ನವದೆಹಲಿ,ಅ.14- ಶಾಂತಿ ಕಾಪಾಡುವ ನಿಯಮ ಉಲ್ಲಂಘನೆ ಮತ್ತು ಪ್ರತಿಭಟನೆಗೆ ನಿಗದಿಪಡಿಸಿದ್ದ ಪ್ರದೇಶವಾಗಿ ಅಧಿಸೂಚನೆ ರದ್ದುಗೊಳಿಸಲಾದ ಜಂತರ್ ಮಂತರ್ಗೆ ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ್ ದಾಸ್ ಹಾಗೂ ಆಶುತೋಷ್ ರಂಕಾ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇಂದು ಬೆಳಿಗ್ಗೆ ಅವರನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ಅವರ ಸಹಚರ ಅಜಿಂಕ್ಯ ಶಿಂಧೆ ಅವರ ಜಾಮೀನು ಬಾಂಡ್ಗೆ ಸಂಬಂಧಿಸಿದ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ ಎಂದು ಮೂಲಗಳು ತಿಳಿಸಿವೆ. ಇಂದು ಬೆಳಗ್ಗೆ ಮೂವರನ್ನೂ ಮತ್ತೆ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು.
ನಿನ್ನೆ ಮುಂಜಾನೆ ಪೊಲೀಸರು ಹಾಕಿದ್ದ ಬ್ಯಾರಿಕೇಡ್ಗಳನ್ನು ದಾಟಿ, ಅನುಮತಿಯಿಲ್ಲದೆ ಜಂತರ್ ಮಂತರ್ ಪ್ರದೇಶವನ್ನು ಪ್ರವೇಶಿಸಿದ ಆರೋಪದ ಮೇಲೆ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಅಕ್ರಮ ಪ್ರವೇಶ, ನಿಷೇಧಾಜ್ಞೆಗಳ ಉಲ್ಲಂಘನೆ, ಶಾಂತಿ ಕಾಪಾಡುವ ನಿಯಮ ಉಲ್ಲಂಘನೆ ಹಾಗೂ ಸರ್ಕಾರಿ ನೌಕರರು ತಮ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ ಆರೋಪಗಳು ಸೇರಿದಂತೆ ವಿವಿಧ ಆರೋಪಗಳಡಿ ಸಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕಳೆದ ಶನಿವಾರ ನಡೆದ ಪ್ರತಿಭಟನೆಯ ವೇಳೆ ವಶಕ್ಕೆ ಪಡೆಯಲಾಗಿದ್ದ ದಾಸ್ ಮತ್ತು ರಂಕಾ, ಒಂದು ವರ್ಷದವರೆಗೆ ಶಾಂತಿ ಕಾಪಾಡುವುದಾಗಿ ಬಾಂಡ್ಗೆ ಸಹಿ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
