ಮುಂಬೈ, ಜ.16- ದೇಶದ ಗಮನ ಸೆಳೆದ ಏಷ್ಯಾ ಖಂಡದ ಅತೀದೊಡ್ಡ ಶ್ರೀಮಂತ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೃಹನ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಮೊದಲ ಬಾರಿಗೆ ಅಧಿಕಾರ ಹಿಡಿದಿದ್ದು, 4 ದಶಕಗಳ ಬಾಳಾ ಠಾಕ್ರೆ ಅಧಿಪತ್ಯ ಕೊನೆಗೊಂಡಿದೆ.ಒಟ್ಟು 227 ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ (ಏಕನಾಥ್‌ಸಿಂಧೆ ಬಣ) ನೇತೃತ್ವದ ಮಹಾಯುತಿ ಮೈತ್ರಿಕೂಟ 130 ಸ್ಥಾನಗಳಲ್ಲಿ ಗೆದ್ದು ಮೊದಲ ಬಾರಿಗೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಒಟ್ಟು 227 ವಾರ್ಡ್‌ಗಳ ಪೈಕಿ ಬಿಜೆಪಿ ಮೈತ್ರಿಕೂಟ 130, ಶಿವಸೇನೆ ಮೈತ್ರಿಕೂಟ 72, ಕಾಂಗ್ರೆಸ್ 13, ಇತರರು 11 ವಾರ್ಡ್‌ಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಭಾರೀ ನಿರೀಕ್ಷೆ ಹುಟ್ಟಿಸಿದ್ದ ಉದ್ಧವ್ ಠಾಕ್ರೆ-ರಾಜ್ ಠಾಕ್ರೆ ಸಮಾಗಮ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಮರಾಠಿ ಅಸಿತೆ ಮುಂದಿಟ್ಟುಕೊಂಡು ಮತದಾರರನ್ನು ಸೆಳೆಯಲು ಮುಂದಾಗಿದ್ದ ಶಿವಸೇನೆ-ಎಂಎನ್‌ಎಸ್‌ಗೆ ಮತದಾರ ಸೊಪ್ಪು ಹಾಕಿಲ್ಲ.
ಉತ್ತರ ಭಾರತೀಯರು ಗುಜರಾತಿ, ಕನ್ನಡಿಗರು ಸೇರಿದಂತೆ ಬಹುತೇಕ ಎಲ್ಲಾ ವಲಸೆ ಮತದಾರರು ಬಿಜೆಪಿ ಕೈ ಹಿಡಿದಿರುವುದು ಸ್ಪಷ್ಟವಾಗಿದೆ.
ಶತಾಯಗಥಾಯ ಬೃಹನ್ ಮುಂಬೈ ಮೇಲೆ ಹಿಡಿತ ಸಾಧಿಸಲು ತಮ ಹಳೆಯ ವೈರುತ್ಯವನ್ನು ಮರೆತು ಎರಡು ದಶಕಗಳ ನಂತರ ಠಾಕ್ರೆ ಸಹೋದರರು ಒಂದಾಗಿದ್ದರು. ಆದರೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಏಕನಾಥ ಸಿಂಧೆ ಹೂಡಿದ ರಣತಂತ್ರದ ಮುಂದೆ ಎಲ್ಲವೂ ತಲೆಕೆಳಗಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಸೋತು ಭಾರೀ ಹಿನ್ನಡೆ ಕಂಡಿದ್ದ ಕಾಂಗ್ರೆಸ್‌ಗೆ ಇಲ್ಲಿಯೂ ಕೂಡ ತೀವ್ರ ಹಿನ್ನಡೆಯಾಗಿದೆ. ಶಿವಸೇನೆಯಿಂದ ಹೊರಬಂದು ಏಕಾಂಗಿಯಾಗಿ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ಕೇವಲ 13 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ.
