ನವದೆಹಲಿ,ಅ.12- ಭಾರತದಲ್ಲಿ ಬಾಂಗ್ಲಾದೇಶ-ನೇಪಾಳ ಮಾದರಿಯ ದಂಗೆ ಹಾಗೂ ಅಶಾಂತಿಯ ವಾತಾವರಣ ಉಂಟು ಮಾಡಲು ವಿದೇಶಿ ಶಕ್ತಿಗಳು ನಿಧಿ ಹರಿಸಿ ಪ್ರಯತ್ನಿಸುತ್ತಿವೆ ಎಂದು ಹಿರಿಯ ವಕೀಲ ಹರೀಶ್ ಸಾಳ್ವೆ ಆರೋಪಿಸಿದ್ದಾರೆ.
ಭಾರತದಲ್ಲಿ ಈಗ ವಿದೇಶಿ ಶಕ್ತಿಗಳ ಬೆಂಬಲಿತ ಕ್ಷೋಭೆ ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ ಎಂಬ ಸ್ಫೋಟಕ ಸತ್ಯವನ್ನು ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ಬಿಚ್ಚಿಟ್ಟಿದ್ದಾರೆ. ವಿದೇಶಿ ಶಕ್ತಿಗಳು ಹಣ ನೀಡಿ ಭಾರತವನ್ನು ಅಸ್ಥಿರಗೊಳಿಸಿ ಅರಾಜಕತೆ ಉಂಟು ಮಾಡಲು ಪ್ರತಿಭಟನೆಗಳಿಗೆ ಕುಮಕ್ಕು ನೀಡುತ್ತಿವೆ ಎಂದು ಸಾಳ್ವೆ ಹೇಳಿದ್ದಾರೆ.
ಭಾರತದ ಏಳಿಗೆಯನ್ನು ಅಮೆರಿಕದಂತಹ ಪಾಶ್ಚಿಮಾತ್ಯ ರಾಷ್ಟ್ರಗಳು ಸಹಿಸುತ್ತಿಲ್ಲ. ಭಾರತದಲ್ಲಿ ಪ್ರಾದೇಶಿಕ ಆಡಳಿತ ಬದಲಾವಣೆ ಮಾಡಿಸುವ ನಿಟ್ಟಿನಲ್ಲಿ ಹೊರರಾಷ್ಟ್ರಗಳು ಸಂಚು ಹೂಡಿದ್ದು ಇದನ್ನು ಕಡೆಗಣಿಸುವಂತಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ಇದನ್ನು ಪುಷ್ಟೀಕರಿಸುವಂತೆ ಇತ್ತೀಚೆಗೆ ದೆಹಲಿಯಲ್ಲಿ ಪ್ರತಿಭಟನೆಗಳು ಮತ್ತು ಗಲಭೆಗಳು ನಡೆದಿವೆ.
ಎಸ್‌ಐಆರ್ ವಿರೋಧಿಸಿ ನಡೆದ ಗಲಭೆಗಳು ದೇಶದಲ್ಲಿ ಸಂಕ್ಷೋಭೆಯ ವಾತಾವರಣ ಸೃಷ್ಟಿಸುವ ವಿದೇಶೀ ಶಕ್ತಿಗಳ ಹುನ್ನಾರವನ್ನು ಸಾಬೀತುಪಡಿಸುತ್ತವೆ.ಪ್ರತಿಭಟನೆಗಳನ್ನು ನಡೆಸುವುದು ತಪ್ಪಲ್ಲ. ಆದರೆ ಅವು ಕಾನೂನಾತಕವಾಗಿರಬೇಕು. ಬಾಹ್ಯ ಶಕ್ತಿಗಳು ಭಾರತದ ಆರ್ಥಿಕತೆಯನ್ನೂ ಬುಡಮೇಲುಗೊಳಿಸಲು ಮುಂದಾಗಿದ್ದು, ಇಂಥ ಗಲಭೆಗಳಿಗೆ ಪ್ರಚೋದನೆ ನೀಡಲಾರಂಭಿಸಿವೆ ಎಂದು ಹಲವಾರು ನಾಯಕರು ಎಚ್ಚರಿಸಿದ್ದಾರೆ.
