Tuesday, April 14, 2026
Homeರಾಜ್ಯದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆ : ಭರ್ಜರಿ ಮತದಾನ

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆ : ಭರ್ಜರಿ ಮತದಾನ

Davangere South and Bagalkot by-elections: Peaceful voting

ಬೆಂಗಳೂರು,ಏ.9- ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಹಣಾಹಣಿಗೆ ಸಾಕ್ಷಿಯಾಗಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕೆಲವು ಸಣ್ಣಪುಟ್ಟ ಗೊಂದಲ, ಮಾತಿನ ಚಕಮಕಿ, ಹಣ ಹಂಚಿಕೆ ಆರೋಪ, ಇವಿಎಂ ಸಮಸ್ಯೆ ಹೊರತುಪಡಿಸಿದರೆ ಶೇ.50ಕ್ಕೂ ಹೆಚ್ಚು ಮತದಾನ ನಡೆದಿದೆ.

ಬೆಳಗ್ಗೆ 7 ಗಂಟೆಯಿಂದ ಆರಂಭವಾದ ಮತದಾನಕ್ಕೆ ಎರಡೂ ಕ್ಷೇತ್ರಗಳಲ್ಲೂ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಧ್ಯಾಹ್ನದ ವೇಳೆಗೆ ಮತದಾನದ ಪ್ರಮಾಣ ಶೇ.50ರಷ್ಟು ದಾಟಿತ್ತು.

ಬಿಜೆಪಿ, ಕಾಂಗ್ರೆಸ್‌‍, ಪಕ್ಷೇತರ ಅಭ್ಯರ್ಥಿಗಳ ರಾಜಕೀಯ ಭವಿಷ್ಯವು ಇವಿಎಂನಲ್ಲಿ ಭದ್ರವಾಗಿದ್ದು, ಮೇ 4ರಂದು ನಡೆಯುವ ಮತ ಎಣಿಕೆಯಲ್ಲಿ ವಿಜಯಲಕ್ಷಿ ಯಾರಿಗೆ ಒಲಿಯುವಳು ಎಂಬುದು ಅಂದೇ ನಿರ್ಧಾರವಾಗಲಿದೆ.

ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣದಲ್ಲಿ ನಿರೀಕ್ಷೆಯಂತೆ ಮತದಾನ ಹೆಚ್ಚಿನ ಪ್ರಮಾಣದಲ್ಲಿ ನಡೆದಿದೆ. ಎರಡೂ ಕಡೆ ಮತದಾರರು ಬೆಳಗ್ಗಿನಿಂದಲೇ ಮತಗಟ್ಟೆಗಳಿಗೆ ಆಗಮಿಸಿ ತಮ ಹಕ್ಕನ್ನು ಚಲಾಯಿಸಿದರು. 85 ವರ್ಷ ಮೇಲ್ಪಟ್ಟ ಹಿರಿಯರಿಗೆ ಮನೆಯಿಂದಲೇ ಮತದಾನ ಚಲಾಯಿಸಲು ಅವಕಾಶ ಕಲ್ಪಿಸಲಾಗಿತ್ತು. ಮತದಾನ ಆರಂಭವಾಗುತ್ತಿದ್ದಂತೆ ಸುಡುವ ಬಿಸಲನ್ನು ಲೆಕ್ಕಿಸದೆ ಮತದಾರರು ಮತಗಟ್ಟೆಗೆ ಬಂದು ಸರತಿಯಲ್ಲಿ ನಿಂತು ಮತ ಚಲಾಯಿಸಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಎಸ್‌‍.ಎಸ್‌‍.ಮಲ್ಲಿಕಾರ್ಜುನ್‌, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌, ಕಾಂಗ್ರೆಸ್‌‍ ಅಭ್ಯರ್ಥಿ ಸಮರ್ಥ.ಎಸ್‌‍.ಎಸ್‌‍ ಸೇರಿದಂತೆ ಕುಟುಂಬದ ಸದಸ್ಯರು ಮತಗಟ್ಟೆಗೆ ಬಂದು ಸಾಮಾನ್ಯರಂತೆ ಸರತಿಯಲ್ಲಿ ನಿಂತು ಮತ ಹಾಕಿದರು.
ಇತ್ತ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ ಕರಿಯಪ್ಪ ಹಾಗೂ ಅವರ ಪತ್ನಿ ಕೂಡ ಮತಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತ ಚಲಾಯಿಸಬೇಕೆಂದು ಮನವಿ ಮಾಡಿಕೊಂಡರು.

ಬಿಜೆಪಿ ಮುಖಂಡ ರಾಜನಹಳ್ಳಿ ಶಿವಕುಮಾರ್‌ ಮತಗಟ್ಟೆಯ ಪ್ರವೇಶದ್ವಾರಕ್ಕೆ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. ಹಳೆಯಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್‌ ನಂ.66ರಲ್ಲಿ ಪೂಜೆ ಸಲ್ಲಿಸಿದರು.

ಹಾಲುಮತ ಸಮುದಾಯದವರು ಪ್ರಪ್ರಥಮವಾಗಿ ಮತದಾನ ಮಾಡಿದರೆ ಕಣದಲ್ಲಿರುವ ಅಭ್ಯರ್ಥಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ಕುಟುಂಬ ಸಮೇತ ಪೂಜೆ ಸಲ್ಲಿಸಿದ್ದಾರೆ. ಇನ್ನು ಮತದಾನ ಆರಂಭವಾಗುತ್ತಿದ್ದಂತೆ ಹಳೆಪೇಟೆಯಲ್ಲಿರುವ ಮತಗಟ್ಟೆಯಲ್ಲಿ ತಾಂತ್ರಿಕದೋಷ ಉಂಟಾಗಿ ಇವಿಎಂ ಕೆಲಹೊತ್ತು ಕೈಕೊಟ್ಟ ಪರಿಣಾಮ ಮತದಾನ ಸ್ಥಗಿತಗೊಂಡಿತ್ತು. ತಕ್ಷಣವೇ ಸಿಬ್ಬಂದಿಗಳು ಇವಿಎಂನ್ನು ಸರಿಪಡಿಸಿ ಮತದಾನಕ್ಕೆ ಅವಕಾಶ ಕಲ್ಪಿಸಿದರು.

ಇಲ್ಲಿನ ಮತಗಟ್ಟೆ ಸಂಖ್ಯೆ 195ರಲ್ಲಿ ಮಾದರಿ ನೀತಿಸಂಹಿತೆ ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಪಕ್ಷವೊಂದರ ಮುಖಂಡರು ಮತ ಕೇಂದ್ರದ ಹೊರಗಡೆ ಮತ ಚಲಾಯಿಸಿ ಆಚೆ ಬರುತ್ತಿದ್ದವರಿಗೆ ಪಲಾವ್‌ ವಿತರಣೆಗೆ ವ್ಯವಸ್ಥೆ ಮಾಡಿದ್ದರು. ಇದಕ್ಕೆ ಎದುರಾಳಿ ಅಭ್ಯರ್ಥಿಗಳ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದರು.

ಬಾಗಲಕೋಟೆ
ಮಾಜಿ ಸಚಿವ ಎಚ್‌.ವೈ.ಮೇಟಿ ನಿಧನದಿಂದ ತೆರವಾಗಿರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಉತ್ತಮ ಮತದಾನವಾಗಿದೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಕುಟುಂಬ ಸಮೇತರಾಗಿ ಮತದಾನ ಮಾಡಿದರೆ, ಕಾಂಗ್ರೆಸ್‌‍ ಅಭ್ಯರ್ಥಿ ಉಮೇಶ್‌ ಮೇಟಿ ಕೂಡ ಕುಟುಂಬದವರೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಇಬ್ಬರೂ ಅಭ್ಯರ್ಥಿಗಳು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಬೂತ್‌ ನಂ.166ರಲ್ಲಿ ಕುಟುಂಬ ಸದಸ್ಯರೊಂದಿಗೆ ಬಂದು ಮತದಾನ ಮಾಡಿದರು.

ಸಮಾಧಿ ಸ್ಥಳಕ್ಕೆ ಭೇಟಿ ನೀಡಿ
ಕಾಂಗ್ರೆಸ್‌‍ ಅಭ್ಯರ್ಥಿ ಉಮೇಶ್‌ ಮೇಟಿ ಮತದಾನಕ್ಕೂ ಮುನ್ನ ತಮ ತಂದೆ ದಿ.ಎಚ್‌.ವೈ.ಮೇಟಿ ಅವರ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದರು. ತಿಮಾಪುರ ಗ್ರಾಮದ ಜಮೀನಿನಲ್ಲಿರುವ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಇನ್ನೂ ಈ ವೇಳೆ ಅಭಿಮಾನಿಯೊಬ್ಬರು ಉಮೇಶ್‌ ಮೇಟಿ ಬಳಿ ಕಾಂಗ್ರೆಸ್‌‍ ಪಕ್ಷದ ಶಾಲು ಕಟ್ಟಿದ ಟಗರನ್ನು ಕರೆತಂದು ಹಾರೈಸಿದರು.

ಮತದಾನದ ವೇಳೆ, ಮತದಾರರ ಪಟ್ಟಿಯಲ್ಲಿ ಮಗನ ಹೆಸರಿಗೆ ಮಾರ್ಕ್‌ ಮಾಡುವ ಬದಲು,ತಂದೆ ಹೆಸರಿಗೆ ಸಿಬ್ಬಂದಿ ಮಾರ್ಕ್‌ ಮಾಡಿದಾಗ ಸ್ಥಳದಲ್ಲಿ ಗೊಂದಲ ವಾಗ್ವಾದ ಉಂಟಾಗಿ, ಮತ್ತೆ ಸರಿಪಡಿಸಿದರು.

ಕೆಲವು ಮತಗಟ್ಟೆಗಳಲ್ಲಿ ಮತದಾರರಿಗೆ ಹಣ ಹಂಚಿಕೆ ಮಾಡಲಾಗಿದೆ ಎಂಬ ಆರೋಪೂ ಕೇಳಿಬಂದಿದೆ. ಮಹಿಳಾ ಮತದಾರರೊಬ್ಬರು ತಮಗೆ ರಾಜಕೀಯ ಪಕ್ಷದ ಏಜೆಂಟರು ನಿರ್ಧಿಷ್ಟ ವ್ಯಕ್ತಿಗೆ ಮತ ಹಾಕುವಂತೆ 500 ರೂ. ಕೊಟ್ಟಿದ್ದಾರೆಂದು ಆರೋಪಿಸಿದ್ದಾರೆ.

ಕಾಂಗ್ರೆಸ್‌‍ ಹಾಗೂ ಬಿಜೆಪಿ ನಡುವೆ ತೀವ್ರ ಹಣಾಹಣಿ ಇರುವ ಈ ಕ್ಷೇತ್ರದಲ್ಲಿ ಮತದಾರರು ಮತಗಟ್ಟೆಗೆ ಬಂದು ಬೆಳಗ್ಗಿನಿಂದಲೇ ತಮ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭತ್ವದ ಹಬ್ಬವನ್ನು ಸಂಭ್ರಮಿಸಿದರು. ಬೆಳಗ್ಗೆ 7 ಗಂಟೆಗೆ ಮತಗಟ್ಟೆಗಳು ತೆರೆಯುತ್ತಿದ್ದಂತೆ ಕ್ಷೇತ್ರದಾದ್ಯಂತ ಮತದಾರರು ತಮ ತಮ ಹಕ್ಕುಗಳನ್ನು ಚಲಾಯಿಸಿ ಬೇರೆಯವರಿಗೂ ಮತದಾನ ಮಾಡುವಂತೆ ಪ್ರೇರೇಪಿಸಿದರು.

ಮತದಾನ ಆರಂಭವಾಗುತ್ತಿದ್ದಂತೆ 12 ಗಂಟೆವರೆಗೆ ನಿರೀಕ್ಷೆಗೂ ಮೀರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿತ್ತು. ಬಿಸಿಲ ಝಳ ಹೆಚ್ಚಾದ ನಂತರ ಮತದಾನದಲ್ಲಿ ಕೊಂಚ ಇಳಿಮುಖ ಕಂಡುಬಂದಿತು. ಮಧ್ಯಾಹ್ನದ ಬಳಿಕ ಬಿಸಿಲಿನ ತಾಪ ಕಡಿಮೆಯಾದ್ದರಿಂದ ಮತ್ತೆ ಮತದಾನ ಚುರುಕುಗೊಂಡಿತು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಭಾರೀ ಬಿಗಿಭದ್ರತೆಯನ್ನು ಕೈಗೊಳ್ಳಲಾಯಿತು. ಮೇ 4ರಂದು ನಡೆಯಲಿರುವ ಮತ ಎಣಿಕೆಯತ್ತ ಎಲ್ಲರ ಚಿತ್ತ ನೆಟ್ಟಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌‍ನಿಂದ ಸಮರ್ಥ್‌ ಶಾಮನೂರು ಮಲ್ಲಿಕಾರ್ಜುನ್‌ ಮತ್ತು ಬಿಜೆಪಿಯಿಂದ ಶ್ರೀನಿವಾಸ್‌‍ ಟಿ. ದಾಸಕರಿಯಪ್ಪ ಸೇರಿದಂತೆ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದರೆ, ಅತ್ತ ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌‍ನ ಉಮೇಶ್‌ ಮೇಟಿ ಮತ್ತು ಬಿಜೆಪಿಯ ವೀರಣ್ಣ ಚರಂತಿಮಠ ಸೇರಿದಂತೆ ಒಟ್ಟು 20 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ ನಡೆಯುತ್ತಿದೆ.

RELATED ARTICLES

Latest News