ನವದೆಹಲಿ, ಅ. 7 (ಪಿಟಿಐ)- ಸರ್ಕಾರದ ಮುಖ್ಯಸ್ಥರಾಗಿ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಇಲ್ಲಿನ ಶ್ರೀ ವಿನಾಯಕ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಅತ್ಯಂತ ಸಮರ್ಪಣಾ ಭಾವದಿಂದ ದೇಶ ಸೇವೆ ಮಾಡುವ ತಮ್ಮ ಸಂಕಲ್ಪವನ್ನು ನವೀಕರಿಸಿದರು.
ಮೋದಿ ಅವರು 2001ರ ಅಕ್ಟೋಬರ್ 7ರಿಂದ ನಿರಂತರವಾಗಿ ಸರ್ಕಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲು ಮೂರು ಅವಧಿಗೆ ಗುಜರಾತ್ ಮುಖ್ಯಮಂತ್ರಿಯಾಗಿ, ಬಳಿಕ ಮೂರು ಲೋಕಸಭಾ ಚುನಾವಣೆಗಳಲ್ಲಿ ಗೆದ್ದು ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
‘ಇಂದು ನವದೆಹಲಿಯ ಶ್ರೀ ವಿನಾಯಕ ದೇವಾಲಯದಲ್ಲಿ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದೆ. ದೇಶಾದ್ಯಂತ ಇರುವ ನನ್ನ ಎಲ್ಲ ಕುಟುಂಬ ಸದಸ್ಯರ ಸಂತೋಷ, ಸಮೃದ್ಧಿ ಮತ್ತು ಉತ್ತಮ ಆರೋಗ್ಯಕ್ಕಾಗಿ ಶ್ರೀ ಗಣೇಶನಲ್ಲಿ ಪ್ರಾರ್ಥಿಸಿದೆ’ ಎಂದು ಮೋದಿ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಘ್ನಹರ್ತನಾದ ಶ್ರೀ ಗಣೇಶನ ಕೃಪೆ ಎಲ್ಲರಿಗೂ ಸಿಗಲಿ ಹಾಗೂ ರಾಷ್ಟ್ರವು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯಲಿ ಎಂದು ಪ್ರಾರ್ಥಿಸಿರುವುದಾಗಿ ಅವರು ತಿಳಿಸಿದ್ದಾರೆ.
ನವದೆಹಲಿಯ ಸರೋಜಿನಿ ನಗರದಲ್ಲಿರುವ ಶ್ರೀ ವಿನಾಯಕ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಸರ್ಕಾರದ ಮುಖ್ಯಸ್ಥರಾಗಿ 25 ವರ್ಷಗಳನ್ನು ಪೂರೈಸಿದ ಪ್ರಧಾನಿ, ದೇಶಕ್ಕೆ ಅತ್ಯಂತ ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸುವ ತಮ್ಮ ಸಂಕಲ್ಪವನ್ನು ನವೀಕರಿಸಿದರು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
