Homeರಾಷ್ಟ್ರೀಯಬೌದ್ಧಿಕ ನಕ್ಸಲರ ಬಗ್ಗೆ ಪ್ರಧಾನಿ ಮೋದಿ ಎಚ್ಚರಿಕೆ

ಬೌದ್ಧಿಕ ನಕ್ಸಲರ ಬಗ್ಗೆ ಪ್ರಧಾನಿ ಮೋದಿ ಎಚ್ಚರಿಕೆ

PM Modi warns against intellectual Naxals

ನವದೆಹಲಿ,ಆ.15-ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೆಂಪುಕೋಟೆಯ ಆವರಣದಿಂದ ರಾಷ್ಟ್ರವನ್ನುದ್ದೇಶಿಸಿ ಸತತ 13ನೇ ಬಾರಿಗೆ ಭಾಷಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಮಹಿಳಾ ಮೀಸಲಾತಿ ಜಾರಿಗೆ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಹಕರಿಸುವಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದರು.

ಇದೇ ವೇಳೆ, ಸಶಸ್ತ್ರ ನಕ್ಸಲಿಸಂ ಬಹುತೇಕ ಅಂತ್ಯಗೊಂಡಿದ್ದರೂ ಅದರ ಹಿಂದೆ ಇರುವುದಾಗಿ ತಾವು ಹೇಳಿದ ದಿಮಾಗಿ ನಕ್ಸಲ ಅಥವಾ ಮಾನಸಿಕ ನಕ್ಸಲ ಮನಸ್ಥಿತಿಯ ಬಗ್ಗೆ ದೇಶ ಎಚ್ಚರಿಕೆಯಿಂದಿರಬೇಕು ಎಂದು ಅವರು ಎಚ್ಚರಿಸಿದರು.ಸುಮಾರು 75 ನಿಮಿಷಗಳ ಭಾಷಣದಲ್ಲಿ ವಿಕಸಿತ ಭಾರತ-2047 ಗುರಿಯನ್ನು ಕೇಂದ್ರಬಿಂದುವಾಗಿಸಿ ಕೊಂಡ ಮೋದಿ,
ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಯುವಜನತೆ ಮುಂಚೂಣಿ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು. ಉತ್ಪಾದನೆ, ಇಂಧನ ಭದ್ರತೆ, ಕೃಷಿ ಮತ್ತು ಆಹಾರ ಸಂಸ್ಕರಣೆ,
ತಂತ್ರಜ್ಞಾನನಾವೀನ್ಯತೆ, ಗತಿಶಕ್ತಿ, ರಕ್ಷಣಾ ಸಾಮರ್ಥ್ಯ, ಹಸಿರುನೀಲಿ ಆರ್ಥಿಕತೆ ಹಾಗೂ ಭಾರತದ ಮೃದುಶಕ್ತಿ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳನ್ನು ಮುಂದಿನ ಅಭಿವದ್ಧಿಯ ಆಧಾರಸ್ತಂಭಗಳಾಗಿ ಅವರು ಪ್ರಸ್ತಾಪಿಸಿದರು.

ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ವಿಚಾರವನ್ನು ರಾಜಕೀಯ ಸಂಘರ್ಷದ ವಿಷಯವನ್ನಾಗಿ ಮಾಡದೆ ಶೀಘ್ರ ಜಾರಿಗೆ ತರಲು ಎಲ್ಲ ಪಕ್ಷಗಳು ಸಹಕರಿಸಬೇಕು ಎಂದು ಮೋದಿ ನೇರವಾಗಿ ಕರೆ ನೀಡಿದರು. ಮಹಿಳಾ ಶಕ್ತಿಯನ್ನು ಗೌರವಿಸಿ ಎಂದು ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದ ಅವರು, ತಾಯಂದಿರು ಮತ್ತು ಸಹೋದರಿಯರಿಗೆ ಶಾಸನಸಭೆಗಳು ಹಾಗೂ ಲೋಕಸಭೆಯಲ್ಲಿ ಆದಷ್ಟು ಬೇಗ ಸಮರ್ಪಕ ಪ್ರಾತಿನಿಧ್ಯ ದೊರೆಯಬೇಕು ಮತ್ತು ದೇಶದ ನೀತಿ ರೂಪಿಸುವಿಕೆಯಲ್ಲಿ ಮಹಿಳೆಯರ ಕೊಡುಗೆ ಹೆಚ್ಚಬೇಕು ಎಂದು ಹೇಳಿದರು.

ಸಶಸ್ತ್ರ ನಕ್ಸಲರು ಹೋದರೂ ದಿಮಾಗಿ ನಕ್ಸಲರು ಉಳಿದಿದ್ದಾರೆ :
ನಕ್ಸಲಿಸಂ ಕುರಿತು ಮೋದಿ ತಮ ಭಾಷಣದಲ್ಲಿ ಹಿಂದಿನ ಹಲವು ವರ್ಷಗಳಿಗಿಂತ ವಿಭಿನ್ನವಾದ ರಾಜಕೀಯ ಮತ್ತು ಸೈದ್ಧಾಂತಿಕ ಆಯಾಮವನ್ನು ಮುಂದಿಟ್ಟರು. ನಾಲ್ಕು ದಶಕಗಳ ಕಾಲ ದೇಶದ ಹಲವು ಪ್ರದೇಶಗಳು ಮಾವೋವಾದಿ ಹಿಂಸಾಚಾರದ ಭೀತಿಯಲ್ಲಿದ್ದವು ಎಂದು ಹೇಳಿದ ಅವರು, ಸಶಸ್ತ್ರ ನಕ್ಸಲಿಸಂ ನಿರ್ಮೂಲನೆಯತ್ತ ದೇಶ ದೊಡ್ಡ ಪ್ರಗತಿ ಸಾಧಿಸಿದೆ ಎಂದು ಪ್ರತಿಪಾದಿಸಿದರು. ನಕ್ಸಲ್‌ ವಿರೋಧಿ ಕಾರ್ಯಾಚರಣೆಗಳಲ್ಲಿ 3,500ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದರು.

ಆದರೆ, ಸಶಸ್ತ್ರ ನಕ್ಸಲರು ಹಿಂದೆ ಸರಿದರೂ ದಿಮಾಗಿ ನಕ್ಸಲ ಮನಸ್ಥಿತಿ ಇನ್ನೂ ಅಸ್ತಿತ್ವದಲ್ಲಿದೆ ಎಂದು ಮೋದಿ ಎಚ್ಚರಿಸಿದರು. ಇಂತಹವರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಮತ್ತು ಸಮಾಜವನ್ನು ತಪ್ಪು ದಾರಿಗೆ ಕೊಂಡೊಯ್ಯಲು ವಿವಿಧ ತಂತ್ರಗಳನ್ನು ಬಳಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಇಂತಹ ಮನಸ್ಥಿತಿಯನ್ನು ಗುರುತಿಸಿ ಪ್ರತ್ಯೇಕಿಸಬೇಕು ಮತ್ತು ಯುವಜನತೆಯನ್ನು ದೇಶದ ಅಭಿವೃದ್ಧಿಯ ಮುಖ್ಯವಾಹಿನಿಯೊಂದಿಗೆ ಜೋಡಿಸಬೇಕು ಎಂದು ಕರೆ ನೀಡಿದರು.

ಇಂಧನ ಸ್ವಾವಲಂಬನೆಗೆ ಒತ್ತು :
ಭೌಗೋಳಿಕರಾಜಕೀಯ ಸಂಘರ್ಷಗಳು ಮತ್ತು ಜಾಗತಿಕ ಪೂರೈಕೆ ಸರಪಳಿಯ ಅನಿಶ್ಚಿತತೆಗಳು ಭಾರತದ ಆರ್ಥಿಕ ಭದ್ರತೆಗೆ ಸವಾಲಾಗಬಹುದು ಎಂದು ಮೋದಿ ಎಚ್ಚರಿಸಿದರು. ಇಂಧನ ಮತ್ತು ಖನಿಜಗಳಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡಿ ದೇಶೀಯ ಸಾಮರ್ಥ್ಯವನ್ನು ಹೆಚ್ಚಿಸಬೇಕೆಂದು ಅವರು ಪ್ರತಿಪಾದಿಸಿದರು.

ಪರಮಾಣು ವಿದ್ಯುತ್‌ ಕ್ಷೇತ್ರವನ್ನು ಈ ಸ್ವಾವಲಂಬನೆಯ ಪ್ರಮುಖ ಅಂಗವನ್ನಾಗಿ ಅವರು ಬಿಂಬಿಸಿದರು. ತಮಿಳುನಾಡಿನ ಕಲ್ಪಾಕಂನಲ್ಲಿರುವ ಪೊಟೋಟೈಪ್‌ ಫಾಸ್ಟ್‌ ಬ್ರೀಡರ್‌ ರಿಯಾಕ್ಟರ್‌ ನಿರ್ಣಾಯಕ ಹಂತ ತಲುಪಿರುವುದನ್ನು ಉಲ್ಲೇಖಿಸಿದ ಮೋದಿ, 2047ರ ವೇಳೆಗೆ 100 ಗಿಗಾವಾಟ್‌ ಪರಮಾಣು ವಿದ್ಯುತ್‌ ಸಾಮರ್ಥ್ಯ ಸಾಧಿಸುವ ಗುರಿಯನ್ನು ಪುನರುಚ್ಚರಿಸಿದರು.

ರಕ್ಷಣಾ ಉತ್ಪಾದನೆಗೆ ಜಾಗತಿಕ ಕೇಂದ್ರವಾಗುವ ಗುರಿ :
ಹೈಪರ್‌ಸಾನಿಕ್‌ ತಂತ್ರಜ್ಞಾನ, ಡ್ರೋನ್‌ ವ್ಯವಸ್ಥೆಗಳು ಮತ್ತು ಇತರ ಸುಧಾರಿತ ರಕ್ಷಣಾ ಸಾಮರ್ಥ್ಯಗಳಲ್ಲಿ ಸ್ವಾವಲಂಬನೆ ಸಾಧಿಸುವ ಅಗತ್ಯವನ್ನು ಮೋದಿ ಒತ್ತಿ ಹೇಳಿದರು. ಭಾರತವನ್ನು ರಕ್ಷಣಾ ಉತ್ಪಾದನೆಯ ಜಾಗತಿಕ ಕೇಂದ್ರವನ್ನಾಗಿ ರೂಪಿಸುವುದು ಅಗತ್ಯ ಎಂದು ಅವರು ಪ್ರತಿಪಾದಿಸಿದರು.

ಯುವಜನತೆ ಮತ್ತು ಉಚಿತ ಆನ್‌ಲೈನ್‌ ತರಬೇತಿ :
2047ರ ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸುವಲ್ಲಿ ಯುವಜನತೆ ನಿರ್ಣಾಯಕ ಶಕ್ತಿಯಾಗಲಿದೆ ಎಂದು ಮೋದಿ ಹೇಳಿದರು. ಶಿಕ್ಷಣ ಮತ್ತು ಸ್ಪರ್ಧಾತಕ ಪರೀಕ್ಷೆಗಳ ಸಿದ್ಧತೆಯಲ್ಲಿ ಕೋಚಿಂಗ್‌ ಕೇಂದ್ರಗಳ ಮೇಲಿನ ಹೆಚ್ಚಿನ ಆರ್ಥಿಕ ಅವಲಂಬನೆ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಹೊರೆಯಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಇದೇ ಭಾಷಣದಲ್ಲಿ ಕೃತಕ ಬುದ್ಧಿಮತ್ತೆ ಸೇರಿದಂತೆ ಹೊಸ ತಂತ್ರಜ್ಞಾನಗಳಲ್ಲಿ ಯುವಜನತೆಗೆ ತರಬೇತಿ ನೀಡುವ ಯೋಜನೆಗಳು ಮತ್ತು ಮುಂದಿನ ವರ್ಷಗಳಲ್ಲಿ ಸೆಮಿಕಂಡಕ್ಟರ್‌ ಉತ್ಪಾದನಾ ಸಾಮರ್ಥ್ಯ ವಿಸ್ತರಣೆಯ ಕುರಿತ ಘೋಷಣೆಗಳಿಗೂ ಒತ್ತು ನೀಡಲಾಯಿತು.

ಸ್ವಾವಲಂಬನೆಯ ಸಂದೇಶ ಮತ್ತು ಜಾಗತಿಕ ಬಿಕ್ಕಟ್ಟುಗಳ ಪಾಠ :
ಕೋವಿಡ್‌-19 ಅವಧಿಯಲ್ಲಿ ಭಾರತಕ್ಕೆ ಲಸಿಕೆ ಸಿಗುವುದಿಲ್ಲ ಎಂಬ ತಪ್ಪು ಮಾಹಿತಿಗಳು ಹರಡಿದ್ದವು ಎಂದು ಮೋದಿ ಹೇಳಿದರು. ಇದೇ ರೀತಿ ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಸಂದರ್ಭದಲ್ಲೂ ಭಾರತದಲ್ಲಿ ಪೆಟ್ರೋಲ್‌‍, ಡೀಸೆಲ್‌ ಅಥವಾ ಎಲ್‌ಪಿಜಿ ಕೊರತೆ ಉಂಟಾಗಲಿದೆ ಎಂಬ ಭೀತಿಯನ್ನು ಕೆಲವರು ಸೃಷ್ಟಿಸಲು ಪ್ರಯತ್ನಿಸಿದ್ದರು ಎಂದು ಅವರು ಆರೋಪಿಸಿದರು.

ಆದರೆ ದೇಶದ ಸ್ವಾವಲಂಬನೆಯ ಕ್ರಮಗಳಿಂದಾಗಿ ಇಂಧನ, ಅನಿಲ ಮತ್ತು ಯೂರಿಯಾ ಪೂರೈಕೆಯಲ್ಲಿ ಕೊರತೆ ಉಂಟಾಗಲಿಲ್ಲ ಎಂದು ಅವರು ಪ್ರತಿಪಾದಿಸಿದರು. ಜಾಗತಿಕ ಸಂಘರ್ಷಗಳು ಮತ್ತು ಪೂರೈಕೆ ಸರಪಳಿಯ ವ್ಯತ್ಯಯಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಆತನಿರ್ಭರತೆಯನ್ನು ಕೇವಲ ಆರ್ಥಿಕ ನೀತಿಯಾಗಿ ಅಲ್ಲ, ರಾಷ್ಟ್ರೀಯ ಭದ್ರತೆಯ ಭಾಗವಾಗಿಯೂ ಪರಿಗಣಿಸುವ ಅಗತ್ಯವಿದೆ ಎಂಬುದನ್ನು ಭಾಷಣ ಒತ್ತಿಹೇಳಿತು.

RELATED ARTICLES
spot_img

Latest News