ಚನ್ನೈ,ಮೇ10-ರಾಜ್ಯದ ಪ್ರಸ್ತುತ ಆರ್ಥಿಕ ಸ್ಥಿತಿಗತಿಯ ಬಗ್ಗೆ ಸಾರ್ವಜನಿಕರಿಗೆ ಪಾರದರ್ಶಕ ಮಾಹಿತಿ ನೀಡಲು ಶ್ವೇತಪತ್ರ ಬಿಡುಗಡೆ ಮಾಡುವುದಾಗಿ ಟಿವಿಕೆ ಮುಖ್ಯಸ್ಥ ವಿಜಯ್ ಘೋಷಿಸಿದ್ದಾರೆ.ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ತಮ ಮೊದಲ ಭಾಷಣದಲ್ಲಿ ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಇಂದು ಸುಮಾರು 10 ಲಕ್ಷ ಕೋಟಿ ರೂಪಾಯಿಗೂ ಅಧಿಕ ಸಾಲದ ಹೊರೆಯೊಂದಿಗೆ ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇನೆ. ಸಾರ್ವಜನಿಕರಿಗೆ ರಾಜ್ಯದ ನೈಜ ಸ್ಥಿತಿಯನ್ನು ತಿಳಿಸುವುದು ನನ್ನ ಕರ್ತವ್ಯ. ಇದಕ್ಕಾಗಿ ನಾವು ಶ್ವೇತಪತ್ರ ಬಿಡುಗಡೆ ಮಾಡುತ್ತೇವೆ ಎಂದರು.
ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ಮೋಸಗೊಳಿಸುವ ರಾಜಕಾರಣವನ್ನು ತಾನು ಮಾಡುವುದಿಲ್ಲ. ಪಾರದರ್ಶಕತೆಯಿಂದ ಸರ್ಕಾರವನ್ನು ನಡೆಸುತ್ತೇನೆ. ಪ್ರತಿಯೊಂದು ನಿರ್ಧಾರವೂ ಸಾರ್ವಜನಿಕರಿಗೆ ತಿಳಿಯುವಂತಿರಬೇಕು. ಇದು ಕೇವಲ ನನ್ನ ಸರ್ಕಾರವಲ್ಲ, ಇದು ನಿಮ (ಜನರ) ಸರ್ಕಾರ. ಅಧಿಕಾರ ಎಂಬುದು ಜನಸೇವೆಯ ಜವಾಬ್ದಾರಿ ಎಂದು ಹೇಳಿದರು.
ಸರ್ಕಾರದ ವ್ಯವಸ್ಥೆಯನ್ನು ಸರಿದಾರಿಗೆ ತರಲು ಮತ್ತು ಕಾರ್ಯನಿರ್ವಹಿಸಲು ನನಗೆ ಸ್ವಲ್ಪ ಸಮಯ ನೀಡಬೇಕು. ರಾಜ್ಯದಲ್ಲಿ ಭ್ರಷ್ಟಾಚಾರ ಮತ್ತು ಮಾದಕ ದ್ರವ್ಯಗಳ ಹಾವಳಿಯನ್ನು ಸಂಪೂರ್ಣವಾಗಿ ಕೊನೆಗೊಳಿಸುವುದೇ ನಮ ಮೊದಲ ಆದ್ಯತೆ ಎಂದು ಭರವಸೆ ನೀಡಿದರು.
ಶ್ವೇತಪತ್ರದ ಉದ್ದೇಶವೇನು?:
ಸರ್ಕಾರವು ರಾಜ್ಯದ ಆರ್ಥಿಕ ಸ್ಥಿತಿ, ಸಾಲದ ಪ್ರಮಾಣ ಮತ್ತು ಆದಾಯದ ಮೂಲಗಳ ಬಗ್ಗೆ ಅಧಿಕೃತ ದಾಖಲೆಗಳನ್ನು ಒಳಗೊಂಡ ವರದಿಯನ್ನು ನೀಡಲಿದೆ. ಈ ಮೂಲಕ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಆರ್ಥಿಕ ಶಿಸ್ತಿನ ಕೊರತೆಯನ್ನು ಜನರ ಮುಂದೆ ತೆರೆದಿಡುವುದು ವಿಜಯ್ ಅವರ ಉದ್ದೇಶವಾಗಿದೆ.
