ಹೈದರಾಬಾದ್,ಮಾ.16- ಪತಿಯೊಂದಿಗೆ ಜಗಳವಾಡಿದ ನಂತರ ಮಹಿಳೆ ತನ್ನ 14 ತಿಂಗಳ ಹೆಣ್ಣುಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಗೋಲ್ಕೊಂಡದ ರಿಸಾಲಾ ಬಜಾರ್ ನಿವಾಸಿ ಗೌಸಿಯಾ ಬೇಗಂ ಕೊಲೆ ಮಾಡಿರುವ ತಾಯಿ.
ಅಮೀರ್ ಅಲಿ ಎಂಬ ಆಟೋ ಚಾಲಕನೊಂದಿಗೆ ಗೌಸಿಯಾ ಬೇಗಂ ಮದುವೆಯಾಗಿದ್ದು, ದಂಪತಿಗೆ ಒಂದೂವರೆ ವರ್ಷದ ಉಮೆ ಅಹದ್ ಹೆಸರಿನ ಹೆಣ್ಣು ಮಗುವಿತ್ತು.
ಹಬ್ಬಕ್ಕೆ ಬಟ್ಟೆ ಕೊಡಿಸುವ ವಿಷಯಕ್ಕೆ ಅಮೀರ್ ಮತ್ತು ಗೌಸಿಯಾ ನಡುವೆ ಜಗಳ ನಡೆದಿದೆ. ಕೋಪಗೊಂಡಿದ್ದ ಅಮೀರ್ ಮನೆಯಿಂದ ಹೊರಗೆ ಹೊರಟು ಹೋದ ಸಮಯದಲ್ಲಿ ಗೌಸಿಯಾ ಬೇಗಂ ಮಗುವನ್ನು ಉಸಿರುಗಟ್ಟಿಸಿ ಕೊಂದಿದ್ದಾಳೆ.
ಘಟನೆಯ ನಂತರ ಖುದ್ದು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದು, ಆಕೆಯನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ವಿಚಾರಣೆ ನಡೆಸಿದಾಗ ಹೈದರಾಬಾದ್‌ನ ಪತಂಚೇರುವಿನಲ್ಲಿರುವ ನಿರ್ಮಾಣ ಸ್ಥಳದಲ್ಲಿ ಮಗುವಿನ ದೇಹ ಇಟ್ಟಿರುವುದಾಗಿ ತಿಳಿಸಿದ್ದಾಳೆ. ಮಗುವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆ ಸಾಗಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
