ಅಹಮದಾಬಾದ್,ಜು.7- 2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಕೆಳ ನ್ಯಾಯಾಲಯವು 38 ಅಪರಾಧಿಗಳಿಗೆ ವಿಧಿಸಲಾದ ಮರಣದಂಡನೆ ಮತ್ತು ಇತರ 11 ಜನರಿಗೆ ನೀಡಲಾದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಅಪರಾಧಿಗಳು ಸಲ್ಲಿಸಿದ ಎಲ್ಲಾ ಮೇಲನವಿಗಳನ್ನು ಸಹ ವಜಾಗೊಳಿಸಿದೆ. ಸ್ಫೋಟಗಳಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ತಲಾ 10 ಲಕ್ಷ ರೂ.ಗಳ ಪರಿಹಾರವನ್ನು ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಗುಜರಾತ್ ಹೈಕೋರ್ಟ್ನ ವಿಶೇಷ ನ್ಯಾಯ ಪೀಠವು ಈ ನಿರ್ಧಾರವನ್ನು ನೀಡಿದೆ. ವಿಷಯದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಪ್ರಕರಣದ ವಿಚಾರಣೆಗಾಗಿ ಹೈಕೋರ್ಟ್ ವಿಶೇಷ ಪೀಠವನ್ನು ರಚಿಸಿತು. ಮಾರ್ಚ್ 2025 ರಿಂದ ಪ್ರಕರಣದ ವಿಚಾರಣೆ ನಿಯಮಿತವಾಗಿ ನಡೆಯುತ್ತಿತ್ತು. ಮರಣದಂಡನೆಯನ್ನು ದೃಢೀಕರಿಸಲು ರಾಜ್ಯ ಸರ್ಕಾರ ಸಲ್ಲಿಸಿದ ಅರ್ಜಿ ಮತ್ತು ಅವರ ಶಿಕ್ಷೆಯ ವಿರುದ್ಧ ಅಪರಾಧಿಗಳು ಸಲ್ಲಿಸಿದ ಮೇಲನವಿಗಳ ಜಂಟಿ ವಿಚಾರಣೆಯ ನಂತರ, ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿತ್ತು.
ವಾಸ್ತವವಾಗಿ, ಫೆಬ್ರವರಿ 18, 2022 ರಂದು, ಅಹಮದಾಬಾದ್ ವಿಶೇಷ ನ್ಯಾಯಾಲಯವು ಈ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ನೀಡಿತು, 38 ಅಪರಾಧಿಗಳಿಗೆ ಮರಣದಂಡನೆ ಮತ್ತು ಇತರ 11 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಭಾರತೀಯ ಕಾನೂನಿನ ಪ್ರಕಾರ, ಕೆಳ ನ್ಯಾಯಾಲಯವು ನೀಡುವ ಮರಣದಂಡನೆಯನ್ನು ಸಂಬಂಧಿತ ಹೈಕೋರ್ಟ್ ದೃಢೀಕರಿಸದ ಹೊರತು ಜಾರಿಗೊಳಿಸಲಾಗುವುದಿಲ್ಲ. ಇದೇ ಕಾನೂನು ಪ್ರಕ್ರಿಯೆಯ ಅಡಿಯಲ್ಲಿ, ಪ್ರಕರಣವು ಗುಜರಾತ್ ಹೈಕೋರ್ಟ್ನಲ್ಲಿ ಬಾಕಿ ಇತ್ತು.
ಜುಲೈ 26, 2008 ರಂದು, ಗುಜರಾತ್ ರಾಜಧಾನಿ ಅಹಮದಾಬಾದ್ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳು ಇಡೀ ರಾಷ್ಟ್ರವನ್ನೇ ಬೆಚ್ಚಿಬೀಳಿಸಿದ್ದವು. ಕೆಲವೇ ನಿಮಿಷಗಳಲ್ಲಿ, ನಗರದ ವಿವಿಧ ಪ್ರದೇಶಗಳಲ್ಲಿ ಹಲವಾರು ಬಾಂಬ್ಗಳು ಸ್ಫೋಟಗೊಂಡು 50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡರು. ಮಾರುಕಟ್ಟೆಗಳು, ಬಸ್ಗಳು ಮತ್ತು ಜನದಟ್ಟಣೆಯ ಪ್ರದೇಶಗಳಲ್ಲಿ ಬಾಂಬ್ ಸ್ಫೋಟಗಳು ನಡೆದವು. ತನಿಖಾ ಸಂಸ್ಥೆಗಳು ಇದನ್ನು ದೇಶದ ಅತಿದೊಡ್ಡ ಭಯೋತ್ಪಾದಕ ದಾಳಿಗಳಲ್ಲಿ ಒಂದೆಂದು ಪರಿಗಣಿಸಿವೆ. ಸುದೀರ್ಘ ತನಿಖೆ ಮತ್ತು ವಿಚಾರಣೆಯ ನಂತರ, ವಿಶೇಷ ನ್ಯಾಯಾಲಯವು 49 ಆರೋಪಿಗಳನ್ನು ದೋಷಿಗಳೆಂದು ನಿರ್ಣಯಿಸಿತು.
ವಿಶೇಷ ನ್ಯಾಯಾಲಯದ ತೀರ್ಪಿನ ನಂತರ, ಅಪರಾಧಿಗಳು ಗುಜರಾತ್ ಹೈಕೋರ್ಟ್ನಲ್ಲಿ ಮೇಲನವಿ ಸಲ್ಲಿಸಿದರು. ರಾಜ್ಯ ಸರ್ಕಾರವು ಮರಣದಂಡನೆಯನ್ನು ದಢೀಕರಿಸಲು ಅರ್ಜಿ ಸಲ್ಲಿಸಿತು. ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ, ಹೈಕೋರ್ಟ್ ವಿವರವಾದ ವಿಚಾರಣೆಯನ್ನು ನಡೆಸಿ, ಈಗ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದು, ಎಲ್ಲಾ ಮೇಲನವಿಗಳನ್ನು ವಜಾಗೊಳಿಸಿತು. ಹೈಕೋರ್ಟ್ನ ಈ ತೀರ್ಪಿನ ನಂತರ, 38 ಅಪರಾಧಿಗಳಿಗೆ ಮರಣದಂಡನೆಯನ್ನು ನ್ಯಾಯಾಂಗವಾಗಿ ಅನುಮೋದಿಸಲಾಗಿದೆ, ಆದರೆ 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೆಯೇ ಉಳಿದಿದೆ. ಆದಾಗ್ಯೂ, ಅಪರಾಧಿಗಳು ಇನ್ನೂ ಸುಪ್ರೀಂ ಕೋರ್ಟ್ಗೆ ಮೇಲನವಿ ಸಲ್ಲಿಸುವ ಕಾನೂನುಬದ್ಧ ಆಯ್ಕೆಯನ್ನು ಹೊಂದಿದ್ದಾರೆ.
ಏನಿದು ಅಹಮದಾಬಾದ್ ಬಾಂಬ್ ಸ್ಫೋಟ ಪ್ರಕರಣ? :
ಅಹಮದಾಬಾದ್ ನಗರದಲ್ಲಿ ನಡೆದ 21 ಕಡೆ ಬಾಂಬ್ ಸ್ಫೋಟಗಳಲ್ಲಿ 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 2008 ರ ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು 49 ಅಪರಾಧಿಗಳಲ್ಲಿ ಮೂವತ್ತೆಂಟು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಸುಮಾರು 80 ಆರೋಪಿಗಳು ವಿಚಾರಣೆಯಲ್ಲಿದ್ದರು. 2008 ರಲ್ಲಿ ಗುಜರಾತ್ನ ನಗರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 56 ಜನರು ಸಾವನ್ನಪ್ಪಿದರು. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎ.ಆರ್.ಪಟೇಲ್ ಅವರು ಪ್ರಕರಣದ ಇತರ 11 ಅಪರಾಧಿಗಳಿಗೆ ಸಾಯುವವರೆಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರು.
ಫೆಬ್ರವರಿ 8 ರಂದು ಗುಜರಾತ್ ನ್ಯಾಯಾಲಯವು ಈ ಪ್ರಕರಣದಲ್ಲಿ 49 ಆರೋಪಿಗಳನ್ನು ದೋಷಿಗಳು ಎಂದು ತೀರ್ಪು ನೀಡಿ,್ತ ಇತರ 28 ಜನರನ್ನು ಖುಲಾಸೆಗೊಳಿಸಿತ್ತು. 13 ವರ್ಷಗಳಿಗೂ ಹಳೆಯದಾದ ಪ್ರಕರಣದ ವಿಚಾರಣೆಯನ್ನು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ನ್ಯಾಯಾಲಯ ಕೊನೆಗೊಳಿಸಿತ್ತು.
ನಿಷೇಧಿತ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ(ಸಿಮಿ)ದ ಒಂದು ಬಣವಾದ ಇಂಡಿಯನ್ ಮುಜಾಹಿದ್ದೀನ್ (ಐಎಂ) ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಜನರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಹೇಳಿಕೊಂಡಿದ್ದರು. 2002 ರ ಗೋಧ್ರಾ ನಂತರದ ಗಲಭೆಗೆ ಪ್ರತೀಕಾರವಾಗಿ ಇಂಡಿಯನ್ ಮುಜಾಹಿದ್ದೀನ್ (ಐಒ) ಭಯೋತ್ಪಾದಕರು ಈ ಸ್ಫೋಟಗಳನ್ನು ಯೋಜಿಸಿ ಕಾರ್ಯಗತಗೊಳಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಗೋದ್ರಾಗೆ ಸೇಡು? :
2002ರಲ್ಲಿ ಗೋಧ್ರಾ ಹತ್ಯಾಕಾಂಡದ ನಂತರದ ಗಲಭೆಗೆ ಪ್ರತೀಕಾರ ತೀರಿಸಿಕೊಳ್ಳಲು ಇಂಡಿಯನ್ ಮುಜಾಹಿದ್ದೀನ್ ಈ ಸ್ಫೋಟ ನಡೆಸಿದೆ ಎಂದು ಆರೋಪದಲ್ಲಿ ಹೇಳಲಾಗಿದೆ. ಅಹಮದಾಬಾದ್ನಲ್ಲಿ ಸ್ಫೋಟದ ಕೆಲವು ದಿನಗಳ ನಂತರ, ಪೊಲೀಸರು ಸೂರತ್ನ ವಿವಿಧ ಸ್ಥಳಗಳಿಂದ ಬಾಂಬ್ಗಳನ್ನು ವಶಪಡಿಸಿಕೊಂಡರು. ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಅಹಮದಾಬಾದ್ನಲ್ಲಿ 20 ಮತ್ತು ಸೂರತ್ನಲ್ಲಿ 15 ಎಫ್ಐಆರ್ಗಳು ದಾಖಲಾಗಿದ್ದವು.
ವಿಶೇಷ ನ್ಯಾಯಾಲಯವು ಆರಂಭದಲ್ಲಿ ಈ ಪ್ರಕರಣವನ್ನು ಸಾಬರಮತಿ ಕೇಂದ್ರ ಕಾರಾಗೃಹದಲ್ಲಿ ವಿಚಾರಣೆ ನಡೆಸುತ್ತಿತ್ತು. ನಂತರ, ಹೆಚ್ಚಿನ ವಿಚಾರಣೆಗಳು ವೀಡಿಯೊ ಕಾನ್ಫರೆನ್್ಸ ಮೂಲಕ ನಡೆದವು. 2013ರಲ್ಲಿ ಈ ಪ್ರಕರಣದ ಕೆಲ ಆರೋಪಿಗಳು ಜೈಲಿನಲ್ಲಿ 213 ಅಡಿ ಉದ್ದದ ಸುರಂಗ ಕೊರೆದು ಪರಾರಿಯಾಗಲು ಯತ್ನಿಸಿದ್ದರು.
