ಚೆನ್ನೈ,ಮೇ 7- ಸರ್ಕಾರ ರಚನೆ ಮಾಡಲು ಅಗತ್ಯವಿರುವ ಶಾಸಕರ ಬೆಂಬಲದ ಸಹಿಯುಳ್ಳ ಪತ್ರಗಳನ್ನು ನೀಡುವವರೆಗೂ ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ತಮಿಳು ನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರಳೆಕರ್ ಕಡ್ಡಿ ಮುರಿದಂತೆ ಹೇಳಿದ್ದಾರೆ. ಹೀಗಾಗಿ ಟಿವಿಕೆ ಪಕ್ಷದ ಮುಖಂಡ ವಿಜಯ್ ಜೋಸೆಫ್ ಅವರ ಸರ್ಕಾರ ರಚನೆಗೆ ಎದುರಾಗಿರುವ ವಿಘ್ನಗಳು ಇನ್ನೂ 2-3 ದಿನ ಮುಂದುವರೆಯುವ ಸಾಧ್ಯತೆ ಇದೆ.
ಶಾಸಕರ ಬೆಂಬಲದ ಬಗ್ಗೆ ಸಂಪೂರ್ಣ ಮನವರಿಕೆಯಾಗದ ಹೊರತು ಪ್ರಮಾಣ ವಚನಕ್ಕೆ ಅವಕಾಶ ನೀಡಲಾಗದು ಎಂದು ರಾಜ್ಯಪಾಲರು ಸೂಚಿಸಿರುವುದರಿಂದ ವಿಜಯ್ ಅವರ ಪದಗ್ರಹಣ ಸಮಾರಂಭ ವಿಳಂಬವಾಗುತ್ತಿದೆ.ಮೊದಲು ಪ್ರಮಾಣವಚನ ಸ್ವೀಕರಿಸಿ ನಂತರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವುದಾಗಿ ಹೇಳಿದ್ದರು. ಆದರೆ ವಿಜಯ್ ಅವರ ವಾದ ಒಪ್ಪದ ರಾಜ್ಯಪಾಲರು 118 ಶಾಸಕರ ಸಹಿಯೊಂದಿಗೆ ಬನ್ನಿ ಎಂದು ಹೇಳಿದ್ದಾರೆ.
ಬುಧವಾರವಷ್ಟೇ ರಾಜ್ಯಪಾಲ ಅರಳೆಕರ್‌ರವರನ್ನು ಭೇಟಿ ಮಾಡಿದ್ದ ವೇಳೆ 112 ಶಾಸಕರ ಬೆಂಬಲದ ಪತ್ರವನ್ನು ನೀಡಿದ್ದರೂ ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನ ಕೊಟ್ಟಿರಿರಲಿಲ್ಲ. ಇದರ ಬೆನ್ನಲ್ಲೇ ಪುನಃ ಇಂದು ವಿಜಯ್ ಲೋಕಭವನದಲ್ಲಿ ಮತ್ತೆ ಭೇಟಿಯಾಗಿ ಮಾತುಕತೆ ನಡೆಸಿದರು.
ಲೋಕಭವನಕ್ಕೆ ಬರುವಂತೆ ಖುದ್ದು ರಾಜ್ಯಪಾಲರೇ ವಿಜಯ್‌ಗೆ ಆಹ್ವಾನ ಕೊಟ್ಟಿದ್ದರು. ಸರಳ ಬಹುಮತಕ್ಕೆ ಸರ್ಕಾರ ರಚಿಸಲು 118 ಶಾಸಕರ ಅಗತ್ಯವಿದೆ. ನೀವು 112 ಶಾಸಕರ ಬೆಂಬಲದ ಪತ್ರ ನೀಡಿದ್ದೀರಿ. ನಾಳೆ ಸದನದಲ್ಲಿ ನೀವು ಯಾವ ಶಾಸಕರ ಬೆಂಬಲ ಪಡೆದು ಬಹುಮತ ಸಾಬೀತುಪಡಿಸುತ್ತೀರಿ ಎಂದು ಕಾರ್ಯಾಂಗದ ಮುಖ್ಯಸ್ಥರು ಟಿವಿಕೆ ಮುಖಂಡರಿಗೆ ಪ್ರಶ್ನೆ ಮಾಡಿದ್ದಾರೆ.
118 ಶಾಸಕರ ಬೆಂಬಲದ ಪತ್ರವಿದ್ದರೆ ಸರ್ಕಾರ ರಚಿಸಲು ಆಹ್ವಾನ ಕೊಡುತ್ತೇನೆ. ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರಾಜ್ಯಪಾಲರು ಕೆಲವು ಕಾನೂನಿನ ತೊಡಕುಗಳನ್ನು ಮನವರಿಕೆ ಮಾಡಿಕೊಟ್ಟರು.
ನಾನು ಸರ್ಕಾರ ರಚನೆಗೆ ಅಡ್ಡಿಪಡಿಸಿಲ್ಲ. ನೀವು ಕೇವಲ 112 ಶಾಸಕರ ಸಹಿಯುಳ್ಳ ಪತ್ರಗಳನ್ನು ನೀಡಿದ್ದೀರಿ. ನಿಮಗೆ ಬಹುಮತದ ಕೊರತೆ ಇರುವುದರಿಂದ ಸರ್ಕಾರ ರಚನೆಗೆ ಅವಕಾಶ ನೀಡಲು ಕಾನೂನಿನ ತೊಡಕು ಎದುರಾಗುತ್ತದೆ.
ಈ ಹಿಂದೆ ಕರ್ನಾಟಕದಲ್ಲಿ ಅಂದರೆ 2018 ರಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಬಾರದಿದ್ದಾಗ ಅತೀ ದೊಡ್ಡ ಪಕ್ಷವಾಗಿ ಹೊರಹೊಮಿದ್ದ ಬಿಜೆಪಿ ಅಂದು ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನ ನೀಡಿ ಸದನದಲ್ಲಿ ಬಹುಮತ ಸಾಬೀತುಪಡಿಸಲು 2 ವಾರಗಳ ಕಾಲ ಅವಕಾಶ ಕೊಟ್ಟಿದ್ದರು.
ಆದರೆ ಸುಪ್ರೀಂಕೋರ್ಟ್‌ನಲ್ಲಿ ಇದನ್ನು ಪ್ರಶ್ನೆ ಮಾಡಿದ್ದರಿಂದ ಸದನದಲ್ಲಿ 24 ಗಂಟೆಯೊಳಗೆ ಬಹುಮತ ಸಾಬೀತುಪಡಿಸುವಂತೆ ಯಡಿಯೂರಪ್ಪ ಅವರಿಗೆ ಸೂಚನೆ ಕೊಟ್ಟಿತ್ತು. ಇದು ತಮಿಳುನಾಡಿನಲ್ಲಿ ಪುನರಾವರ್ತನೆಯಾಗಬಾರದು ಎಂದರೆ ನೀವು 118 ಶಾಸಕರ ಬೆಂಬಲದ ಪತ್ರವನ್ನು ನೀಡಿ ಎಂದು ರಾಜ್ಯಪಾಲರು ಟಿವಿಕೆ ಮುಖ್ಯಸ್ಥರಿಗೆ ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.
ರಾಜ್ಯಪಾಲರ ಕಠಿಣ ನಿಲುವು ಮತ್ತು ಪದಗ್ರಹಣ ವಿಳಂಬ ಸಂಖ್ಯೆಗಳ ಲೆಕ್ಕಾಚಾರದಲ್ಲಿ ಸಣ್ಣ ವ್ಯತ್ಯಾಸವಿದ್ದರೂ, ವಿಜಯ್ ಅವರು ತಾವೇ ಅತಿದೊಡ್ಡ ಪಕ್ಷದ ನಾಯಕನಾಗಿರುವುದರಿಂದ ಸರ್ಕಾರ ರಚಿಸಲು ಆಹ್ವಾನಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಭಾರತೀಯ ಕಮ್ಯುನಿಸ್ಟ್ ಪಕ್ಷ ಕೂಡ ವಿಜಯ್ ಸರ್ಕಾರಕ್ಕೆ ಬೆಂಬಲ ನೀಡಲು ಮುಂದಾಗಿದ್ದು, ಇದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಹೊಸ ಬೆಂಬಲದೊಂದಿಗೆ ವಿಜಯ್ ಪಾಳಯದ ಬಲ ಮತ್ತಷ್ಟು ಹೆಚ್ಚಿದ್ದು, ಬಹುಮತದ ಗಡಿಯನ್ನು ತಲುಪಲು ಕೇವಲ ಕೆಲವೇ ಸ್ಥಾನಗಳ ಅವಶ್ಯಕತೆ ಇದೆ.
ಒಂದೆಡೆ ಎಐಎಡಿಎಂಕೆ ನಾಯಕ ಕೆ.ಪಿ.ಮುನುಸ್ವಾಮಿ ಅವರು ಪರಿಸ್ಥಿತಿ ಏನೇ ಇರಲಿ, ನಾವು ವಿಜಯ್ ಅವರನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.ಇನ್ನೊಂದೆಡೆ, ಡಿಎಂಕೆ ಮೈತ್ರಿಕೂಟದಲ್ಲಿದ್ದ ಕಾಂಗ್ರೆಸ್ ಹಾಗೂ ಸಿಪಿಐ ಈಗ ವಿಜಯ್ ಅವರ ಬೆನ್ನಿಗೆ ನಿಂತಿರುವುದು ತಮಿಳುನಾಡು ರಾಜಕೀಯದ ಬದಲಾದ ಗಾಳಿಗೆ ಸಾಕ್ಷಿಯಾಗಿದೆ.
ಕಾನೂನು ಸಲಹೆ :
ಕಾನೂನು ಸಲಹೆ ಪಡೆದ ಬಳಿಕ ರಾಜ್ಯಪಾಲರು ಸರ್ಕಾರ ರಚನೆಗೆ ಅನುಮತಿ ನೀಡಬಹುದು ಒಂದು ವೇಳೆ ಅನುಮತಿ ನೀಡದಿದ್ದರೆ ವಿಜಯ್ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ಮೊರೆ ಹೋಗುವುದರ ಬಗ್ಗೆಯೂ ಚಿಂತನೆ ನಡೆದಿದೆ.
ತಮಿಳುನಾಡು ರಾಜಕೀಯ ಒಂದೆರಡು ದಿನಗಳಲ್ಲಿ ಕೋರ್ಟ್ ಮೆಟ್ಟಿಲೇರಿದರೂ ಅಚ್ಚರಿ ಇಲ್ಲ. ಆದರೆ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದ ಕಾರಣ ಕಾನೂನು ಸಲಹೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲು ತಮಿಳುನಾಡು ರಾಜ್ಯಪಾಲರು ಮುಂದಾಗಿದ್ದಾರೆ.ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವುದು ದೂರದ ಮಾತು ಎನ್ನಲಾಗುತ್ತಿದೆ.
ಟಿವಿಕೆ ಬೆಂಬಲಕ್ಕೆ ನಿಂತ ಸಿಪಿಐ :
ತಮಿಳುನಾಡಿನ ರಾಜಕೀಯದಲ್ಲಿ ಮತ್ತೊಂದು ಕ್ಷಿಪ್ರ ಬೆಳವಣಿಗೆ ನಡೆದಿದೆ. ವಿಜಯ್‌ಗೆ ವಿಶ್ವಾಸ ಮತ ಯಾಚನೆಗೆ ಅವಕಾಶ ಕೊಡುವಂತೆ ಕೋರಿ ಡಿಎಂಕೆ ಅಂಗ ಪಕ್ಷ ಸಿಪಿಐ ರಾಜ್ಯಪಾಲರಿಗೆ ಪತ್ರ ಬರೆದಿದೆ. 2 ಸ್ಥಾನ ಗೆದ್ದಿರುವ ವಿಸಿಕೆ ಪಕ್ಷ ಕೂಡಾ ವಿಜಯ್ ವಿಚಾರದಲ್ಲಿ ಬೆಂಬಲ ಪತ್ರ ನೀಡುವ ಕುರಿತಂತೆ ಇನ್ನೂ ಚರ್ಚೆಗಳು ನಡೆದಿವೆ.ರಾಜಭವನದಿಂದ ಸಿಗುವ ಮುಂದಿನ ಸೂಚನೆಯೇ ತಮಿಳುನಾಡಿನ ಮುಂದಿನ ಭವಿಷ್ಯವನ್ನು ನಿರ್ಧರಿಸಲಿದೆ.
