Saturday, April 11, 2026
Homeರಾಷ್ಟ್ರೀಯಎಲ್‌ಪಿಜಿ, ಕಚ್ಚಾ ತೈಲ ಆಮದುಗಳ ಮೇಲೆ ಅವಲಂಬನೆ : ಮೋದಿ ವಿರುದ್ಧ ಕಾಂಗ್ರೆಸ್‌‍ ವಾಗ್ದಾಳಿ

ಎಲ್‌ಪಿಜಿ, ಕಚ್ಚಾ ತೈಲ ಆಮದುಗಳ ಮೇಲೆ ಅವಲಂಬನೆ : ಮೋದಿ ವಿರುದ್ಧ ಕಾಂಗ್ರೆಸ್‌‍ ವಾಗ್ದಾಳಿ

India oil imports: Congress attacks Modi as dependence, LPG fears rise now.

ನವದೆಹಲಿ, ಮಾ.27- ದೇಶದಲ್ಲಿ ಕಚ್ಚಾ ತೈಲ, ಎಲ್‌ಪಿಜಿ ಹಾಗೂ ನೈಸರ್ಗಿಕ ಅನಿಲ ಆಮದುಗಳ ಮೇಲಿನ ಅವಲಂಬನೆ ಹೆಚ್ಚುತ್ತಿರುವ ವಿಚಾರಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌‍ ತೀವ್ರ ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್‌‍ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಸಾಮಾಜಿಕ ಜಾಲತಾಣದಲ್ಲಿ, ಮೋದಿ ಭರವಸೆ ನೀಡಿದ್ದ ಅನಿಲ ಯೋಜನೆ ಭರವಸೆಯಾಗಿಯೇ ಉಳಿದಿದೆ ಎಂದು ಟೀಕಿಸಿದ್ದಾರೆ.

2014-15ರಲ್ಲಿ ಶೇ.84ರಷ್ಟಿದ್ದ ಭಾರತದ ಕಚ್ಚಾ ತೈಲ ಆಮದು ಅವಲಂಬನೆ 2024-25ರ ವೇಳೆಗೆ ಶೇ.90ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಎಲ್‌ಪಿಜಿ ಆಮದು ಅವಲಂಬನೆ ಶೇ.46 ರಿಂದ 62 ಶೇಕಡಾಕ್ಕೆ ಹೆಚ್ಚಾಗಿದೆ ಎಂದು ಅವರು ವಿವರಿಸಿದ್ದಾರೆ. ಪ್ರಧಾನಿ ಆತನಿರ್ಭರತೆ (ಸ್ವಾವಲಂಬನೆ) ಘೋಷಣೆ ನೀಡಿದ್ದರೂ ವಾಸ್ತವ ಸ್ಥಿತಿ ಭಿನ್ನವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ನೈಸರ್ಗಿಕ ಅನಿಲ ಕುರಿತ ವಿಚಾರ ಇನ್ನಷ್ಟು ಗೊಂದಲಕಾರಿಯಾಗಿದೆ ಎಂದು ಹೇಳಿದ್ದಾರೆ.

2005ರ ಜೂನ್‌ 26ರಂದು ಆಗಿನ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಕೃಷ್ಣಾ-ಗೋದಾವರಿ ಕಣಿವೆಗೆ ಹೊಂದಿಕೊಳ್ಳುವ ಆಳ ಸಮುದ್ರ ಪ್ರದೇಶದಲ್ಲಿ ಭಾರತದ ಅತಿದೊಡ್ಡ ಅನಿಲ ಸಂಗ್ರಹ ಪತ್ತೆಯಾಗಿದೆ ಎಂದು ಘೋಷಿಸಿದ್ದರು. ಇದರಿಂದ ಭಾರತ ಇಂಧನ ಸ್ವಾವಲಂಬಿ ಆಗಲಿದೆ ಎಂದು ಬಿಂಬಿಸಿದ್ದರು.

2011ರಿಂದ 2016ರ ನಡುವೆ ಮಹಾಲೇಖಪರಿಶೋಧಕ (ಸಿಎಜಿ) ಐದು ವರದಿಗಳನ್ನು ನೀಡಿ ಇದನ್ನು 20 ಸಾವಿರ ಕೋಟಿ ರೂ. ಅವ್ಯವಹಾರ ಎಂದು ಬಹಿರಂಗಪಡಿಸಿದೆ. ನಂತರ 2017 ಆಗಸ್ಟ್‌ನಲ್ಲಿ ಗುಜರಾತ್‌ ಸ್ಟೇಟ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಅನ್ನು ಆಯಿಲ್‌ ಅಂಡ್‌ ನ್ಯಾಚುರಲ್‌ ಗ್ಯಾಸ್‌‍ ಕಾರ್ಪೊರೇಷನ್‌ (ಒಎನ್‌ಜಿ ಸಿ) ಜೊತೆಗೆ ವಿಲೀನಗೊಳಿಸಲಾಯಿತು ಎಂದು ಹೇಳಿದ್ದಾರೆ.

ಪಶ್ಚಿಮ ಏಷ್ಯಾ ಯುದ್ಧದ ಹಿನ್ನೆಲೆ ಪೆಟ್ರೋಲ್‌ ಬಂಕ್‌ಗಳು ಮತ್ತು ಎಲ್‌ಪಿಜಿ ವಿತರಣೆ ಕೇಂದ್ರಗಳಲ್ಲಿ ಆತಂಕದಿಂದ ಖರೀದಿ ಹೆಚ್ಚಾಗಿದೆ ಎಂಬ ವರದಿಗಳ ನಡುವೆ ಕಾಂಗ್ರೆಸ್‌‍ ಟೀಕಾ ಪ್ರಹಾರ ನಡೆಸಿದೆ.
ಈ ನಡುವೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮೊದಲ ಬಾರಿಗೆ ಕಚ್ಚಾ ತೈಲ, ಇಂಧನ ಮತ್ತು ಎಲ್‌ಪಿಜಿ ಸಂಗ್ರಹ ವಿವರಗಳನ್ನು ಪ್ರಕಟಿಸಿ ಜನರಿರುವಲ್ಲಿ ಆತಂಕವನ್ನು ದೂರ ಮಾಡಲು ಕೇಂದ್ರ ಸರ್ಕಾರ ಯತ್ನಿಸಿದೆ.

ಭಾರತದ ಬಳಿ ಸುಮಾರು 60 ದಿನಗಳಿಗೆ ಸಾಕಾಗುವಷ್ಟು ತೈಲ ಸಂಗ್ರಹವಿದ್ದು, ಒಂದು ತಿಂಗಳಿಗೆ ಬೇಕಾದಷ್ಟು ಎಲ್ಪಿಜಿ ಪೂರೈಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಪೆಟ್ರೋಲ್‌‍, ಡೀಸೆಲ್‌ ಅಥವಾ ಎಲ್ಪಿಜಿ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿ, ಕೊರತೆ ಕುರಿತ ವರದಿಗಳನ್ನು ಉದ್ದೇಶಪೂರ್ವಕ ತಪ್ಪುಮಾಹಿತಿ ಎಂದು ಸರ್ಕಾರ ಸ್ಪಷ್ಟ ಪಡಿಸಿದೆ.

ಜೊತೆಯಲ್ಲಿ ಸರ್ಕಾರಿ ತೈಲ ಮಾರಾಟ ಕಂಪನಿಗಳೂ ದೇಶದಲ್ಲಿ ಇಂಧನ ಮತ್ತು ಎಲ್‌ಪಿಜಿ ಪೂರೈಕೆ ಸ್ಥಿರವಾಗಿದ್ದು ಯಾವುದೇ ಕೊರತೆ ಇಲ್ಲ ಎಂದು ಪ್ರಕಟಣೆ ನೀಡಿವೆ. ದೇಶದ ಎಲ್ಲಾ ಪೆಟ್ರೋಲ್‌ ಬಂಕ್‌ಗಳಲ್ಲಿ ಸಾಕಷ್ಟು ಸಂಗ್ರಹ ಲಭ್ಯವಿದ್ದು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ, ಪೆಟ್ರೋಲ್‌ ಅಥವಾ ಡೀಸೆಲ್‌ ಕೊರತೆ ಇಲ್ಲ ಎಂದು ಸಚಿವಾಲಯ ತಿಳಿಸಿದೆ.

RELATED ARTICLES

Latest News