ನವದೆಹಲಿ,ಮೇ 13- ಪ್ರಶ್ನೆ ಪತ್ರಿಕೆ ಸೋರಿಕೆ ಕಾರಣ, ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗೆ ಕಳೆದ ಮೇ 3 ರಂದು ನಡೆದಿದ್ದ ನೀಟ್- ಯುಜಿ ಮರುಪರೀಕ್ಷೆಯ ದಿನಾಂಕವನ್ನು ಇನ್ನೊಂದು ವಾರದೊಳಗೆ ಘೋಷಿಸುವುದಾಗಿ ನ್ಯಾಷನಲ್ ಟೆಸ್ಟ್ ಎಜಿನ್ಸಿ(ಎನ್‌ಟಿಎ) ಹೇಳಿದೆ.
ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ಪರೀಕ್ಷೆಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಎನ್‌ಟಿಎ ತಿಳಿಸಿದೆ. ಮತ್ತೊದೆಡೆ ನೀಟ್ ಮರು ಪರೀಕ್ಷೆ ಯಾವಾಗ ಎನ್ನುವ ಆತಂಕದಲ್ಲಿದ್ದ ವಿದ್ಯಾರ್ಥಿಗಳಿಗೆ ಇನ್ನು 7 ರಿಂದ 10 ದಿನಗಳಲ್ಲಿ ನೀಟ್ ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿ ಪ್ರಕಟವಾಗಲಿದೆ ಎಂದು ಎನ್‌ಟಿಎ ಡೈರೆಕ್ಟರ್ ಜನರಲ್ ಅಭಿಷೇಕ್ ಸಿಂಗ್ ಹೇಳಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ನೀಟ್ ಮರು ಪರೀಕ್ಷೆ ವೇಳಾಪಟ್ಟಿ ಬಿಡುಗಡೆ ಆಗಲಿದ್ದು, ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡೋದಾಗಿ ತಿಳಿಸಿದ್ದಾರೆ.ಕಳೆದ ಮೇ 3, 2026 ರಂದು ಭಾನುವಾರ ದೇಶಾದ್ಯಂತ ನೀಟ್ ಪರೀಕ್ಷೆ ನಡೆದಿತ್ತು. ಪತ್ರಿಕೆಯಲ್ಲಿದ್ದ ಸುಮಾರು 100ಕ್ಕೂ ಹೆಚ್ಚು ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರದ ಪ್ರಶ್ನೆಗಳು ಅಸಲಿ ಪ್ರಶ್ನೆ ಪತ್ರಿಕೆಗೆ ಹೋಲಿಕೆಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ರಾಜಸ್ಥಾನದಲ್ಲಿ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ವರದಿಗಳು ಹರಿದಾಡಿದ್ದವು. ಪ್ರಶ್ನೆ ಪತ್ರಿಕೆ ಲೀಕ್ ಹಿಂದೆ ಕೋಚಿಂಗ್ ಸೆಂಟರ್‌ಗಳ ಕೈವಾಡವಿದೆ ಎನ್ನುವ ಆರೋಪ ಕೇಳಿ ಬಂದಿದೆ. ಎಷ್ಟು ರಾಜ್ಯಗಳಲ್ಲಿ ಲೀಕ್ ಜಾಲ ಹಬ್ಬಿದೆ ಎನ್ನುವುದರ ಬಗ್ಗೆ ಎನ್‌ಟಿಎ ಯಾವುದೇ ಮಾಹಿತಿ ನೀಡಿಲ್ಲ.
ವೈದ್ಯರ ಪುತ್ರನ ಬಂಧನ :
ನೀಟ್ ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬ್ಯಾಚುಲರ್ ಆಫ್ ಆಯುರ್ವೇದ ಮೆಡಿಸಿನ್ ಅಂಡ್ ಸರ್ಜರಿ ವಿದ್ಯಾರ್ಥಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ವಿದ್ಯಾರ್ಥಿಯನ್ನ ಶುಭಂ ಖೈರ್ನರ್ (30) ಎಂದು ಗುರುತಿಸಲಾಗಿದೆ. ಈತ ಊಹೆ ಪ್ರಶ್ನೆಪತ್ರಿಕೆಯನ್ನು ಪುಣೆ ಮೂಲದ ಶಂಕಿತನಿಂದ 10 ಲಕ್ಷ ರೂ.ಗೆ ಖರೀದಿಸಿ, ಹರಿಯಾಣದ ಮೂಲದ ವ್ಯಕ್ತಿಗೆ 15 ಲಕ್ಷ ರೂ.ಗೆ ಮಾರಾಟ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ವಹಿಸಿಕೊಂಡಿರುವ ಸಿಬಿಐ 4 ವಿಶೇಷ ತಂಡ ರಚಿಸಿ ಕಾರ್ಯಾಚರಣೆಗೆ ಇಳಿದಿತ್ತು. ಈ ವೇಳೆ ನಾಸಿಕ್ ಅಪರಾಧ ವಿಭಾಗವು ಬಂಧಿಸಿದ್ದ ವಿದ್ಯಾರ್ಥಿಯನ್ನು ಸಿಬಿಐ ತನ್ನ ಸುಪರ್ದಿಗೆ ಪಡೆದಿದೆ.
ನೀಟ್ ಪ್ರಕರಣದ ತನಿಖೆ ಮುಂದುವರಿಯುತ್ತಿದ್ದಂತೆ ಇನ್ನಷ್ಟು ರಹಸ್ಯಗಳು ಬಯಲಾಗುತ್ತಿವೆ. ಮೊದಲಿಗೆ ನಾಸಿಕ್ ಮುದ್ರಣಾಲಯದಿಂದ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಅನುಮಾನ ಮೂಡಿದ್ದವು. ಪೊಲೀಸ್ ಮೂಲಗಳು ಪರೀಕ್ಷಾ ಪ್ರಶ್ನೆಪತ್ರಿಕೆಯನ್ನು ಅಲ್ಲಿ ಮುದ್ರಿಸಲಾಗಿಲ್ಲ ಎಂದು ಹೇಳುತ್ತಿವೆ.
ಶುಭಂ ತಂದೆ ಮತ್ತು ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಮಧುಕರ್ ಖೈರ್ನಾರ್ ಅವರು ತಮ ಮಗನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ, ನನ್ನ ಮಗ ನಿರಪರಾಧಿ ಎಂದು ಪ್ರತಿಪಾದಿಸಿದ್ದಾರೆ.
ಮೂಲ ಪತ್ತೆ :
ನೀಟ್ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ತನಿಖೆ ಕೈಗೆತ್ತಿಕೊಂಡ ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಒಜಿ) ಸೋರಿಕೆಯ ಮೂಲವನ್ನು ಪತ್ತೆ ಮಾಡಿದೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿ ಸೋರಿಕೆಯಾದ ಪತ್ರಿಕೆ ರಾಜಸ್ಥಾನದ ಸಿಕರ್ ತಲುಪಿದೆ. ಇಲ್ಲಿಂದ ಹರಿಯಾಣ, ಕೇರಳದ ಮೂಲಕ ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳಿಗೆ ವಾಟ್‌್ಸಆಪ್ ಗ್ರೂಪ್ ಮೂಲಕ ಹರಿಯಬಿಡಲಾಗಿದೆ. ಪಾಸ್‌ವರ್ಡ್ ರಕ್ಷಣೆಯಲ್ಲಿ ಪಿಡಿಎಫ್ ಮಾದರಿಯ ದಾಖಲೆಯನ್ನು ಹಂಚಿಕೊಳ್ಳಲಾಗಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಊಹೆ ಮೇಲೆ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗಿದೆ. 410 ಪ್ರಶ್ನೆ ರೂಪಿಸಿ, ಪ್ರಶ್ನೆಗೆ ಸೂಕ್ತ ಉತ್ತರ ರೂಪಿಸಿ, ಕೈ ಬರಹದಲ್ಲಿ ಬರೆದ ದಾಖಲೆಯಲ್ಲಿ ಪಿಡಿಎಫ್ ಸ್ವರೂಪದಲ್ಲಿ ಹಣ ನೀಡಿದ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲಾಗಿದೆ. ಜೀವಶಾಸ್ತ್ರ ಹಾಗೂ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆಯ 130ಕ್ಕೂ ಹೆಚ್ಚು ಪ್ರಶ್ನೆಗಳು ಸೋರಿಕೆಯಾದ ಪೇಪರ್ ಜತೆ ಹೋಲಿಕೆಯಾಗಿವೆ.
ಕೇರಳದಲ್ಲಿ ಮೆಡಿಕಲ್ ಶಿಕ್ಷಣ ಪಡೆಯುತ್ತಿದ್ದ ರಾಜಸ್ಥಾನ ಮೂಲದ ವಿದ್ಯಾರ್ಥಿ ಮೂಲಕ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲಾಗಿದೆ. ಅಕ್ರಮದಲ್ಲಿ ಹರಿಯಾಣದ ಗುರುಗ್ರಾಮದಲ್ಲಿರುವ ವೈದ್ಯ, ರಾಜಸ್ಥಾನದ ಸಿಕರ್‌ನಲ್ಲಿರುವ ಪಿಜಿ ಕೇಂದ್ರ ಭಾಗಿಯಾಗಿರುವುದು ತನಿಖೆಯಲ್ಲಿ ಕಂಡು ಬಂದಿದೆ.
ಮೇ 3 ರಂದು ನಡೆದ ನೀಟ್ ಪ್ರವೇಶ ಪರೀಕ್ಷೆಗೂ ಮೊದಲು ಪ್ರಶ್ನೆಪತ್ರಿಕೆಯನ್ನು ವಾಟ್‌್ಸಆಪ್, ಟೆಲಿಗ್ರಾಂ ಗ್ರೂಪ್ ಮೂಲಕ ಹರಿಯ ಬಿಡಲಾಗಿದೆ. ವಾಟ್ ಆಪ್ ಚಾಟ್‌ಗಳನ್ನು ಡಿಕೋಡ್ ಮಾಡಿರುವ ತನಿಖಾಧಿಕಾರಿಗಳು, ಪ್ರಶ್ನೆ ಪತ್ರಿಕೆಯನ್ನು ಕನಿಷ್ಠ 30 ಸಾವಿರ ರೂ. ಗಳಿಂದ 28 ಲಕ್ಷರೂ.ಗೆ ಮಾರಾಟ ಮಾಡಲಾಗಿದೆ. ಅಕ್ರಮದ ಹಿಂದೆ ಸಂಘಟಿತ ಅಪರಾಧಿಗಳ ಗುಂಪು ಕೆಲಸ ಮಾಡಿರುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
