ಹೊಸಪೇಟೆ,ಏ.19- ತಾಲೂಕಿನ ಡಾಣಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, 21ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬೈಕ್‌ನಲ್ಲಿದ್ದ ಸುಜಾತ (40) ಮತ್ತು ದುರ್ಗಪ್ಪ(55) ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.
ಕಾರು, ಕೆಎಸ್‌ಆರ್‌ಟಿಸಿ ಬಸ್, ಲಾರಿ, ಬೈಕ್ ನಡುವೆ ಈ ಸರಣಿ ಅಪಘಾತ ನಡೆದಿದ್ದು, ವಾಹನಗಳಿಗೆ ಡಿಕ್ಕಿ ಹೊಡೆದ ರಭಸಕ್ಕೆ ಬೆಳ್ಳುಳ್ಳಿ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ರಸ್ತೆ ಪಕ್ಕ ಉರುಳಿ ಬಿದ್ದಿದೆ.ಗಾಯಗೊಂಡವರನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಿಗ್ಗೆ 9.20 ರ ಸುಮಾರಿನಲ್ಲಿ ಹೊಸಪೇಟೆ ಮಾರ್ಗವಾಗಿ ಬೆಳ್ಳುಳ್ಳಿ ತುಂಬಿದ ಲಾರಿ ಚಿತ್ರದುರ್ಗಕ್ಕೆ ತೆರಳುತ್ತಿತ್ತು. ಲಾರಿಚಾಲಕ ವೇಗವಾಗಿ ಚಲಿಸುತ್ತಿದ್ದಾಗ ಬಿಎಂಎಂ ಫ್ಯಾಕ್ಟರಿ ಬಳಿ ಎದುರಿಗೆ ಬರುತ್ತಿದ್ದ ಬೈಕ್‌ಗೆ ಗುದ್ದಿ ತಪ್ಪಿಸಿಕೊಳ್ಳಲು ಹೋಗಿ ಕಾರು, ಕೆಎಸ್‌ಆರ್‌ಟಿಸಿ ಬಸ್ಸಿಗೆ ಡಿಕ್ಕಿ ಹೊಡೆದು ರಸ್ತೆ ಬದಿ ಉರುಳಿಬಿದ್ದಿದೆ.
ಈ ಅವಘಡದಲ್ಲಿ ಬಹುತೇಕ ಎಲ್ಲಾ ವಾಹನಗಳು ಜಖಂಗೊಂಡಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಹಿರಿಯ ಪೊಲೀಸ್ ಅಧಿಕಾರಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದರು.ಈ ಬಗ್ಗೆ ಮರಿಯಮನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
