Tuesday, April 21, 2026
Homeಅಂತಾರಾಷ್ಟ್ರೀಯಇರಾನ್‌ ಸಂಘರ್ಷದ ಬೆನ್ನಲ್ಲೇ ಕ್ಷಿಪಣಿ ಉಡಾಯಿಸಿ ಆತಂಕ ಹೆಚ್ಚಿಸಿದ ಉತ್ತರ ಕೊರಿಯಾ

ಇರಾನ್‌ ಸಂಘರ್ಷದ ಬೆನ್ನಲ್ಲೇ ಕ್ಷಿಪಣಿ ಉಡಾಯಿಸಿ ಆತಂಕ ಹೆಚ್ಚಿಸಿದ ಉತ್ತರ ಕೊರಿಯಾ

North Korea fires short-range ballistic missiles in latest weapons tests

ಸಿಯೋಲ್‌‍, ಏ.19- ಇರಾನ್‌-ಇಸ್ರೇಲ್‌, ಅಮೇರಿಕಾ ನಡುವಿನ ಯುದ್ಧವೇ ಇನ್ನೂ ತಾರ್ಕಿಕ ಅಂತ್ಯ ಪಡೆಯದ ಹೊತ್ತಿನಲ್ಲಿ, ಉತ್ತರ ಕೊರಿಯಾ ಭಾನುವಾರ ಅಲ್ಪ ದೂರದ ಹಲವು ಬ್ಯಾಲಿಸ್ಟಿಕ್‌ ಕ್ಷಿಪಣಿಗಳನ್ನು ಸಮುದ್ರದ ದಿಕ್ಕಿನತ್ತ ಉಡಾಯಿಸಿ ಆತಂಕ ಮೂಡಿಸಿದೆ.ಜಾಗತಿಕ ಸಂಘರ್ಷದ ಹಿನ್ನೆಲೆಯಲ್ಲಿ ಉತ್ತರ ಕೊರಿಯಾ ತನ್ನ ಅಣ್ವಸ್ತ್ರ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವುದು ನೆರೆಯ ರಾಷ್ಟ್ರಗಳ ನಿದ್ದೆಗೆಡಿಸಿದೆ.

ವಿಶ್ವಸಂಸ್ಥೆಯ ಅಣು ನಿಯಂತ್ರಣ ಸಂಸ್ಥೆ ಉತ್ತರ ಕೊರಿಯಾ ಅಣ್ವಸ್ತ್ರ ನಿರ್ಮಾಣದಲ್ಲಿ ತೀವ್ರ ಪ್ರಗತಿ ಸಾಧಿಸುತ್ತಿದೆ ಎಂದು ಎಚ್ಚರಿಕೆ ನೀಡಿದ್ದ ಕೆಲವೇ ದಿನಗಳಲ್ಲಿ ಈ ಪರೀಕ್ಷೆಗಳು ನಡೆದಿವೆ.
ಏತನಧ್ಯೆ ದಕ್ಷಿಣ ಕೊರಿಯಾದ ಸಂಯುಕ್ತ ಸೈನಿಕ ಮುಖ್ಯಸ್ಥರ ಪ್ರಕಾರ, ಸಿನ್ಪೋ ಪ್ರದೇಶದಿಂದ ಉಡಾಯಿಸಲಾದ ಕ್ಷಿಪಣಿಗಳು ಸುಮಾರು 140 ಕಿಲೋಮೀಟರ್‌ ದೂರ ಪೂರ್ವ ಸಮುದ್ರದತ್ತ ಹಾರಿವೆ. ಉತ್ತರ ಕೊರಿಯಾದ ಯಾವುದೇ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ನೀಡಲು ದಕ್ಷಿಣ ಕೋರಿಯಾ ಸಿದ್ಧವಾಗಿದೆ. ಇದೇ ಸಮಯದಲ್ಲಿ ವಿಶ್ವಸಂಸ್ಥೆ ಹಾಗೂ ಜಪಾನ್‌ ಜೊತೆ ನಿಕಟ ಸಂಪರ್ಕದಲ್ಲಿದೆ ಎಂದು ತಿಳಿಸಿದೆ.

ದಕ್ಷಿಣ ಕೊರಿಯಾದ ರಾಷ್ಟ್ರೀಯ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ, ಉತ್ತರ ಕೊರಿಯಾದ ಪದೇ ಪದೇ ಕ್ಷಿಪಣಿ ಪರೀಕ್ಷೆಗಳ ಬಗ್ಗೆ ಆತಂಕ ವ್ಯಕ್ತಪಡಿಸಲಾಗಿದೆ. ತಕ್ಷಣವೇ ಈ ರೀತಿಯ ಪರೀಕ್ಷೆಗಳನ್ನು ನಿಲ್ಲಿಸುವಂತೆ ಆಗ್ರಹಿಸಲಾಗಿದೆ.

ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜಾ ಮೈಯುಂಗ್‌ ಭಾರತ ಮತ್ತು ವಿಯೆಟ್ನಾಂ ಪ್ರವಾಸಕ್ಕೆ ತೆರಳುವ ಮುನ್ನಾ ಈ ಕ್ಷಿಪಣಿ ಉಡಾವಣೆಗಳು ನಡೆದಿವೆ.ಅಮೆರಿಕ ಮತ್ತು ಜಪಾನ್‌ ಸೇನೆಗಳು ಕೂಡ ಈ ಕ್ಷಿಪಣಿ ಉಡಾವಣೆಗಳನ್ನು ದೃಢಪಡಿಸಿವೆ. ಅಮೆರಿಕದ ಇಂಡೋ-ಪೆಸಿಫಿಕ್‌ ಕಮಾಂಡ್‌ ತನ್ನ ದೇಶ ಮತ್ತು ಮೈತ್ರಿ ರಾಷ್ಟ್ರಗಳ ರಕ್ಷಣೆಗೆ ಬದ್ಧವಾಗಿದೆ ಎಂದು ತಿಳಿಸಿದೆ.

ಜಪಾನ್‌ ರಕ್ಷಣಾ ಸಚಿವಾಲಯವು ಈ ಪರೀಕ್ಷೆಗಳು ಪ್ರಾದೇಶಿಕ ಹಾಗೂ ಜಾಗತಿಕ ಶಾಂತಿಗೆ ಧಕ್ಕೆ ತರುತ್ತವೆ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದೆ. ಸಿನ್ಪೋ ಉತ್ತರ ಕೊರಿಯಾದ ಪೂರ್ವ ಕರಾವಳಿ ನಗರವಾಗಿದ್ದು, ಅಲ್ಲಿ ಪ್ರಮುಖ ನೌಕಾ ನಿರ್ಮಾಣ ಶಿಪ್‌ಯಾರ್ಡ್‌ ಇದೆ. ಇಲ್ಲಿ ಜಲಾಂತರ್ಗಾಮಿ ನೌಕೆಗಳ ನಿರ್ಮಾಣ ನಡೆಯುತ್ತದೆ. ಈ ಕ್ಷಿಪಣಿಗಳನ್ನು ಜಲಾಂತರ್ಗಾಮಿ ನೌಕೆಯಿಂದ ಅಥವಾ ಭೂಮಿ ಆಧರಿತ ಲಾಂಚರ್‌ಗಳಿಂದ ಉಡಾಯಿಸಲಾಗಿದೆಯೇ ಎಂಬುದನ್ನು ದಕ್ಷಿಣ ಕೊರಿಯಾ ಪರಿಶೀಲಿಸುತ್ತಿದೆ.

ಜಲಾಂತರ್ಗಾಮಿ ನೌಕೆಯಿಂದ ಉಡಾಯಿಸಿದ್ದರೆ, ಅದು ನಾಲ್ಕು ವರ್ಷಗಳ ಬಳಿಕದ ಮೊದಲ ಪರೀಕ್ಷೆಯಾಗಲಿದೆ. ನೀರಿನಡಿಯಲ್ಲಿ ಕ್ಷಿಪಣಿ ಉಡಾವಣೆ ಸಾಮರ್ಥ್ಯ ಹೆಚ್ಚಿದರೆ, ಅವುಗಳನ್ನು ಮುಂಚಿತವಾಗಿ ಪತ್ತೆ ಹಚ್ಚುವುದು ಕಷ್ಟವಾಗುತ್ತದೆ ಎಂಬ ಕಾರಣದಿಂದ ಇದು ಆತಂಕಕಾರಿ ಬೆಳವಣಿಗೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ವರ್ಷದಲ್ಲಿ ಉತ್ತರ ಕೊರಿಯಾದಿಂದ ನಡೆದ ಶಸಾ್ತ್ರಸ್ತ್ರ ಪರೀಕ್ಷೆಗಳ ಸರಣಿಯಲ್ಲಿ ಇದು ಇತ್ತೀಚಿನ ಘಟನೆಯಾಗಿದೆ. ಇತ್ತೀಚೆಗೆ ಮುಂಚೂಣಿ ನೌಕೆಯಿಂದ ಕ್ಷಿಪಣಿ ಪರೀಕ್ಷೆಗಳನ್ನು ವೀಕ್ಷಿಸಿದ್ದಾಗಿ ತಿಳಿಸಲಾಗಿತ್ತು. ಅದಕ್ಕೂ ಮೊದಲು ಕ್ಲಸ್ಟರ್‌ ಬಾಂಬ್‌ ಸಾಮರ್ಥ್ಯದ ಕ್ಷಿಪಣಿಗಳು ಸೇರಿದಂತೆ ಹೊಸ ಶಸಾ್ತ್ರಸ್ತ್ರಗಳ ಪರೀಕ್ಷೆ ನಡೆಸಲಾಗಿದೆ. ಕಳೆದ ತಿಂಗಳು ಅಮೆರಿಕದ ಭೂ ಭಾಗ ತಲುಪಬಲ್ಲ ಘನ ಇಂಧನ ಕ್ಷಿಪಣಿ ಎಂಜಿನ್‌ ಪರೀಕ್ಷೆ ನಡೆಸಲಾಗಿದೆ ಎಂದು ಹೇಳಲಾಗಿದೆ.

2019ರಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಜೊತೆ ನಡೆದ ಅಣು ಮಾತುಕತೆ ವಿಫಲವಾದ ಬಳಿಕ, ಕಿಮ್‌ ಜಾಂಗ್‌ ಉನ್‌ ತನ್ನ ಅಣು ಹಾಗೂ ಕ್ಷಿಪಣಿ ಶಕ್ತಿಯನ್ನು ವಿಸ್ತರಿಸಲು ಒತ್ತು ನೀಡುತ್ತಿದ್ದಾರೆ. ಟ್ರಂಪ್‌ ಮತ್ತೆ ಮಾತುಕತೆ ಆರಂಭಿಸಲು ಆಸಕ್ತಿ ತೋರಿದರೂ, ಅಣ್ವಸ್ತ್ರ ನಿಶ್ಯಸ್ತ್ರೀಕರಣವನ್ನು ಪೂರ್ವ ಷರತ್ತಾಗಿ ಒಪ್ಪಿಕೊಳ್ಳಲು ಉತ್ತರ ಕೊರಿಯಾ ಸಿದ್ಧವಿಲ್ಲ. ಈ ಮಧ್ಯೆ ಮೇ ತಿಂಗಳಲ್ಲಿ ಟ್ರಂಪ್‌ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನಡುವೆ ನಡೆಯಲಿರುವ ಸಭೆಯನ್ನು ಗಮನದಲ್ಲಿಟ್ಟುಕೊಂಡು,

ಉತ್ತರ ಕೊರಿಯಾ ತನ್ನ ಮಾತುಕತೆ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಈ ಪರೀಕ್ಷೆಗಳನ್ನು ನಡೆಸುತ್ತಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.ಉತ್ತರ ಕೊರಿಯಾದ ಅಣು ಉತ್ಪಾದನಾ ಕೇಂದ್ರಗಳಲ್ಲಿ ಚಟುವಟಿಕೆಗಳು ಹೆಚ್ಚುತ್ತಿರುವುದನ್ನು ಬುಧವಾರ ದೃಢಪಡಿಸಲಾಗಿತ್ತು.

ತಜ್ಞರ ಪ್ರಕಾರ, ಉತ್ತರ ಕೊರಿಯಾ ಯೊಂಗ್ಬ್ಯೋನ್‌ ಅಣು ಸಂಕೀರ್ಣವನ್ನು ವಿಸ್ತರಿಸುವ ಜೊತೆಗೆ ಹೊಸ ಯುರೇನಿಯಂ ಸಂವರ್ಧನಾ ಘಟಕಗಳನ್ನು ನಿರ್ಮಿಸುತ್ತಿದೆ. ಕಳೆದ ವರ್ಷ, ದಕ್ಷಿಣ ಕೊರಿಯಾದ ಏಕೀಕರಣ ಸಚಿವರು ಉತ್ತರ ಕೊರಿಯಾದ ನಾಲ್ಕು ಯುರೇನಿಯಂ ಸಂವರ್ಧನಾ ಘಟಕಗಳು ದಿನನಿತ್ಯ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದರು.

RELATED ARTICLES

Latest News