ ನೂತನ ಸಭಾಪತಿ ಆಯ್ಕೆ ಚುನಾವಣೆಯಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿ ಸಲೀಂ ಅಹಮದ್‌ ಅವರು ಜಯಗಳಿಸಿದರು.

ವಿಧಾನ ಪರಿಷತ್ತಿನಲ್ಲಿ ಸಭಾಪತಿ ಸೇರಿ ಕಾಂಗ್ರೆಸ್‌‍ 39 ಸದಸ್ಯರ ಸಂಖ್ಯಾಬಲ ಹೊಂದಿದ್ದರೆ, ಬಿಜೆಪಿ 24 ಹಾಗೂ ಜೆಡಿಎಸ್‌‍ 6 ಸದಸ್ಯರನ್ನು ಹೊಂದಿವೆ. ಬಿಜೆಪಿ-ಜೆಡಿಎಸ್‌‍ ಮೈತ್ರಿಕೂಟದ ಸಂಖ್ಯಾಬಲ 30ರಷ್ಟಿದೆ. ಸಂಖ್ಯಾಬಲದ ಕೊರತೆಯಿದ್ದರೂ ಎನ್‌ಡಿಎ ಪರವಾಗಿ ಪಿ.ಎಚ್‌.ಪೂಜಾರ್‌ ಅವರನ್ನು ಒಮತದ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿತ್ತು. ಆದರೆ ಚುನಾವಣಾ ಪ್ರಕ್ರಿಯೆಯಲ್ಲಿ ಅವರಿಗೆ ಹಿನ್ನಡೆಯಾಗಿ ಸಲೀಂ ಅಹಮದ್‌ ಆಯ್ಕೆಯಾದರು.

ಉಭಯ ಸದನಗಳ ಅಧ್ಯಕ್ಷ ಸ್ಥಾನಗಳು ಕಾಂಗ್ರೆಸ್‌‍ ಪಾಲಾಗಿದ್ದು, ಇದೀಗ ಉಪಾಧ್ಯಕ್ಷರ ನೇಮಕದ ಮೇಲೂ ಗಮನ ನೆಟ್ಟಿದೆ. ವಿಧಾನಸಭೆಯ ಉಪಸಭಾಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಎ.ಎಸ್‌‍.ಪೊನ್ನಣ್ಣ ಅವರ ಹೆಸರನ್ನು ಪರಿಗಣಿಸಲಾಗಿತ್ತು. ಆದರೆ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವರನ್ನು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಹೀಗಾಗಿ ಮಾಜಿ ಸಚಿವ ಮಂಕಾಳ ಸುಬ್ಬವೈದ್ಯ ಅವರನ್ನು ವಿಧಾನಸಭೆಯ ಉಪಸಭಾಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ವಿಧಾನ ಪರಿಷತ್ತಿನ ಉಪಸಭಾಪತಿ ಸ್ಥಾನಕ್ಕೂ ಹೆಸರುಗಳು ಚರ್ಚೆಯಲ್ಲಿವೆ. ಮಾಜಿ ಸಚಿವೆ ಉಮಾಶ್ರೀ ಅವರ ಹೆಸರನ್ನು ಪರಿಗಣಿಸಲಾಗುತ್ತಿದೆ ಎನ್ನಲಾಗಿದ್ದು, ಅವರು ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ, ಈ ಹಿಂದೆ ಸಚಿವರ ಪಟ್ಟಿಯಲ್ಲಿ ಹೆಸರು ಕೇಳಿಬಂದಿದ್ದ ಗಾಯತ್ರಿ ಶಾಂತಿಗೌಡ ಅವರನ್ನೂ ಉಪಸಭಾಪತಿ ಸ್ಥಾನಕ್ಕೆ ನೇಮಿಸುವ ಕುರಿತು ಚರ್ಚೆ ನಡೆದಿದೆ.
ಸಚಿವ ಸ್ಥಾನ ದೊರೆಯದಿದ್ದರೆ ಕನಿಷ್ಠ ಉಪಸಭಾಪತಿ ಸ್ಥಾನವಾದರೂ ದೊರೆಯಲಿ ಎಂಬ ನಿರೀಕ್ಷೆಯನ್ನು ಉಮಾಶ್ರೀ ಅವರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಮುಂದಿನ ದಿನಗಳಲ್ಲಿ ಉಪಸಭಾಪತಿ ಸ್ಥಾನಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌‍ ಹೈಕಮಾಂಡ್‌ ಹಾಗೂ ರಾಜ್ಯ ನಾಯಕತ್ವ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

RELATED ARTICLES
spot_img

Latest News