ಬೆಂಗಳೂರು, ಜೂ. 4- ಬಿ.ಕೆ.ಹರಿಪ್ರಸಾದ್ ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ರಾಜ್ಯದಲ್ಲಿ ಮತ್ತೊಂದು ಶಕ್ತಿಕೇಂದ್ರ ಸೃಷ್ಟಿಯಾದಂತಾಗಿದೆ. ಇಂದು ಬೆಳಗ್ಗೆಯಿಂದಲೂ ಕಾಂಗ್ರೆಸ್‌ನ ಸಚಿವರ ಶಾಸಕರ ದಂಡು, ಹರಿಪ್ರಸಾದ್ ಅವರ ಮನೆಗೆ ಭೇಟಿ ನೀಡಿ ಶುಭ ಹಾರೈಸುತ್ತಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಕೃಷ್ಣಭೈರೇಗೌಡ, ಎಂ.ಬಿ.ಪಾಟೀಲ್, ಯು.ಟಿ.ಖಾದರ್, ಭೈರತಿ ಸುರೇಶ್, ಮಾಜಿ ಸಚಿವ ಸಂತೋಷ್ ಲಾಡ್ ಸೇರಿದಂತೆ ಹಲವಾರು ಮಂದಿ ಬಿ.ಕೆ.ಹರಿಪ್ರಸಾದ್ ಮನೆಗೆ ಭೇಟಿ ನೀಡಿದ್ದಾರೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಈಗಾಗಲೇ ಮೂರ್ನಾಲ್ಕು ಶಕ್ತಿಕೇಂದ್ರಗಳಿವೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರುವವರೆಗೂ ಪಕ್ಷ ಹಾಗೂ ಆಡಳಿತದ ಮೇಲೆ ಅವರ ಹಿಡಿತ ಪ್ರಬಲವಾಗಿತ್ತು. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿರುವುದರಿಂದ ಮತ್ತೊಂದು ಶಕ್ತಿ ಕೇಂದ್ರ ಸಕ್ರಿಯವಾಗಿತ್ತು. ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯದವರೇ ಆಗಿರುವುದರಿಂದ ಅನಾಯಸವಾಗಿ ಮತ್ತೊಂದು ಶಕ್ತಿ ಕೇಂದ್ರ ಚಾಲ್ತಿಯಲ್ಲಿತ್ತು.
ಬಿ.ಕೆ.ಹರಿಪ್ರಸಾದ್ ಕಾಂಗ್ರೆಸ್ ಹೈಕಮಾಂಡ್ ನಾಯಕರ ಆಪ್ತ ಬಳಗದಲ್ಲಿದ್ದರು. ಮತ್ತೊಂದು ಶಕ್ತಿಕೇಂದ್ರವಾಗಿ ಗುರುತಿಸಿಕೊಂಡಿರಲಿಲ್ಲ. ಒಂದು ಕಾಲದಲ್ಲಿ ಡಿ.ಕೆ.ಶಿವಕುಮಾರ್ ಅವರ ಆಪ್ತ ಮಿತ್ರರಾಗಿದ್ದರು. ರಾಜಕೀಯ ಬೆಳವಣಿಗೆಗಳಲ್ಲಿ ತೆರೆಮರೆಯಲ್ಲಿ ವಿರೋಧಿ ಗುಂಪಿನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇಬ್ಬರೂ ಮೂಲ ಕಾಂಗ್ರೆಸ್ಸಿಗರು ಮತ್ತು ಪಕ್ಷದ ನಿಷ್ಠಾವಂತ ಶಿಸ್ತಿನ ಶಿಪಾಯಿಗಳು ಎಂಬುದರಲ್ಲಿ ಎರಡು ಮಾತಿಲ್ಲ.
ನಿನ್ನೆ ಅಧ್ಯಕ್ಷರಾಗಿ ನೇಮಕವಾಗಿರುವ ಬಿ.ಕೆ.ಹರಿಪ್ರಸಾದ್, ಇಂದು ಮಾಧ್ಯಮಗಳಿಗೆ ಹೇಳಿಕೆ ನೀಡಿ ಅಧಿಕಾರ ಬೇಕಾದವರು ಡಿ.ಕೆ.ಶಿವಕುಮಾರ್ ಬಳಿ ಹೋಗಲಿ, ಪಕ್ಷದ ಸಂಘಟನೆಯನ್ನು ಸದೃಢಗೊಳಿಸಬೇಕು ಎಂಬ ಆಸಕ್ತಿ ಹೊಂದಿರುವವರು ತಮೊಂದಿಗೆ ಬರಲಿ ಎಂದು ನೇರವಾಗಿ ಹೇಳಿದ್ದಾರೆ.
ಪಕ್ಷದ ಅಧ್ಯಕ್ಷ ಸ್ಥಾನ ಮಹತ್ವದ ಜವಾಬ್ದಾರಿಯಾಗಿದೆ. ನೂತನ ಅಧ್ಯಕ್ಷರನ್ನು ಭೇಟಿ ಮಾಡಲು ಸಾಲು ಸಾಲು ಮುಖಂಡರ ಹಿಂಡು ಹರಿಪ್ರಸಾದ್ ಅವರ ಮನೆಗೆ ಭೇಟಿ ನೀಡಿದರು.
