Tuesday, April 21, 2026
Homeರಾಜಕೀಯಮಹಿಳಾ ಸಬಲೀಕರಣದ ಮುಖವಾಡ ಧರಿಸಿ ಬಿಜೆಪಿ ಸರ್ಕಾರದಿಂದ ಭೀಕರ ಸಂಚು : ಡಿಕೆಶಿ

ಮಹಿಳಾ ಸಬಲೀಕರಣದ ಮುಖವಾಡ ಧರಿಸಿ ಬಿಜೆಪಿ ಸರ್ಕಾರದಿಂದ ಭೀಕರ ಸಂಚು : ಡಿಕೆಶಿ

A terrible conspiracy by the BJP government : DK Shivakumar

ಬೆಂಗಳೂರು, ಏ.19- ಕೇಂದ್ರದ ಬಿಜೆಪಿ ಸರ್ಕಾರವು ಮಹಿಳಾ ಸಬಲೀಕರಣದ ಮುಖವಾಡ ಧರಿಸಿ ದಕ್ಷಿಣ ಭಾರತದ ರಾಜಕೀಯ ಅಸ್ಮಿತೆಯನ್ನು ಅಳಿಸಲು ಭೀಕರ ಸಂಚು ರೂಪಿಸಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್‌ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿರು ಪ್ರಕಟಣೆ ನೀಡಿರುವ ಅವರು, ಬಿಜೆಪಿ ಜಾರಿಗೆ ತರಲು ಹೊರಟಿರುವ ಮಹಿಳಾ ಮೀಸಲಾತಿ ಮಸೂದೆಯು ಕೇವಲ ಒಂದು ಮಾಯಾಜಾಲವಾಗಿದ್ದು, ಇದು ದಕ್ಷಿಣದ ರಾಜ್ಯಗಳ ಹಕ್ಕುಗಳನ್ನು ಕಸಿದುಕೊಳ್ಳಲು ನಡೆಸುತ್ತಿರುವ ರಾಜಕೀಯ ಸರ್ಜಿಕಲ್‌ ಸ್ಟ್ರೈಕ್‌ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರ ಮರುವಿಂಗಡಣೆ ಎಂಬ ಕುತಂತ್ರ: ಮಹಿಳೆಯರಿಗೆ ರಾಜಕೀಯ ಅಧಿಕಾರ ಸಿಗಬೇಕು ಎಂಬುದು ಕಾಂಗ್ರೆಸ್‌‍ ಪಕ್ಷದ ಅಚಲ ನಿಲುವು. ರಾಜೀವ್‌ ಗಾಂಧಿಯವರು ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ತಂದಾಗ ವಿರೋಧಿಸಿದವರು ಈಗ ಮಹಿಳಾ ಮೀಸಲಾತಿಯ ಜಪ ಮಾಡುತ್ತಿದ್ದಾರೆ. ಆದರೆ, ಈ ಮೀಸಲಾತಿ ಜಾರಿಯಾಗಲು ಕ್ಷೇತ್ರ ಮರುವಿಂಗಡಣೆ ಆಗಲೇಬೇಕು ಎಂಬ ಷರತ್ತು ವಿಧಿಸಿರುವುದು ತರ್ಕಹೀನವಾದುದು. ಇದು ಮಹಿಳೆಯರಿಗೆ ತಕ್ಷಣಕ್ಕೆ ನ್ಯಾಯ ಒದಗಿಸುವ ಬದಲು, ಮೀಸಲಾತಿಯನ್ನು ಮುಂದೂಡುವ ಮತ್ತು ಮರುವಿಂಗಡಣೆಯನ್ನು ಬಿಜೆಪಿಯ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಷಡ್ಯಂತ್ರವಾಗಿದೆ ಎಂದು ಕಿಡಿಕಾರಿದ್ದಾರೆ.

ಪ್ರಗತಿಪರ ರಾಜ್ಯಗಳಿಗೆ ಸಿಗುತ್ತಿರುವ ಶಿಕ್ಷೆಯೇ?:
ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ಅನ್ಯಾಯವನ್ನು ಆಗುತ್ತಿದೆ. ಕರ್ನಾಟಕ, ತಮಿಳುನಾಡು, ಕೇರಳದಂತಹ ರಾಜ್ಯಗಳು ರಾಷ್ಟ್ರೀಯ ಹಿತಾಸಕ್ತಿಯಿಂದ ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸಿವೆ. ಆದರೆ, ಈಗ ಕೇಂದ್ರ ಸರ್ಕಾರ ಜನಸಂಖ್ಯೆ ಹೆಚ್ಚಿಸಿಕೊಂಡ ರಾಜ್ಯಗಳಿಗೆ ಹೆಚ್ಚಿನ ಸಂಸತ್‌ ಸ್ಥಾನ ನೀಡಿ, ಜನಸಂಖ್ಯೆ ನಿಯಂತ್ರಿಸಿದ ನಮಂತಹ ಪ್ರಗತಿಪರ ರಾಜ್ಯಗಳ ಪ್ರಾತಿನಿಧ್ಯ ಕುಗ್ಗಿಸಲು ಹೊರಟಿದೆ. ಇದು ಕನ್ನಡಿಗರ ಹಾಗೂ ಇಡೀ ದಕ್ಷಿಣ ಭಾರತೀಯರ ಸ್ವಾಭಿಮಾನಕ್ಕೆ ಎಸಗುತ್ತಿರುವ ದ್ರೋಹ ಎಂದು ಡಿ.ಕೆ.ಶಿವಕುಮಾರ್‌ ಕಡಿನುಡಿಗಳನ್ನಾಡಿದ್ದಾರೆ.

ಮಹಿಳಾ ಮೀಸಲಾತಿ ನೀಡಲು ಕ್ಷೇತ್ರ ಮರುವಿಂಗಡಣೆ ಆಗಲೇಬೇಕು ಎಂಬ ಹಠವೇಕೆ? ಈಗಿರುವ 543 ಕ್ಷೇತ್ರಗಳಲ್ಲೇ ಮೀಸಲಾತಿ ನೀಡಲು ಕೇಂದ್ರ ಸರ್ಕಾರಕ್ಕೆ ಇರುವ ತೊಂದರೆಗಳೇನು ಎಂದು ಸರಣಿ ಪ್ರಶ್ನೆಗಳನ್ನು ಡಿ.ಕೆ.ಶಿವಕುಮಾರ್‌ ಮುಂದಿಟ್ಟಿದ್ದಾರೆ.
ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣದ ರಾಜ್ಯಗಳ ಸಂಸತ್‌ ಸ್ಥಾನಗಳ ಸಂಖ್ಯೆ ಇಳಿಕೆಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಕಾನೂನಾತಕವಾಗಿ ಗ್ಯಾರೆಂಟಿ ನೀಡುತ್ತದೆಯೇ ಎಂದು ಸವಾಲು ಹಾಕಿದ್ದಾರೆ.

ರಾಜಿ ಇಲ್ಲದ ಹೋರಾಟ:
ಉತ್ತರ ಭಾರತದ ಹಿಂದಿ ಭಾಷಿಕ ರಾಜ್ಯಗಳಲ್ಲಿ ಸ್ಥಾನಗಳನ್ನು ಹೆಚ್ಚಿಸಿಕೊಂಡು, ದಕ್ಷಿಣ ಭಾರತದ ಧ್ವನಿಯನ್ನು ಕ್ಷೀಣಿಸುವಂತೆ ಮಾಡುವುದು ಬಿಜೆಪಿಯ ರಹಸ್ಯ ಅಜೆಂಡಾ. ಸಂಸತ್ತಿನಲ್ಲಿ ನಮ ಧ್ವನಿ ಕ್ಷೀಣಿಸಿದರೆ ತೆರಿಗೆ ಹಣದ ಹಂಚಿಕೆಯಲ್ಲೂ ನಮಗೆ ಅನ್ಯಾಯವಾಗುತ್ತದೆ. ಇದನ್ನು ಕಾಂಗ್ರೆಸ್‌‍ ಪಕ್ಷ ಎಂದಿಗೂ ಒಪ್ಪುವುದಿಲ್ಲ. ನಾವು ಮಹಿಳಾ ಮೀಸಲಾತಿಯನ್ನು ಸ್ವಾಗತಿಸುತ್ತೇವೆ, ಆದರೆ ಅದರ ಹೆಸರಲ್ಲಿ ನಡೆಯುವ ಪ್ರಾದೇಶಿಕ ಅನ್ಯಾಯವನ್ನು ಬಲವಾಗಿ ವಿರೋಧಿಸುತ್ತೇವೆ. ನಮ ರಾಜ್ಯದ ಹಿತಾಸಕ್ತಿ ಬಲಿ ಕೊಡಲು ನಾವು ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಹಿಳಾ ಮೀಸಲಾತಿ ಎಂಬುದು ಮಹಿಳೆಯರ ಹಕ್ಕಾಗಬೇಕೇ ಹೊರತು, ದಕ್ಷಿಣ ಭಾರತವನ್ನು ಹತ್ತಿಕ್ಕುವ ಆಯುಧವಾಗಬಾರದು. ಒಕ್ಕೂಟ ವ್ಯವಸ್ಥೆಯ ಅಡಿಪಾಯಕ್ಕೆ ಧಕ್ಕೆ ತರುತ್ತಿರುವ ಕೇಂದ್ರ ಸರ್ಕಾರವು ತಕ್ಷಣವೇ ಮರುವಿಂಗಡಣೆಯ ಷರತ್ತನ್ನು ಕೈಬಿಟ್ಟು ಮಹಿಳಾ ಮೀಸಲಾತಿಯನ್ನು ಜಾರಿಗೆ ತರಬೇಕು, ಇಲ್ಲದಿದ್ದರೆ ದಕ್ಷಿಣ ಭಾರತದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

RELATED ARTICLES

Latest News