ನವದೆಹಲಿ, ಅ.13- ಅಧಿಕಾರ ಯಾರ ಬಳಿ ಇದೆ ಎಂಬುದಕ್ಕಿಂತ ಜನರ ಒಳಿತಿಗೆ ಅದನ್ನು ಹೇಗೆ ಬಳಸಲಾಗುತ್ತಿದೆ ಎನ್ನುವುದು ಮುಖ್ಯ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾರ್ಮಿಕವಾಗಿ ಮಾತನಾಡಿದ್ದಾರೆ. ಬ್ಲೂಮ್‌ಬರ್ಗ್ ನ್ಯೂ ಎಕಾನಮಿ ಫೋರಂ ಅನ್ನು ಉದ್ದೇಶಿಸಿ ಮಾತನಾಡಿದ ಅವರು, ತಂತ್ರಜ್ಞಾನ, ದತ್ತಾಂಶ, ಜ್ಞಾನ ಮತ್ತು ನಾವೀನ್ಯತೆಗಳು ಭಾರತದ ಶಕ್ತಿಯ ಮೂಲಗಳಾಗಿ ಹೊರಹೊಮಿವೆ ಎಂದು ಹೇಳಿದರು.
ಲಕ್ಷಾಂತರ ಜನರಿಗೆ ಅವಕಾಶಗಳನ್ನು ಸೃಷ್ಟಿಸಲು ಇವುಗಳನ್ನು ಬಳಸುವ ಅಗತ್ಯವನ್ನು ಅವರು ಒತ್ತಿಹೇಳಿ ದರು.ತಾಂತ್ರಿಕ ಪ್ರಗತಿಯ ಪ್ರಯೋಜನ ಗಳು ಸಮಾಜದ ಹೆಚ್ಚಿನ ವರ್ಗಗಳಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದ ಪ್ರಧಾನಿ, ಅಧಿಕಾರವು ಕೆಲವರ ಕೈಯಲ್ಲಿ ಕೇಂದ್ರೀಕೃತವಾಗುವ ಬದಲು ಜನರನ್ನು ಸಬಲೀಕರಣಗೊಳಿಸಲು ಅದನ್ನು ಹೇಗೆ ಬಳಸಬಹುದು ಎಂಬುದರ ಮೇಲೆ ಗಮನ ಹರಿಸಬೇಕು ಎಂದು ಹೇಳಿದರು.
ಸರಿಯಾದ ಪ್ರಶ್ನೆಯೆಂದರೆ:
ಈ ಶಕ್ತಿಯನ್ನು ಹೇಗೆ ಬಳಸಲಾಗುತ್ತಿದೆ? ತಂತ್ರಜ್ಞಾನವು ಕೇವಲ ಕೆಲವರಿಗೆ ಮಾತ್ರ ಪ್ರಯೋಜನಕಾರಿಯಾಗಲಿದೆಯೇ ಅಥವಾ ಕೋಟ್ಯಂತರ ಜನರಿಗೆ ಅವಕಾಶಗಳನ್ನು ಸೃಷ್ಟಿಸಲಿದೆಯೇ? ಜ್ಞಾನವು ಕೆಲವರ ಶಕ್ತಿಯಾಗಿ ಉಳಿಯಲಿದೆಯೇ ಅಥವಾ ಎಲ್ಲರನ್ನೂ ಸಬಲೀಕರಣಗೊಳಿಸಲಿದೆಯೇ? ಎಂದು ಅವರು ಪ್ರಶ್ನಿಸಿದರು.
ಈ ವಿಧಾನಕ್ಕೆ ಚಿಂತನೆಯಲ್ಲಿ ಬದಲಾವಣೆಯ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದರು; ಇದರಲ್ಲಿ ನಿಯಂತ್ರಣಕ್ಕಿಂತ ಸಬಲೀಕರಣಕ್ಕೆ, ಸ್ಪರ್ಧೆಗಿಂತ ಸಹಕಾರಕ್ಕೆ ಮತ್ತು ವೈಯಕ್ತಿಕ ಯಶಸ್ಸಿಗಿಂತ ಇತರರು ಯಶಸ್ವಿಯಾಗಲು ಸಹಾಯ ಮಾಡುವುದಕ್ಕೆ ಆದ್ಯತೆ ನೀಡಲಾಗುತ್ತದೆ.ಇದು ಹೊಸ ಚಿಂತನೆಗೆ ನಾಂದಿ ಹಾಡುತ್ತದೆ – ಸಬಲೀಕರಣದ ಶಕ್ತಿ. ನಿಯಂತ್ರಿಸುವ ಶಕ್ತಿಗಿಂತ, ಸಬಲಗೊಳಿಸುವ ಶಕ್ತಿ. ಸ್ಪರ್ಧಿಸುವ ಶಕ್ತಿಗಿಂತ, ಸಹಕರಿಸುವ ಶಕ್ತಿ. ಯಶಸ್ವಿಯಾಗುವ ಶಕ್ತಿಗಿಂತ, ಇತರರು ಯಶಸ್ವಿಯಾಗಲು ಸಹಾಯ ಮಾಡುವ ಶಕ್ತಿ, ಎಂದು ಅವರು ಹೇಳಿದರು.
ಜ್ಞಾನ, ಹಣ ಮತ್ತು ಅಧಿಕಾರವನ್ನು ವಿಶಾಲ ಉದ್ದೇಶಕ್ಕಾಗಿ ಬಳಸುವ ಕಲ್ಪನೆಯು ಭಾರತಕ್ಕೆ ಹೊಸದೇನಲ್ಲ ಜ್ಞಾನ, ಸಂಪತ್ತು ಮತ್ತು ಅಧಿಕಾರವನ್ನು ಹೊಂದಿರುವವರು ಅದನ್ನು ಹೇಗೆ ಬಳಸುತ್ತಾರೆ ಎಂಬುದು ನಿರ್ಣಾಯಕ. ಅಧಿಕಾರದ ನಿಜವಾದ ಮೌಲ್ಯವು ಅದರ ಉದ್ದೇಶದಲ್ಲಿದೆ ಮತ್ತು ಇಂದಿನ ಕಾಲದಲ್ಲಿ ಈ ತತ್ವವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ… ನಮ್ಮ ಸಾವಿರಾರು ವರ್ಷಗಳ ಸಂಪ್ರದಾಯವು ನಮಗೆ ಇದನ್ನು ಕಲಿಸಿದೆ ಮತ್ತು ಭಾರತದಲ್ಲಿ ನಮ್ಮ ಆಡಳಿತ ಹಾಗೂ ಕೆಲಸದ ಸಂಸ್ಕೃತಿಯಲ್ಲಿ ಇದರ ಅನ್ವಯವನ್ನು ನಾವು ತೋರಿಸಿಕೊಟ್ಟಿದ್ದೇವೆ ಎಂದರು.
ಇತರ ದೇಶಗಳು ತಮ್ಮ ಅಗತ್ಯಗಳಿಗೆ ಅನುಗುಣವಾದ ಡಿಜಿಟಲ್ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವ ನಿಟ್ಟಿನಲ್ಲಿ, ಭಾರತವು ತನ್ನ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕುರಿತ ಅನುಭವವನ್ನು ಆ ದೇಶಗಳೊಂದಿಗೆ ಹಂಚಿಕೊಳ್ಳುತ್ತಿದೆ ಎಂದೂ ಪ್ರಧಾನಿ ಹೇಳಿದರು. ನಾವು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಕ್ಕೆ ಸಂಬಂಧಿಸಿದ ನಮ್ಮ ಅನುಭವವನ್ನು ಇತರ ದೇಶಗಳೊಂದಿಗೆ ಹಂಚಿಕೊಳ್ಳುತ್ತಿದ್ದೇವೆ, ಇದರಿಂದ ಅವರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ತಮ್ಮದೇ ಆದ ಡಿಜಿಟಲ್ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು, ಎಂದು ಪ್ರಧಾನಿ ಮೋದಿ ಹೇಳಿದರು.
ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಭಾರತದ ಡಿಜಿಟಲ್ ಉಪಕ್ರಮಗಳನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ದೇಶವು ಕೋವಿನ್ ವೇದಿಕೆಯನ್ನು ಮುಕ್ತ-ಮೂಲ ವ್ಯವಸ್ಥೆಯಾಗಿ ಅಭಿವೃದ್ಧಿಪಡಿಸಿದೆ ಎಂದು ಹೇಳಿದರು. ಭಾರತದ ಸಾಮರ್ಥ್ಯಗಳು ಇತರ ದೇಶಗಳಿಗೂ ಅವಕಾಶಗಳನ್ನು ಸೃಷ್ಟಿಸಲು ನೆರವಾಗಬೇಕು ಎಂದು ಅವರು ಪ್ರತಿಪಾದಿಸಿದರು. ಕೋವಿಡ್-19 ಸಂದರ್ಭದಲ್ಲಿ, ನಾವು ಕೋವಿನ್ ವೇದಿಕೆಯನ್ನು ಸೃಷ್ಟಿಸಿದೆವು; ಇದು ಮುಕ್ತ-ಮೂಲ ವ್ಯವಸ್ಥೆಯಾಗಿತ್ತು.
ಭಾರತದ ಸಾಮರ್ಥ್ಯಗಳು ಇತರ ದೇಶಗಳಿಗೂ ಹೊಸ ಸಾಧ್ಯತೆಗಳ ಬಾಗಿಲು ತೆರೆಯುವಂತಾಗಬೇಕು ಎಂಬುದು ನಮ್ಮ ನಿರಂತರ ಪ್ರಯತ್ನವಾಗಿದೆ. ಸರಳವಾಗಿ ಹೇಳುವುದಾದರೆ, ನಮ್ಮ ಸಾಮರ್ಥ್ಯಗಳು ಮಾನವಕುಲವನ್ನು ಸಬಲೀಕರಣಗೊಳಿಸಬೇಕು, ಎಂದು ಅವರು ಹೇಳಿದರು.
ನಾವೀನ್ಯತೆಯ ವ್ಯಾಪಕ ಮಹತ್ವವನ್ನು ಒತ್ತಿಹೇಳಿದ ಪ್ರಧಾನಿ ಮೋದಿ, ಕಲ್ಪನೆಗಳನ್ನು ಉತ್ಪನ್ನಗಳನ್ನಾಗಿ ಮತ್ತು ಸಮಸ್ಯೆಗಳನ್ನು ಪರಿಹಾರಗಳನ್ನಾಗಿ ಪರಿವರ್ತಿಸುವುದು ಒಂದು ಪ್ರಮುಖ ಸಾಮರ್ಥ್ಯವಾಗಿದೆ; ಆದರೆ ಹೆಚ್ಚಿನ ಜನರು ಅಂತಹ ಅವಕಾಶಗಳನ್ನು ಪಡೆದಾಗ ಅದರ ಪ್ರಭಾವವು ಹೆಚ್ಚಾಗುತ್ತದೆ ಎಂದು ಹೇಳಿದರು.
ಸ್ನೇಹಿತರೇ, ನಾವೀನ್ಯತೆಯ ಶಕ್ತಿಯೂ ಇದೇ ರೀತಿಯದ್ದಾಗಿದೆ. ಕಲ್ಪನೆಯನ್ನು ಉತ್ಪನ್ನವನ್ನಾಗಿ ಮತ್ತು ಸಮಸ್ಯೆಯನ್ನು ಪರಿಹಾರವನ್ನಾಗಿ ಪರಿವರ್ತಿಸುವುದು ಸ್ವತಃ ಒಂದು ದೊಡ್ಡ ಸಾಮರ್ಥ್ಯ. ಆದರೆ ಸಮಾಜದಲ್ಲಿ ಹೆಚ್ಚು ಹೆಚ್ಚು ಜನರು ಈ ಅವಕಾಶವನ್ನು ಪಡೆದಾಗ, ಅಧಿಕಾರದ ಸಮತೋಲನ ಕಾಯ್ದುಕೊಳ್ಳಲ್ಪಡುತ್ತದೆ ಮತ್ತು ಅದರ ಪ್ರಭಾವವು ಅನೇಕ ಪಟ್ಟು ಹೆಚ್ಚಾಗುತ್ತದೆ ಎಂದರು.
