ನವದೆಹಲಿ,ಏ.9- ಮಹಿಳಾ ಮೀಸಲಾತಿ ವಿಧೇಯಕಕ್ಕೆ ಪ್ರಸ್ತಾವಿಕ ತಿದ್ದುಪಡಿಗಳು ಒಂದು ಶಾಸಕಾಂಗ ಕ್ರಮವಷ್ಟೇ ಅಲ್ಲ, ಭಾರತದ ಕೋಟ್ಯಂತರ ಮಹಿಳೆಯರ ಆಶೋತ್ತರಗಳ ಪ್ರತಿಬಿಂಬವಾಗಿದ್ದು ಎಲ್ಲಾ ಸಂಸತ್ ಸದಸ್ಯರು ಈ ಕ್ರಮಕ್ಕೆ ಒಟ್ಟಾಗಿ ಬೆಂಬಲ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಗ್ರಹಿಸಿದ್ದಾರೆ.
ಈ ಕ್ರಮವು ಮಹಿಳೆ ಪ್ರಗತಿ ಹೊಂದಿದರೆ ಸಮಾಜ ಪ್ರಗತಿ ಹೊಂದುತ್ತದೆ ಎಂಬ ಭಾರತದ ನಾಗರಿಕ ನೀತಿಗೆ ಮಾರ್ಗದರ್ಶನ ನೀಡಿದ ತತ್ವಸಿದ್ಧಾಂತದ ದೃಢೀಕರಣ ಎಂದು ಅವರು ತಮ್ಮ ವೆಬ್‌ಸೈಟ್ ನರೇಂದ್ರ ಮೋದಿ ಡಾಟ್ ಇನ್‌ನಲ್ಲಿ ಪೋಸ್ಟ್ ಮಾಡಿರುವ ಸಹಿ ಇರುವ ಲೇಖನವೊಂದರಲ್ಲಿ ಹೇಳಿದ್ದಾರೆ.
2029ರ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳು ಮಹಿಳಾ ಮಿಸಲಾತಿಯೊಂದಿಗೆ ನಡೆಯುವಂತೆ ನೋಡಿಕೊಳ್ಳುವುದು ಅತಿ ಮುಖ್ಯ ಎಂದು ಅವರು ಪ್ರತಿಪಾದಿಸಿದ್ದಾರೆ. ದೇಶವು ಐತಿಹಾಸಿಕ ಸಂದರ್ಭದಲ್ಲಿದೆ. ದೇಶದ ಪ್ರಜಾಪ್ರಭುತ್ವದ ತಳಹದಿಯನ್ನು ಮತ್ತಷ್ಟು ಭದ್ರಗೊಳಿಸಲು ಮತ್ತು ಸಮಾನತೆ ಹಾಗೂ ಬಳಗೊಳ್ಳುವಿಕೆಯೊಡಗಿನ ಬದ್ಧತೆಯನ್ನು ಮರು ದೃಢೀಕರಿಸಲು ಇದು ಒಂದು ಅವಕಾಶ ಎಂದು ಅವರು ನುಡಿದಿದ್ದಾರೆ.
ಏಪ್ರಿಲ್ 16ರಂದು ಅಧಿವೇಶನವನ್ನು ವಿಸ್ತರಿಸಿದ್ದು ಸದನವು ಏಪ್ರಿಲ್ 16ರಿಂದ 18ರ ವರೆಗೆ ನಾರಿಶಕ್ತಿ ವಂದನ್ ಅಧಿನಿಯಮ್ ಕುರಿತ (ಮಹಿಳಾ ಮೀಸಲಾತಿ ವಿಧೇಯಕ ಎಂದು ಪರಿಚಿತ) ಚರ್ಚೆ ನಡೆಸಲಿದೆ.
2023ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಲೋಕಸಭಾ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿಗೆ ಅವಕಾಶ ಕಲ್ಪಿಸಲಾಗಿದದೆ. ಆದರೆ ಇದು 2027ರ ಜನಗಣತಿಯನ್ನಾಧರಿಸಿದ ಕ್ಷೇತ್ರ ಮರು ವಿಂಗಡಣೆ ಪ್ರಕ್ರಿಯೆ ಬಳಿಕ ಜಾರಿಗೆ ಬರಲಿವೆ. ಆದ್ದರಿಂದ ಈ ಕಾಯಿದೆ 2034ರಲ್ಲಿ ಜಾರಿಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.
ಪ್ರಸಕ್ತ 543 ಸದಸ್ಯ ಬಲದ ಲೋಕಸಭಾ ಸ್ಥಾನಗಳನ್ನು 816ಕ್ಕೆ ಹೆಚ್ಚಿಸಲಾಗುವುದು. ಇವುಗಳ ಪೈಕಿ 273 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗುವುದು. ಮೀಸಲಾತಿ ಲಾಬಾಧಾರದಲ್ಲಿ ಸಿಗಲಿದ್ದು ಎಸ್‌ಸಿ ಮತ್ತು ಎಸ್‌ಟಿಗಳಿಗೆ ನಿಗದಿಯಾದ ಸ್ಥಾನಗಳನ್ನೂ ಒಳಗೊಂಡಿರುತ್ತದೆ.ಕ್ಷೇತ್ರಗಳ ಪುನರ್ವಿಂಗಡಣೆ ಪ್ರಸ್ತಾವಿತ 2027ರ ಜನಗಣತಿಗಿಂತ 2011 ಜನಗಣತಿ ಆಧರಿತವಾಗಿರುತ್ತದೆ.ರಾಜ್ಯಗಳ ವಿಧಾನಸಭೆಗಳಲ್ಲೂ ಇದೇ ರೀತಿಯ ಮೀಸಲಾತಿ ಕಲ್ಪಿಸಲು ಚಿಂತನೆ ನಡೆಸಲಾಗಿದೆ.
