ರಾಂಚಿ,ಆ.11- ಜಾರ್ಖಂಡ್ ಉದ್ಯೋಗಾಕಾಂಕ್ಷಿ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದಬ್ಬಾಳಿಕೆ ಹಾಗೂ ಬಲಪ್ರಯೋಗವನ್ನು ಖಂಡಿಸಿ ರಾಜ್ಯಾದ್ಯಂತ ತೀವ್ರ ಸ್ವರೂಪದ ಪ್ರತಿಭಟನೆಗಳು ವ್ಯಕ್ತವಾಗಿವೆ. ಜೆಪಿಎಸ್ಸಿ ಮತ್ತು ಜೆಎಸ್ಎಸ್ಸಿ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ನೇಮಕಾತಿ ಪರೀಕ್ಷೆಗಳಲ್ಲಿನ ಪಾರದರ್ಶಕತೆಯ ಕೊರತೆ ಖಂಡಿಸಿ ವಿದ್ಯಾರ್ಥಿಗಳು ಕಳೆದ ಕೆಲವು ದಿನಗಳಿಂದ ನಡೆಸುತ್ತಿರುವ ಆಂದೋಲನವು ಈಗ ತೀವ್ರ ರಾಜಕೀಯ ತಿರುವು ಪಡೆದುಕೊಂಡಿದೆ.
ಬಂದ್ ಕಾವು ಹೆಚ್ಚುತ್ತಿದ್ದಂತೆ ರಾಂಚಿಯ ಕಿಶೋರ್ಗಂಜ್, ಅರ್ಗೋರಾ, ಕಾಂಕೆ ಪ್ರದೇಶ ಹಾಗೂ ಹರ್ಮು ಚೌಕ್ನಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಎಬಿವಿಪಿ ಕಾರ್ಯಕರ್ತರು ರಸ್ತೆಗಳಿಗೆ ತಡೆ ಒಡ್ಡಿ, ಟೈರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ರಾಮಗಢ ಜಿಲ್ಲೆಯಲ್ಲಿ ರಾಂಚಿ-ಪಾಟ್ನಾ ಹೆದ್ದಾರಿಯನ್ನು ಸುಮಾರು ಮೂರು ಗಂಟೆಗಳಿಗೂ ಹೆಚ್ಚು ಕಾಲ ತಡೆದಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ಪೊಲೀಸರು ಸ್ಥಳಕ್ಕೆ ಧಾವಿಸಿ ಹಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.
ನಮ ಬೇಡಿಕೆಗಳ ಈಡೇರಿಕೆಗೆ ಯಾರು ಬೆಂಬಲ ನೀಡಿದರೂ ಸ್ವಾಗತಿಸುತ್ತೇವೆ, ಆದರೆ ನಮಗೆ ಯಾವುದೇ ರಾಜಕೀಯ ಅಜೆಂಡಾ ಇಲ್ಲ. ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರೊಂದಿಗೆ ನೇರ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳುವುದು ನಮ ಏಕೈಕ ಗುರಿ ಎಂದು ವಿದ್ಯಾರ್ಥಿ ನಾಯಕ ಪಿಯೂಷ್ ಸ್ಪಷ್ಟಪಡಿಸಿದ್ದಾರೆ.
ಹಳೆಯ ವಿಧಾನಸಭೆ ಕಟ್ಟಡದಿಂದ ಹೊಸ ವಿಧಾನಸಭೆ ಆವರಣದವರೆಗೆ ಸೋಮವಾರ ಸಾವಿರಾರು ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ನಡೆಸಿದ ಬೃಹತ್ ಮೆರವಣಿಗೆಯು ಹಿಂಸಾರೂಪಕ್ಕೆ ತಿರುಗಿತ್ತು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಜಲಫಿರಂಗಿ, ಅಶ್ರುವಾಯು ಹಾಗೂ ಲಾಠಿ ಪ್ರಹಾರ ನಡೆಸಿದ್ದರು. ಈ ವೇಳೆ ಹಲವು ವಿದ್ಯಾರ್ಥಿಗಳು ಹಾಗೂ ಪೊಲೀಸರು ಗಾಯಗೊಂಡಿದ್ದರು.
ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ), ಜಾರ್ಖಂಡ್ ಸರ್ಕಾರದ ವಿರುದ್ಧ ಬೆಳಗ್ಗೆ 8ರಿಂದ ಮಧ್ಯರಾತ್ರಿವರೆಗೆ ರಾಜ್ಯಾದ್ಯಂತ ಬಂದ್ಗೆ ಕರೆ ನೀಡಿತ್ತು. ಜೆಎಂಎಂ (ಎಒಒ) ನೇತೃತ್ವದ ಹೇಮಂತ್ ಸೊರೇನ್ ಸರ್ಕಾರವು ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಮತ್ತು ಬಲಪ್ರಯೋಗದ ಮೂಲಕ ಧಮನಕಾರಿ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಆದಿತ್ಯ ಸಾಹು ಆರೋಪಿಸಿದ್ದಾರೆ.
