Wednesday, May 13, 2026
Homeರಾಜ್ಯಬೆಂಗಾವಲು ಪಡೆ ವಾಹನಗಳ ಸಂಖ್ಯೆಯನ್ನು ಶೇ. 50 ರಷ್ಟು ಕಡಿತಗೊಳಿಸಿದ ಪ್ರಧಾನಿ ಮೋದಿ

ಬೆಂಗಾವಲು ಪಡೆ ವಾಹನಗಳ ಸಂಖ್ಯೆಯನ್ನು ಶೇ. 50 ರಷ್ಟು ಕಡಿತಗೊಳಿಸಿದ ಪ್ರಧಾನಿ ಮೋದಿ

Cut Convoy By 50%, Add More EVs: PM Modi's Austerity Push

ನವದೆಹಲಿ, ಮೇ 13 – ಪ್ರಧಾನಿ ಮೋದಿ ಅವರು ತಾವು ಹೇಳಿದಂತೆ ನಡೆದುಕೊಳ್ಳುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿ ತಮ ಬೆಂಗಾವಲು ಪಡೆಯನ್ನು ಅರ್ಧದಷ್ಟು ಕಡಿಮೆ ಮಾಡಿದ್ದಾರೆ. ಎಸ್‌‍ಪಿಜಿಗೆ ಬೆಂಗಾವಲು ಪಡೆಯಲಿರುವ ವಾಹನಗಳ ಸಂಖ್ಯೆಯನ್ನು ಶೇ. 50 ರಷ್ಟು ಕಡಿಮೆ ಮಾಡಲು ವಿಶೇಷ ಸೂಚನೆಗಳನ್ನು ನೀಡಿದ್ದಾರೆ.

ಇತ್ತೀಚೆಗೆ ವಡೋದರಾ ಮತ್ತು ಗುವಾಹಟಿ ಭೇಟಿಗಳ ವೇಳೆ ಪ್ರಧಾನಿಯವರ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿತ್ತು. ಭದ್ರತಾ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ, ಅಮೆರಿಕಾ-ಇರಾನ್‌ ಸಂಘರ್ಷದಿಂದ ಉಂಟಾದ ಆರ್ಥಿಕ ಅನಿಶ್ಚಿತತೆಯ ಸಂದರ್ಭದಲ್ಲಿ ಜವಾಬ್ದಾರಿಯುತವಾಗಿ ಕಡಿಮೆ ಇಂಧನ ಬಳಕೆಗೆ ಪ್ರೋತ್ಸಾಹ ನೀಡುವುದು ಮತ್ತು ತಾವು ನುಡಿದಂತೆ ದೇಶದ ನಾಗರಿಕರ ಮುಂದೆ ಮಾದರಿಯಾಗಿ ನಡೆದುಕೊಳ್ಳುವುದು ಪ್ರಧಾನಿ ಮೋದಿಯವರ ಉದ್ದೇಶವಾಗಿದೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದ ಎಲ್ಲಾ ಮುಖ್ಯಮಂತ್ರಿಗಳಿಗೆ ಪ್ರಧಾನ ಮಂತ್ರಿಗಳ ಕಚೇರಿ ಪ್ರಧಾನಿ ಮೋದಿ ಅವರ ಭಾಷಣದ ಪ್ರತಿಗಳನ್ನು ಹಂಚಿಕೆ ಮಾಡಿದೆ. ಆ ದಾಖಲೆಯಲ್ಲಿ ಪ್ರಸ್ತುತ ಸಂಕಷ್ಟದ ಸಂದರ್ಭ ಮಿತವ್ಯಯಕ್ಕೆ ಕರೆ ಹಾಗೂ ಅನುಸರಿಸಬಹುದಾದ ಕಾರ್ಯಯೋಜನೆ ಸೇರಿಸಲಾಗಿತ್ತು ಎಂದು ತಿಳಿದುಬಂದಿದೆ.

ಕೇಂದ್ರ ಸರ್ಕಾರದ ಕಾರ್ಯಯೋಜನೆಯಲ್ಲಿ ದೇಶದ ನಾಗರಿಕರು ಎಲೆಕ್ಟ್ರಿಕ್‌ ವಾಹನಗಳ ಹೆಚ್ಚುವರಿ ಬಳಕೆ, ಇಂಧನ ಬಳಕೆ ಕಡಿತ ಹಾಗೂ ಅನಗತ್ಯ ಪ್ರಯಾಣವನ್ನು ತಗ್ಗಿಸಲು ಆನ್‌ಲೈನ್‌ ಮೂಲಕ ಸಭೆಗಳನ್ನು ಹೆಚ್ಚೆಚ್ಚು ನಡೆಸುವಂತೆ ಸೂಚಿಸಲಾಗಿದೆ.

ಪ್ರಧಾನಿಯವರ ಭದ್ರತೆಯನ್ನು ನೋಡಿಕೊಳ್ಳುವ ವಿಶೇಷ ಭದ್ರತಾ ಗುಂಪಿಗೆ(ಎಸ್‌‍ಪಿಜಿ) ಬೆಂಗಾವಲು ವಾಹನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬಳಕೆಯನ್ನು ಹೆಚ್ಚಿಸಲು ಕೂಡ ಕೇಂದ್ರ ಸರ್ಕಾರ ಸೂಚಿಸಿದೆ. ಆದರೆ ಇದಕ್ಕಾಗಿ ಹೊಸ ವಾಹನಗಳನ್ನು ಖರೀದಿಸುವ ಬದಲು ಈಗಿರುವ ಸಂಪನೂಲಗಳನ್ನು ಸಮರ್ಪಕವಾಗಿ ಬಳಸಬೇಕು ಎಂದು ಪ್ರಧಾನ ಮಂತ್ರಿ ಆದೇಶ ನೀಡಿದ್ದಾರೆ.

ಎಸ್‌‍ಪಿಜಿ ಪ್ರಧಾನಮಂತ್ರಿಯವರ ನಿರ್ದೇಶನಗಳನ್ನು ಜಾರಿಗೆ ತರಲು ಪ್ರಾರಂಭಿಸಿದ್ದು, ಯಾವುದೇ ಭದ್ರತಾ ನಿಯಮಗಳನ್ನು ಸಡಿಲಿಸದಂತೆ ನೋಡಿಕೊಳ್ಳುತ್ತಿದೆ. ದೆಹಲಿಯ ಹೊರಗಿನ ಇತ್ತೀಚಿನ ಪ್ರವಾಸಗಳಲ್ಲಿ ಪ್ರಧಾನಿಯವರ ಬೆಂಗಾವಲು ಪಡೆಯ ಗಾತ್ರ ಕಡಿಮೆಯಾಗಿದೆ ಮತ್ತು ಬ್ಲೂ ಬುಕ್‌ನಲ್ಲಿ ವಿವರಿಸಿರುವ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಎಸ್‌‍ಪಿಜಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿಯವರ ವೈಯಕ್ತಿಕ ಉಪಕ್ರಮವು ಇತರ ಸರ್ಕಾರಿ ಇಲಾಖೆಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಮಾಹಿತಿಯುಕ್ತ ವ್ಯಕ್ತಿಗಳು ಹೇಳುತ್ತಾರೆ. ವಾಸ್ತವವಾಗಿ, ಸಚಿವಾಲಯಗಳು ಮತ್ತು ಇಲಾಖೆಗಳು ಮುಂಬರುವ ದಿನಗಳಲ್ಲಿ ವೆಚ್ಚವನ್ನು ಕಡಿತಗೊಳಿಸಲು ತಯಾರಿ ನಡೆಸುತ್ತಿರುವ ಸೂಚನೆಗಳಿವೆ. ಇದರಲ್ಲಿ ನೌಕರರು ಮೆಟ್ರೋವನ್ನು ಹೆಚ್ಚಾಗಿ ಬಳಸಲು ಪ್ರೋತ್ಸಾಹಿಸುವುದು, ಕಾರ್‌ಪೂಲಿಂಗ್‌ ಅಳವಡಿಸಿಕೊಳ್ಳುವುದು ಮತ್ತು ದೊಡ್ಡ ಭೋಜನಗಳನ್ನು ತಪ್ಪಿಸುವುದು ಸೇರಿವೆ.

ಎಲ್ಲಾ ಇಲಾಖೆಗಳು ಇಂಧನ ಬಳಕೆಯನ್ನು ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ಗುರುತಿಸುತ್ತಿವೆ. ಪ್ರಧಾನಿಯವರ ಸಂದೇಶವು ನಮಗೆ ಸೇರಿದಂತೆ ಎಲ್ಲರಿಗೂ ಆಗಿದೆ. ನಾವು ಸಿಬ್ಬಂದಿ ಇಲಾಖೆಯಿಂದ ಮಾರ್ಗಸೂಚಿಗಳಿಗಾಗಿ ಕಾಯುತ್ತಿದ್ದೇವೆ, ಆದರೆ ಪ್ರತಿಯೊಂದು ಇಲಾಖೆಯು ತನ್ನದೇ ಆದ ಯೋಜನೆಯನ್ನು ರೂಪಿಸಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಧಾನಿ ಕಚೇರಿಗಷ್ಟೇ ಸಿಮಿತವಲ್ಲ :
ಈ ಕ್ರಮಗಳು ಕೇವಲ ಪ್ರಧಾನಿ ಕಚೇರಿಗೆ ಸೀಮಿತವಾಗಿಲ್ಲ. ಕೇಂದ್ರ ಸಚಿವರು ಮತ್ತು ಎನ್‌ಡಿಎ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಇದೇ ರೀತಿಯ ಸೂಚನೆಯನ್ನು ಪ್ರಧಾನಿ ನೀಡಿದ್ದಾರೆ. ಇಂಧನ ವಾಹನಗಳ ಬದಲಿಗೆ ಎಲೆಕ್ಟ್ರಿಕ್‌ ವಾಹನಗಳ ಬಳಕೆಗೆ ಒತ್ತು ನೀಡುವಂತೆ ಮತ್ತು ಬೆಂಗಾವಲು ಪಡೆಯನ್ನು ಆದಷ್ಟು ಕಡಿಮೆ ಮಾಡುವಂತೆ ಅವರು ಕರೆ ನೀಡಿದ್ದಾರೆ. ಇದು ಇಂಧನ ಉಳಿತಾಯಕ್ಕೆ ರಾಷ್ಟ್ರವ್ಯಾಪಿ ಚಳುವಳಿಗೆ ನಾಂದಿ ಹಾಡುವ ನಿರೀಕ್ಷೆಯಿದೆ.
ಈ ಮಿತವ್ಯಯ ಕ್ರಮದ ಪ್ರಭಾವ ಈಗಾಗಲೇ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಕಾಣಿಸಿಕೊಳ್ಳತೊಡಗಿದೆ. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ರಾಜಸ್ಥಾನ ಮುಖ್ಯಮಂತ್ರಿ ಭಜನ್‌ ಲಾಲ್‌ ಶರ್ಮ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌ ಸೇರಿದಂತೆ ಹಲವು ಹಿರಿಯ ನಾಯಕರು ತಮ ಅಧಿಕೃತ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸಲು ನಿರ್ಧರಿಸಿದ್ದಾರೆ.

RELATED ARTICLES

Latest News